×
Ad

ಕಲಿಕೆ ಕೇವಲ ನಾಲ್ಕು ಗೋಡೆಗಳಿಗೆ ಸೀಮಿತವಾಗಬಾರದು: ಡಾ.ಎಂ.ಲೋಕೇಶ್

Update: 2018-03-04 19:33 IST

ಶಿವಮೊಗ್ಗ, ಮಾ. 4: ಕಲಿಕೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿರದೆ ಪ್ರಕೃತಿ ಮಧ್ಯೆ ಇದ್ದು ಕಲಿಯುವಂತಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅವರು ತಿಳಿಸಿದರು.

ಅವರು ಭಾನುವಾರ ಜಿಲ್ಲಾ ಸ್ಕೌಟ್ಸ್ ಭವನದಲ್ಲಿ, ಜಿಲ್ಲಾ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪರಿಸರದ ಬಗ್ಗೆ ತರಗತಿಯಲ್ಲಿ ಕಲಿಯುವುದಕ್ಕಿಂತ ನಿಸರ್ಗದ ಮಧ್ಯೆ ಇದ್ದು ನೋಡಿ ಕಲಿಯಬೇಕು. ಕಾಡಿನಲ್ಲಿ ಒಂದು ದಿನ ಕ್ಯಾಂಪ್ ಮಾಡಿದರೆ ಪರಿಸರ ಸಂರಕ್ಷಣೆ, ಪ್ರಾಣಿಗಳ ರಕ್ಷಣೆ ಕುರಿತು ಹೆಚ್ಚಿನ ಅರಿವು ಮೂಡಲು ಸಾಧ್ಯವಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಮೂಲಕ ಕೇವಲ ಪರಿಸರ ಸಂರಕ್ಷಣೆ ಇತ್ಯಾದಿಗಳ ಬಗ್ಗೆ ಮಾತ್ರವಲ್ಲದೆ ಸಾಮಾಜಿಕ ಪಿಡುಗುಗಳ ಬಗ್ಗೆಯೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡುತ್ತದೆ. ಇಲ್ಲಿ ಕಲಿತ ಅಂಶಗಳನ್ನು ಶಾಲಾ ಜೀವನಕ್ಕೆ ಮಾತ್ರ ಸೀಮಿತವಾಗಿರಿಸದೆ ಮುಂದಿನ ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದು ಅವರು ಕಿವಿ ಮಾತು ನೀಡಿದರು.

ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‍ನಲ್ಲಿ ಸಕ್ರಿಯವಾಗಿದ್ದುದನ್ನು ನೆನಪಿಸಿದ ಜಿಲ್ಲಾಧಿಕಾರಿ ಅವರು, ತಮ್ಮ ಗೆಳೆಯರನ್ನೂ ಸ್ಕೌಟ್ಸ್ ಮತ್ತು ಗೈಡ್ಸ್ ಗೆ ಸೇರುವಂತೆ ಪ್ರೇರೇಪಿಸಬೇಕು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಮಾತ್ರವಲ್ಲದೆ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಂಯಮ, ಪರೋಪಕಾರ ಮನೋಭಾವ ಬೆಳೆಯಲು ಸ್ಕೌಟ್ಸ್ ಮತ್ತು ಗೈಡ್ಸ್ ಪೂರಕವಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಜಿಲ್ಲಾಧಿಕಾರಿ ಅವರು ಈ ಸಂದರ್ಭದಲ್ಲಿ ಜಿಲ್ಲಾ ಪುರಸ್ಕಾರ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರಾಜ್ಯಮಟ್ಟದ ಪರೀಕ್ಷೆ ಬರೆಯಲು ಅರ್ಹತೆ ಪಡೆದಿರುವ ಜಿಲ್ಲೆಯ ವಿವಿಧ ತಾಲೂಕುಗಳ 1257 ಸ್ಕೌಟ್, ಗೈಡ್ಸ್ ಮತ್ತು ಕಬ್ಸ್ ಅಂಡ್ ಬುಲ್‍ಬುಲ್ ಅಭ್ಯರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಹೆಚ್.ಡಿ.ರಮೇಶ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶೋಭಾ, ಪ್ರಾಂಶುಪಾಲರು, ಹೊಂಗಿರಣ ಸ್ಕೂಲ್ ಆಫ್ ಎಕ್ಸೆಲೆನ್ಸ್ ಅಮ್ಟೆಕೊಪ್ಪ, ಉಮೇಶ ಶಾಸ್ತ್ರಿ ಜಿಲ್ಲಾ ಆಯುಕ್ತರು (ಸ್ಕೌಟ್), ಶಕುಂತಲಾ ಚಂದ್ರಶೇಖರ ಜಿಲ್ಲಾ ಆಯುಕ್ತರು (ಗೈಡ್), ಕೆ.ಪಿ.ಬಿಂದುಕುಮಾರ್ ಜಿಲ್ಲಾ ಕಾರ್ಯದರ್ಶಿ, ಪ್ರದೀಪ್ ಜಿ.ಶಾಸ್ತ್ರಿ ಜಿಲ್ಲಾ ಖಜಾಂಚಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News