ಕೆ.ವಿ.ಶಂಕರಗೌಡ ಆಧುನಿಕ ಮಂಡ್ಯದ ಶಿಲ್ಪಿ: ಪ್ರೊ.ಸಿದ್ದರಾಜು ಆಲಕೆರೆ
ಮಂಡ್ಯ, ಮಾ.4: ಕೆ.ವಿ.ಶಂಕರಗೌಡರು (ಕೆವಿಎಸ್) ಆಧುನಿಕ ಮಂಡ್ಯವನ್ನು ನಿರ್ಮಿಸಿದ ಶಿಲ್ಪಿಯಾಗಿದ್ದಾರೆ ಎಂದು ಜಿಲ್ಲಾ ಜಾಗೃತ ಅಂಕಣಕಾರರ ವೇದಿಕೆಯ ಅಧ್ಯಕ್ಷ ಪ್ರೊ.ಸಿ.ಸಿದ್ದರಾಜು ಆಲಕೆರೆ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಜಾಗೃತ ಅಂಕಣಕಾರರ ವೇದಿಕೆ ವತಿಯಿಂದ ಕೆ.ವಿ.ಶಂಕರಗೌಡ ಅವರ ಪುಣ್ಯಸ್ಮರಣೆ ಅಂಗವಾಗಿ ನಗರದ ಪಿ.ಇ.ಎಸ್ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿರುವ ಕೆವಿಎಸ್ ಪ್ರತಿಮೆಗೆ ರವಿವಾರ ಮಾಲಾರ್ಪಣೆ ಮಾಡಿ ಮಾತನಾಡಿದರು.
ಕನ್ನಂಬಾಡಿ ಕಟ್ಟೆ ನಿರ್ಮಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಕಾರಣಕರ್ತರಾಗಿ ಮಂಡ್ಯವನ್ನು ಜಿಲ್ಲೆಯನ್ನಾಗಿ ಮಾಡಿ ಮಂಡ್ಯದ ನಿರ್ಮಾಪಕರು ಎನಿಸಿಕೊಂಡರು ಎಂದು ಅವರು ಸ್ಮರಿಸಿದರು. ನಂತರ, ಕೆ.ವಿ.ಶಂಕರಗೌಡರು ದೇಶಕ್ಕೆ ಮಾದರಿಯಾದ ರೈತರ ಸೊಸೈಟಿ ಕಟ್ಟಡ, ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯ, ಜಿಲ್ಲಾ ಸಹಕಾರ ಬ್ಯಾಂಕ್, ಪಿಇಎಸ್ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಆಧುನಿಕ ಮಂಡ್ಯದ ಶಿಲ್ಪಿಯಾದರು ಎಂದು ಅವರು ಹೇಳಿದರು.
ಕೆವಿಎಸ್ ಸ್ಥಾಪಿಸಿದ ಸಂಸ್ಥೆಗಳು ಜಿಲ್ಲೆಯ ರೈತಾಪಿ ಮಕ್ಕಳ ಆರ್ಥಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಿ ಅವರ ಬಾಳು ಹಸನಾಗಲು ಕಾರಣವಾಗಿವೆ. ಸಾಂಸ್ಕೃತಿಕ ರಾಜಕಾರಣಿಯಾಗಿದ್ದ ಶಂಕರಗೌಡರು ರಾಜಕೀಯ ಮುತ್ಸದ್ಧಿಯಾಗಿದ್ದರು ಎಂದು ಅವರು ತಿಳಿಸಿದರು.
ಶಿಕ್ಷಣ ಸಚಿವರಾಗಿ ಶಿಕ್ಷಣ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ಜಾರಿಗೆ ತಂದು ಸಚಿವ ಸ್ಥಾನಕ್ಕೊಂದು ಗೌರವ ತಂದುಕೊಟ್ಟು ಕುವೆಂಪುರವರಿಂದ ನಿತ್ಯ ಸಚಿವ ಎನಿಸಿಕೊಂಡರು. ತಮ್ಮ ರಾಜಕೀಯ ಗರಡಿಯಲ್ಲಿ ಜಿ.ಮಾದೇಗೌಡ, ಎಚ್.ಡಿ.ಚೌಡಯ್ಯ, ಸಿಂಗಾರಿಗೌಡ, ಜಿ.ಎಸ್.ಬೊಮ್ಮೇಗೌಡ, ಗೌಡಗೆರೆ ನಾಗಪ್ಪ ಮುಂತಾದ ರಾಜಕೀಯ ನಾಯಕರನ್ನು ಹುಟ್ಟುಹಾಕಿದರು ಎಂದು ಅವರು ನುಡಿದರು.
ಶಂಕರಗೌಡರು ಕಲೆ, ಸಾಹಿತ್ಯ, ಶಿಕ್ಷಣ, ಸಹಕಾರ, ಸಿನೆಮಾ, ರಾಜಕೀಯ, ರಂಗಭೂಮಿ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಬಹುಮುಖ ಪ್ರತಿಭೆಯಾಗಿದ್ದರು. ಅವರ ಆದರ್ಶಗಳನ್ನು ಇಂದಿನ ರಾಜಕಾರಣಿಗಳು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಅವರು ಸಲಹೆ ನೀಡಿದರು.
ವೇದಿಕೆಯ ಉಪಾಧ್ಯಕ್ಷ ಸಿ.ಕೆ.ಗಂಗೇಗೌಡ, ಕಾರ್ಯದರ್ಶಿ ತೂಬಿನಕೆರೆ ಲಿಂಗರಾಜು ಹಾಗೂ ನಿರ್ದೇಶಕ ಹೊಳಲು ಶ್ರೀಧರ್ ಹಾಜರಿದ್ದರು.