ಹನೂರು: ಮಾ.5 ರಿಂದ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವ
ಹನೂರು,ಮಾ.4 : ಪಟ್ಟಣದ ಆದಿದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವವು ಮಾರ್ಚ್ 5 ರಿಂದ ಇಂದಿನಿಂದ 8 ರವರೆಗೆ ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಮಾ.5ರಂದು ಜಾಗರ ಸಮರ್ಪಣೆ, 6ರಂದು ತಂಪುಜ್ಯೋತಿ ಕಾರ್ಯಕ್ರಮ, 7 ರಂದು ಬಾಯಿಬೀಗ ಹಾಗೂ 8 ರಂದು ಪ್ರಾತಃಕಾಲ ಅಗ್ನಿಕುಂಡ ದರ್ಶನ ಕಾರ್ಯಕ್ರಮಗಳು ಜರುಗಲಿವೆ. ಈ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ.
ಪಟ್ಟಣದ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನವು 230 ವರ್ಷದ ಇತಿಹಾಸ ಹೊಂದಿದ್ದು, ಹಿಂದಿನಿಂದಲೂ ಕೋಮು ಸೌಹರ್ದತೆಯ ಹಾಗೂ ಸಾಮರಸ್ಯತೆಯ ಸಂಕೇತವಾಗಿ ಈ ಜಾತ್ರಾ ಮಹೋತ್ಸವವು ನಡೆದುಕೊಂಡು ಬಂದಿದೆ. ದೇಗುಲದಲ್ಲಿ ಪ್ರತಿ ನಿತ್ಯ ಪೂಜೆ ಪುನಸ್ಕಾರಗಳು ನಡೆದುಕೊಂಡು ಬರುತ್ತಿದ್ದು, ಪ್ರತಿ ಮಂಗಳವಾರ ವಿಶೇಷ ಪೂಜೆ ನಡೆಯುತ್ತದೆ.
ಜಾತ್ರಾ ವಿಶೇಷತೆ: ಈಗಾಗಲೇ 15 ದಿನ ಮುಂಚಿತವಾಗಿಯೇ ತಮಟೆ ಸಾರುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ. ದೇವಸ್ಥಾನದ ಅರ್ಚಕರಿಗೆ ವಿಧಿ ವಿಧಾನಗಳ ಮೂಲಕ ಕಂಕಣ ಕಟ್ಟಿದ್ದು, ದೇವಸ್ಥಾನದ ಮುಂಭಾಗ ಮೂರು ಕವಡಿನ ಒಂದು ಕಂಬವನ್ನು ಹಾಕಲಾಗಿದೆ. ಅದರ ಮೇಲೆ ಮಣ್ಣಿನ ಮಡಿಕೆಯ ಕರಗವನ್ನು ಇಟ್ಟು ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ಈ ಕಂಬವೇ ಬೆಟ್ಟಳ್ಳಿ ಮಾರಮ್ಮನ ಪತಿದೇವರು ಎಂಬ ಪ್ರತೀತಿ ಇದೆ. ಈ ಕಂಬ ಹಾಕಿದ ದಿನದಿಂದ ಪ್ರತಿ ದಿನ ರಾತ್ರಿ ರಂಗಕುಣಿತ ಪ್ರಾರಂಭವಾಗಿದೆ. ಈ ದಿನದಿಂದಲೇ ಗ್ರಾಮದಲ್ಲಿ ಮಾಂಸ, ಸಾಂಬಾರ ಪದಾರ್ಥಗಳ ಒಗ್ಗರಣೆ ಹಾಗೂ ಕರುಕಲು ಆಗುವಂತಹ ತಿಂಡಿ, ತಿನಿಸು ಹಾಗೂ ಇನ್ನಿತರ ಕರಕಲು ಆಹಾರವನ್ನು ತ್ಯಜಿಸಲಾಗಿದೆ. ಇದರಿಂದ ಪಟ್ಟಣದಲ್ಲಿ ಮಾಂಸದ ಅಂಗಡಿಗಳು, ಮಾಂಸಾಹಾರಿ ಹೋಟೆಲ್‍ಗಳು ಮುಚ್ಚಿದ್ದು, ಸಂಪೂರ್ಣವಾಗಿ ಮಾಂಸಹಾರ ರಹಿತ ಪಟ್ಟಣವಾಗಿ ಮಾರ್ಪಟ್ಟಿದೆ. ಮತ್ತೊಂದು ವಿಶೇಷತೆಯೆನೆಂದರೆ ಈ ಜಾತ್ರಾ ಮಹೋತ್ಸವವು ಸಾಮರಸ್ಯತೆಯ ಸಂಕೇತವಾಗಿರುವುದರಿಂದ ಪಟ್ಟಣದಲ್ಲಿ ವಾಸವಿರುವ ಮುಸ್ಲಿಮರು ಕೂಡ ಮಾಂಸಾಹಾರವನ್ನು ತ್ಯಜಿಸಿದ್ದು, ಜಾತ್ರಾ ಮಹೋತ್ಸವಕ್ಕೆ ಸಂಪೂರ್ಣ ಸಹಕಾರ ನೀಡಿದ್ದಾರೆ.
