×
Ad

ವಿಧಾನಸಭೆಯ ಪಾವಿತ್ರ್ಯತೆ ಹಾಳಾಗಿದೆ: ರಾಮೇಗೌಡ

Update: 2018-03-04 20:57 IST

ಮಂಡ್ಯ, ಮಾ.4: ಮಾಫಿಯಾ, ರೌಡಿ ಹಿನ್ನೆಲೆಯ ರಾಜಕಾರಣಿಗಳಿಂದ ವಿಧಾನಸಭೆ ಪಾವಿತ್ರ್ಯತೆ ಹಾಳಾಗಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‍ನ ನಿಕಟಪೂರ್ವ ಗೌರವ ಕಾರ್ಯದರ್ಶಿ ಸಿ.ಕೆ.ರಾಮೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಯುವ ಬರಹಗಾರರ ಬಳಗದ ವತಿಯಿಂದ ನಗರದ ಗಾಂಧಿಭವನದಲ್ಲಿ ರವಿವಾರ ನಡೆದ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ, ಸ್ತ್ರೀವಾದಿ ಲೇಖಕಿ ಡಾ.ವಿಜಯಾ ದಬ್ಬೆ, ನಾಡೋಜ ದೇಜಗೌ ಸಂಸ್ಮರಣೆ ಹಾಗೂ ಕನ್ನಡ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕೆಂಗಲ್ ಹನುಮಂತಯ್ಯ, ಎಸ್.ನಿಜಲಿಂಗಪ್ಪ, ಎಚ್.ಕೆ.ವೀರಣ್ಣಗೌಡ, ಕೆ.ವಿ.ಶಂಕರೇಗೌಡ, ಕೆ.ಎಸ್.ಪುಟ್ಟಣ್ಣಯ್ಯ, ಕಡಿದಾಳ್ ಮಂಜಪ್ಪ, ಶಾಂತವೇರಿ ಗೋಪಾಲಗೌಡ ಅವರಂತಹ ಧೀಮಂತ ರಾಜಕಾರಣಿಗಳು ಶಕ್ತಿಸೌಧದಲ್ಲಿರುತ್ತಿದ್ದರು. ಅವರಲ್ಲಿ ಅಭಿವೃದ್ಧಿಯ ಚಿಂತನೆಗಳಿದ್ದವು. ದೂರದೃಷ್ಟಿ ಇತ್ತು. ಈಗ ವಿಧಾನಸೌಧ ರೌಡಿಗಳ ತಾಣವಾಗಿದೆ ಎಂದು ಅವರು ವಿಷಾದಿಸಿದರು.

ಮತದಾರರು, ವಿದ್ಯಾರ್ಥಿ ಯುವಜನರು ಪ್ರಸ್ತುತ ಅಧೋಗತಿಗೆ ಹೋಗುತ್ತಿರುವ ರಾಜಕಾರಣವನ್ನು ಸರಿಪಡಿಸುವ ಜವಾಬ್ಧಾರಿಯನ್ನು ತೆಗೆದುಕೊಳ್ಳಬೇಕಾಗಿದೆ. ಹಣ, ಆಮಿಷಗಳಿಗೆ ಒಳಗಾಗದೆ ಯೋಗ್ಯರನ್ನು ಚುಣಾಯಿಸಬೇಕಾಗಿದೆ ಎಂದು ಅವರು ಕರೆ ನೀಡಿದರು.

ವಿದ್ಯಾರ್ಥಿಗಳ ಗುರಿ ಸಾಧನೆಗೆ ಇಬ್ಬರು ಶತ್ರುಗಳು ಅಡ್ಡಗಾಲಾದ್ದಾರೆ. ಒಂದು ಮೊಬೈಲ್ ಮತ್ತೊಂದು ಟಿವಿ, ಮೊಬೈಲ್‍ನಲ್ಲಿ ಒಳ್ಳೆಯ ವಿಚಾರಗಳಿಗಿಂತ ಕೆಟ್ಟ ವಿಚಾರಗಳೇ ಹೆಚ್ಚು ತುಂಬಿಕೊಂಡಿವೆ. ನಿಮ್ಮ ಎಲ್ಲಾ ಭಾವನೆಗಳಿಗೆ ಅಕ್ಷರ ರೂಪ ಕೊಡಿ. ನಾವು ಬರೆಯುವಾಗಿ ಭಾವನೆಗಳು ಮೂಡುತ್ತವೆ. ಬರವಣಿಗೆಯಲ್ಲಿ ಪ್ರೀತಿ, ಬಾಂಧವ್ಯ ಇರುತ್ತದೆ. ಇದನ್ನು ವಿದ್ಯಾರ್ಥಿಗಳು ಅನುಭವಕ್ಕೆ ತಂದುಕೊಳ್ಳುವಂತೆ ತಿಳಿಸಿದರು.

ವಿದ್ಯಾರ್ಥಿಗಳು ಸಾಹಿತ್ಯ ಕೃತಿಗಳನ್ನು ಓದಬೇಕು. ಇದರಿಂದವ್ಯಕ್ತಿತ್ವ ವಿಕಸನ, ಆತ್ಮಸ್ಥೈರ್ಯ, ಸರಳತೆ ಮೈಗೂಡಿಕೊಳ್ಳುತ್ತದೆ. ಆದಷ್ಟೂ ವ್ಯಾಟ್ಸ್ ಅಪ್, ಫೇಸ್‍ಬುಕ್ ಚಟುವಟಿಕೆಯಿಂದ ದೂರವಿರಬೇಕು ಎಂದು ಅವರು ಸಲಹೆ ನೀಡಿದರು.

ಅಧ್ಯಕ್ಷತೆವಹಿಸಿದ್ದ ಸಾಹಿತಿ ಡಾ.ಮಳಲಿ ವಸಂತಕುಮಾರ್, ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ, ಲೇಖಕಿ ವಿಜಯಾ ದಬ್ಬೆ, ಸಾಹಿತಿ ಡಾ.ದೇ.ಜವರೇಗೌಡ (ದೇಜಗೌ) ಅವರ ಸಾಮಾಜಿಕ ಕೊಡುಗೆ, ಆದರ್ಶಗಳನ್ನು ಸ್ಮರಿಸಿದರು.

ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ  ವಿದ್ಯಾರ್ಥಿಗಳಿಗೆ ಕನ್ನಡ ಪ್ರತಿಭಾ ಪುರಸ್ಕಾರ ಪ್ರದಾನಿಸಲಾಯಿತು.
ಕಾವೇರಿ ಕಣಿವೆ ರೈತ ಒಕ್ಕೂಟದ ಸಂಚಾಲಕ ಎಂ.ಬಿ.ನಾಗಣ್ಣಗೌಡ, ಬಿಜೆಪಿ ನಗರ ಅಧ್ಯಕ್ಷ ಎಚ್.ಆರ್.ಅರವಿಂದ್, ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ, ಪತ್ರಕರ್ತ ಟಿ.ಸುರೇಶ್ ಮಂಗಲ, ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News