ಚಾಮರಾಜನಗರ: ಶುದ್ದ ನೀರಿನ ಘಟಕಕ್ಕೆ ಶಾಸಕರಿಂದ ಚಾಲನೆ
ಚಾಮರಾಜನಗರ,ಮಾ.4: ಪಟ್ಟಣದ 5ನೇ ವಾರ್ಡಿನಲ್ಲಿ 2016-17ನೇ ಸಾಲಿನ 14ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನದಲ್ಲಿ ನೂತನವಾಗಿ ಅಳವಡಿಸುತ್ತಿರುವ ಶುದ್ದ ನೀರಿನ ಘಟಕಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಸರ್ಕಾರವು ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಈ ಮೂಲಕ ಪಟ್ಟಣದ ಎಲ್ಲಾ ವಾರ್ಡುಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕವನ್ನು ತೆರೆಯಲಾಗುತ್ತಿದ್ದು, ಇಂದು ಅಲ್ಪಸಂಖ್ಯಾತರು ವಾಸಿಸುವ 6ನೇ ವಾರ್ಡಿನಲ್ಲಿ ಶುದ್ದ ನೀರಿನ ಘಟಕವನ್ನು ತೆರೆದಿದ್ದು ನಾಗರೀಕರ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ.
ಪ್ರತಿಯೊಬ್ಬ ವ್ಯಕ್ತಿಯೂ ಸಹ ಶುದ್ದ ನೀರನ್ನು ಕುಡಿಯಬೇಕೆಂಬ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಪ್ರತಿಯೊಂದು ಗ್ರಾಮ, ಪಟ್ಟಣದಲ್ಲಿ ಶುದ್ದ ನೀರಿನ ಘಟಕವನ್ನು ತೆರೆದಿದ್ದು ಈ ಮೂಲಕ ಆರೋಗ್ಯವಂತ ಸದೃಢ ಸಮಾಜ ನಿರ್ಮಿಸಲು ಮುಂದಾಗಿದೆ ಎಂದರು.
ಪಟ್ಟಣದ ಎಲ್ಲಾ ವಾರ್ಡುಗಳು, ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲೂ ಘಟಕಗಳನ್ನು ತೆರೆದಿದ್ದು, ಜನರಿಗೆ ಶುದ್ದವಾದ ನೀರು ಇಂದು ದೊರೆಯುತ್ತಿದೆ. ಹಲವಾರು ರೋಗಗಳಿಂದ ಮುಕ್ತಿ ಹೊಂದಲು ಸಾದ್ಯವಾಗುತ್ತಿದೆ. ಅಗತ್ಯವಿರುವೆಡೆ ಮತ್ತಷ್ಟು ಕಡೆ ಶುದ್ದ ನೀರಿನ ಘಟಕಗಳನ್ನು ತೆರೆಯುವುದಾಗಿ ಶಾಸಕರುತಿಳಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣದ ವಾರ್ಡ್ ನಂ.2ರಲ್ಲಿ ಬಸವೇಸ್ವರ ದೇವಾಲಯ ಹಾಗೂ ರಾ.ಹೆ.ಯಿಂದ ರಹಮತ್ ನಗರದಿಂದ ವಾರ್ಡ್ ನಂ.3 ಮತ್ತು 4ರ ಬಡಾವಣೆಗಳ 90ಲಕ್ಷರೂ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ಹಾಗೂ ವಾರ್ಡ್ ನಂ.5ರ ಅಲ್ಪಸಂಖ್ಯಾತರ ಬಡಾವಣೆಗಳಲ್ಲಿ 80ಲಕ್ಷರೂ ವೆಚ್ಚದಲ್ಲಿ ಚರಂಡಿ ಅಭಿವೃದ್ದಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಪಟ್ಟಣದ ಅಲ್ಪಸಂಖ್ಯಾತರ ವಿವಿಧ ವಾರ್ಡುಗಳಲ್ಲಿ ಇಂದು ಸುಸಜ್ಜಿತವಾಗಿ ರಸ್ತೆ ಮತ್ತು ಚರಂಡಿ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದ್ದು, ಈ ಮೂಲಕ ಸರ್ಕಾರವು ಎಲ್ಲಾ ಸಮುದಾಯದ ಜನರು ವಾಸಿಸುವ ಬಡಾವಣೆಗಳಲ್ಲಿ ಉತ್ತಮ ರಸ್ತೆ, ಚರಂಡಿ ನಿರ್ಮಿಸುವ ಮೂಲಕ ಅಭಿವೃದ್ದಿ ಕಾಮಗಾರಿಗಳನ್ನು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರಸ್ತೆಗಳು ಅಭಿವೃದ್ದಿಯಾಗಲಿದ್ದು, ನಾಗರಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಉಮೇಶ್, ನಗರಸಭೆ ಅಧ್ಯಕ್ಷೆ ಶೋಭಾ ಪುಟ್ಟಸ್ವಾಮಿ, ಚುಡಾ ಅಧ್ಯಕ್ಷ ಸುಹೇಲ್ ಖಾನ್, ಮಾಜಿ ಅಧ್ಯಕ್ಷ ಸಯ್ಯಧ್ ರಫಿ, ನಗರಸಭಾ ಸದಸ್ಯರಾದ ಶಾಬಾನಾ ಆಟೀಕ್, ರೇಣುಕಾ, ಇಮ್ರಾನ್, ಮಾಜಿ ಸದಸ್ಯ ಮಹಮದ್ ಅಸ್ಗರ್ ಮುನ್ನಾ, ಮುಖಂಡರಾದ ಸಮೀಉಲ್ಲಾ ಖಾಮ್, ಅಯೂಬ್ ಖಾನ್, ಮುಸ್ಲಿಂ ಧರ್ಮಗುರುಗಳು ಸೇರಿದಂತೆ ವಾರ್ಡಿನ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.