ಜಾಗರ ಸಮರ್ಪಣೆ: ಹಬ್ಬದ ಮೊದಲ ದಿನ ದೇವಸ್ಥಾನದಲ್ಲಿ ನಡುರಾತ್ರಿ ಜಾಗರ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ಈ ಜಾಗರ ಸಮರ್ಪಣೆಗೆ ವಾರದ ಮುಂಚೆಯಿಂದಲೇ ಪ್ರತಿನಿತ್ಯ ನೀರುಣಿಸಿ ಪೂಜೆ ಸಲ್ಲಿಸುವುದರ ಮೂಲಕ ಬೆಳೆಸಿದ ಧಾನ್ಯಗಳ ಪೈರುಗಳನ್ನು (ಜಾಗರ) ದೇವಸ್ಥಾನಕ್ಕೆ ಭಕ್ತಿ ಭಾವದಿಂದ ಅರ್ಪಣೆ ಮಾಡಲಾಗುತ್ತದೆ. ಜಾಗರವನ್ನು ಹೊತ್ತ ಹೆಣ್ಣು ಮಕ್ಕಳು, ಮಹಿಳೆಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಮೇತ ಮಧ್ಯರಾತ್ರಿ ವೇಳೆಗೆ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆಯನ್ನು ಸಲ್ಲಿಸಿ ಜಾಗರವನ್ನು ದೇವಿಗೆ ಸಮರ್ಪಣೆ ಮಾಡಲಾಗುತ್ತದೆ. 2ನೇ ದಿನ ತಂಪುಜ್ಯೋತಿ ಕಾರ್ಯಕ್ರಮ ನಡೆಯಲಿದೆ. ಪಟ್ಟಣದ ಕುಟುಂಬಗಳಿಂದ ದೇವಿಗೆ ತಂಪುಜ್ಯೋತಿಯನ್ನು ಸಮರ್ಪಣೆ ಮಾಡಲಾಗುತ್ತದೆ.
ಬಾಯಿಬೀಗ ಕಾರ್ಯಕ್ರಮ: ಜಾತ್ರೆಯ ಮೂರನೇ ದಿನ ಬುಧವಾರ ಬಾಯಿಬೀಗ ನಡೆಯಲಿದ್ದು, ಈಗಾಗಲೇ ಪಟ್ಟಣಣದಲ್ಲಿ 60ಕ್ಕೂ ಹೆಚ್ಚು ಭಕ್ತರು ಬಾಯಿಬೀಗ ಹಾಕಿಸಿಕೊಳ್ಳುವುದಕ್ಕೆ ಹರಕೆ ಹೊತ್ತಿದ್ದು, ಮಾಲೆಯನ್ನು ಧರಿಸಿ ಪ್ರತಿನಿತ್ಯ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸುತ್ತಿದ್ದಾರೆ. ಹರಕೆ ಹೊತ್ತ ಭಕ್ತರು ಬಾಯಿಬೀಗವನ್ನು ಹಾಕಿಕೊಳ್ಳುವ ಮೂಲಕ ದೇವಿಯ ಹರಕೆಯನ್ನು ತೀರಿಸುತ್ತಾರೆ. ಜಾತ್ರ ಮಹೋತ್ಸವದ ಕೊನೆಯ ದಿನ ಅಗ್ನಿಕುಂಡ ದರ್ಶನ ಕಾರ್ಯಕ್ರಮವಿದೆ. ಅಂದು ಬೆಳಿಗ್ಗೆ ಪ್ರಾತಃಕಾಲದಲ್ಲಿ ಬೆಟ್ಟಳ್ಳಿ ಮಾರಮ್ಮನಿಗೆ ವಿಧಿ ವಿಧಾನಗಳ ಮೂಲಕ ವಿಶೇಷ ಪೂಜೆಯನ್ನು ಸಲ್ಲಿಸಿ ಅಗ್ನಿಕುಂಡವನ್ನು ಎತ್ತಲಾಗುತ್ತದೆ. ಈ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ.