ಶಿವಮೊಗ್ಗ: ಅವ್ಯವಸ್ಥೆಯ ಆಗರವಾಗಿರುವ ಕಸ ವಿಲೇವಾರಿ ಘಟಕ; ಜಾನುವಾರುಗಳ ಹೊಟ್ಟೆ ಸೇರುತ್ತಿದೆ ಘನತ್ಯಾಜ್ಯ
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಮಾ. 4: ಘನತ್ಯಾಜ್ಯ ವಿಲೇವಾರಿಗೆ ಸಹಕಾರಿಯಾಗಲೆಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು, ನಗರದ ಗೋಪಾಲಗೌಡ ಬಡಾವಣೆಯಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿ ಮಹಾನಗರ ಪಾಲಿಕೆ ಆಡಳಿತಕ್ಕೆ ದಾನವಾಗಿ ನೀಡಿದ್ದ ಅತ್ಯಾಧುನಿಕ ಘನತ್ಯಾಜ್ಯ ವಿಲೇವಾರಿ ಘಟಕವು, ಅಸಮರ್ಪಕ ಮೇಲುಸ್ತುವಾರಿಯಿಂದ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ.
ಪ್ರಸ್ತುತ ಈ ಘಟಕದ ಕಾರ್ಯನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಘಟಕದ ಸುತ್ತಮುತ್ತಲು ಪ್ಲಾಸ್ಟಿಕ್, ಪೇಪರ್ ಸೇರಿದಂತೆ ಘನತ್ಯಾಜ್ಯದ ರಾಶಿ ಎಲ್ಲೆಂದರಲ್ಲಿ ಬಿದ್ದಿದೆ. ಎಲ್ಲದಂಕ್ಕಿತ ಮುಖ್ಯವೆಂದರೇ ಘಟಕದಲ್ಲಿರುವ ಪ್ಲಾಸ್ಟಿಕ್, ಪೇಪರ್ ಮತ್ತಿತರ ಘನ್ಯಾಜ್ಯವು ಸುತ್ತಮುತ್ತಲಿನ ಗ್ರಾಮಗಳ ದನ, ಎಮ್ಮೆಗಳ ಹೊಟ್ಟೆ ಸೇರುತ್ತಿದೆ.
ಪ್ರಸ್ತುತ ಬೇಸಿಗೆ ಸುಡು ಬಿಸಿಲಿನಲ್ಲಿ ಜಾನುವಾರುಗಳಿಗೆ ಹಸಿರು ಮೇವು ಸಿಗುವುದು ಕಷ್ಟಕರವಾಗಿದೆ. ಮೇವಿಗೆ ಪರದಾಡುವಂತಾಗಿದೆ. ಮತ್ತೊಂದೆಡೆ ಜಾನುವಾರುಗಳು ತಮ್ಮ ಹೊಟ್ಟೆ ಹಸಿವು ನೀಗಿಸಿಕೊಳ್ಳಲು, ಘಟಕದ ಬಳಿ ಬಿದ್ದಿರುವ ಘನತ್ಯಾಜ್ಯಗಳನ್ನು ತಿನ್ನುತ್ತಿರುವ ಕರುಣಾಜನಕ ದೃಶ್ಯ ಕಂಡು ಬರುತ್ತಿದೆ.
ಮತ್ತೊಂದೆಡೆ ಇಡೀ ಆವರಣವು ದುರ್ನಾತ ಬೀರುತ್ತಿದ್ದು, ಕ್ರಿಮಿಕೀಟಗಳ ಸೃಷ್ಟಿಯ ತಾಣವಾಗಿ ಪರಿವರ್ತಿತವಾಗಿದೆ. ಹೇಳುವವರು ಕೇಳುವವರ್ಯಾರು ಇಲ್ಲದಂತಾಗಿದೆ. ಘನತ್ಯಾಜ್ಯ ವಿಲೇವಾರಿಗೊಳಿಸಿ ನಗರದ ಸ್ವಾಸ್ಥ್ಯ ಕಾಪಾಡಬೇಕಾದ ಈ ಘಟಕವೀಗ ಅಕ್ಷರಶಃ ಅಸ್ವಾಸ್ಥ್ಯ ಕೇಂದ್ರವಾಗಿ ಪರಿವರ್ತಿತವಾಗಿದೆ. ಘಟಕದ ಸುತ್ತಮುತ್ತಲಿನ ನಿವಾಸಿಗಳು ನಾನಾ ರೀತಿಯ ತೊಂದರೆಗೊಳಗಾಗುವಂತಾಗಿದೆ.
'ಇಷ್ಟೆಲ್ಲ ಅವ್ಯವಸ್ಥೆ ಕಂಡುಬರುತ್ತಿದ್ದರೂ ಇಲ್ಲಿಯವರೆಗೂ ಪಾಲಿಕೆ ಆಡಳಿತ ಇತ್ತ ಚಿತ್ತ ಹರಿಸುವ ಗೋಜಿಗೆ ಹೋಗಿಲ್ಲ. ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಕಣ್ಮುಚ್ಚಿ ಕುಳಿತುಕೊಂಡಿದೆ. ದಾನವಾಗಿ ಪಡೆದಿದ್ದನ್ನು ಯಾವ ರೀತಿಯಲ್ಲಿಟ್ಟುಕೊಳ್ಳಬೇಕೆಂಬ ಕನಿಷ್ಠ ಸೌಜನ್ಯವೂ ಆಡಳಿತಕ್ಕಿಲ್ಲದಿರುವುದು ನಿಜಕ್ಕೂ ದುರ್ದೈವದ ಸಂಗತಿಯಾಗಿದೆ' ಎಂದು ಸ್ಥಳೀಯ ನಿವಾಸಿಗಳು ದೂರುತ್ತಾರೆ.
ಭಾನುವಾರ ಸ್ಥಳೀಯ ಬಡಾವಣೆಯ ನಿವಾಸಿ ಡಿ.ಜೆ.ನಾಗರಾಜ್‍ರವರು ಘಟಕದ ಅವ್ಯವಸ್ಥೆಯ ದೃಶ್ಯಾವಳಿಗಳನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದು 'ಶಿವಮೊಗ್ಗ ಮೀಡಿಯಾ' ಎಂಬ ವ್ಯಾಟ್ಸಾಪ್ ಗ್ರೂಪ್‍ನಲ್ಲಿ ಹರಿಬಿಟ್ಟಿದ್ದಾರೆ. ಘಟಕದಲ್ಲಿರುವ ಅವ್ಯವಸ್ಥೆ ಸರಿಪಡಿಸಬೇಕು. ಈ ನಿಟ್ಟಿನಲ್ಲಿ ತುರ್ತು ಕ್ರಮಕೈಗೊಳ್ಳಬೇಕೆಂದು ಪಾಲಿಕೆ ಆಡಳಿತಕ್ಕೆ ಒತ್ತಾಯಿಸಿದ್ದಾರೆ.
ಕೊಡುಗೆ: ಕಳೆದ ಸುಮಾರು ಎರಡು ವರ್ಷಗಳ ಹಿಂದೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ನಗರದ ಘನತ್ಯಾಜ್ಯ ವಿಲೇವಾರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಪಾಲಿಕೆ ಆಡಳಿತಕ್ಕೆ ಕೊಡುಗೆಯಾಗಿ ಮ್ಯಾಗ್ನೆಟಿಕ್ ತಂತ್ರಜ್ಞಾನ ಆಧಾರಿತ ವಿಲೇವಾರಿ ಘಟಕವನ್ನು ನೀಡಿತ್ತು. ಇದಕ್ಕೆ ಸುಮಾರು 25 ಲಕ್ಷ ರೂ. ವೆಚ್ಚ ಮಾಡಿತ್ತು.
'ಬೈರಾಲಿಸಿಸ್ ತಂತ್ರಜ್ಞಾನ ಆಧಾರಿತ ಈ ಘಟಕದಲ್ಲಿ ಕಸವನ್ನು ರಸವನ್ನಾಗಿ ಪರಿವರ್ತಿಸಬಹುದಾಗಿದೆ. ಘನತ್ಯಾಜ್ಯವನ್ನು ಅತ್ಯಂತ ಸುಲಭವಾಗಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡಬಹುದಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಈ ಘಟಕದಲ್ಲಿ ಪರಿಸರ ಮಾಲಿನ್ಯಕ್ಕೆ ಆಸ್ಪದವಾಗದಂತೆ ಹಾಗೂ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡುವ ಅತ್ಯಾಧುನಿಕ ವ್ಯವಸ್ಥೆಯಿದೆ. ಪ್ರತಿನಿತ್ಯ ಸುಮಾರು 3 ಟನ್ ಕಸ ವಿಲೇವಾರಿ ಮಾಡುವ ಸಾರ್ಮಥ್ಯ ಈ ಘಟಕಕ್ಕಿದೆ' ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಘದ ಮುಖಂಡ ಡಿ.ಎಸ್.ಅರುಣ್ ಮಾಹಿತಿ ನೀಡುತ್ತಾರೆ.
ಭಾನುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈ ಘಟಕದಲ್ಲಿ ಘನತ್ಯಾಜ್ಯ ವಿಲೇವಾರಿಯಿಂದ ಹೊರಬರುವ ಬೂದಿಯನ್ನು ಗೊಬ್ಬರವಾಗಿ ಬಳಕೆ ಮಾಡಬಹುದಾಗಿದೆ. ಹಾಗೆಯೇ ಪ್ಲಾಸ್ಟಿಕ್ ವಿಲೇವಾರಿಯಿಂದ ಉತ್ಪಾದಿಯಾಗುವ ದ್ರಾವಣವನ್ನು ರಸ್ತೆ ಡಾಂಬರೀಕರಣಕ್ಕೂ ಉಪಯೋಗಿಸಬಹುದಾಗಿದೆ. ಕಡಿಮೆ ವಿಸ್ತೀರ್ಣ ಹಾಗೂ ಜನವಸತಿ ಪ್ರದೇಶಗಳಲ್ಲಿಯೇ ಈ ಘಟಕ ಸ್ಥಾಪನೆ ಮಾಡಬಹುದಾಗಿದೆ. ಶಿವಮೊಗ್ಗದಂತಹ ನಗರಗಳಿಗೆ ಈ ರೀತಿಯ ಘನತ್ಯಾಜ್ಯ ವಿಲೇವಾರಿ ಘಟಕಗಳು ಅತ್ಯಂತ ಮಹತ್ವ ಹಾಗೂ ಅನಿವಾರ್ಯವಾಗಿತ್ತು. ಈ ಕಾರಣದಿಂದ ಪ್ರಾಯೋಗಿಕವಾಗಿ ಗೋಪಾಳ ಬಡಾವಣೆಯಲ್ಲಿ ಈ ಘಟಕವನ್ನು ಸಂಸ್ಥೆ ಸ್ಥಾಪಿಸಿತ್ತು. ನಂತರ ಪಾಲಿಕೆ ಆಡಳಿತಕ್ಕೆ ಕೊಡುಗೆಯಾಗಿ ನೀಡಿತ್ತು. ಈ ಘಟಕದ ಸಂಪೂರ್ಣ ನಿರ್ವಹಣೆಯನ್ನು ಪಾಲಿಕೆ ಆಡಳಿತವೆ ಮಾಡಬೇಕಾಗಿತ್ತು. ಈ ಕುರಿತಂತೆ ಒಪ್ಪಂದ ಕೂಡ ಮಾಡಿಕೊಳ್ಳಲಾಗಿತ್ತು. ಆದರೆ ಈ ಘಟಕದ ಕಾರ್ಯನಿರ್ವಹಣೆ ಸಮರ್ಪಕವಾಗಿ ನಡೆಯದಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿಯಾಗಿದೆ' ಎಂದು ಡಿ.ಎಸ್.ಅರುಣ್‍ರವರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.
'ನಿರ್ವಹಣೆಯತ್ತ ಗಮನಹರಿಸಲಿ'
'ಗೋಪಾಳ ಗೌಡ ಬಡಾವಣೆಯಲ್ಲಿರುವ ಮ್ಯಾಗ್ನಟಿಕ್ ತಂತ್ರಜ್ಞಾನ ಆಧಾರಿತ ಕಸ ವಿಲೇವಾರಿ ಘಟಕವು ಇಡೀ ರಾಜ್ಯಕ್ಕೆ ಮಾದರಿಯಾಗಬೇಕಾಗಿತ್ತು. ಅತ್ಯಂತ ಕಡಿಮೆ ವೆಚ್ಚದಲ್ಲಿ ಸುಲಭವಾಗಿ ಘನತ್ಯಾಜ್ಯ ವಿಲೇವಾರಿ ಮಾಡುವ ತಂತ್ರಜ್ಞಾನ ಈ ಘಟಕದಲ್ಲಿದೆ. ಆದರೆ ಪಾಲಿಕೆ ಆಡಳಿತದ ಅಸಮರ್ಪಕ ಮೇಲ್ವಿಚಾರಣೆಯಿಂದ ಈ ಘಟಕವು ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿ, ಘನತ್ಯಾಜ್ಯವು ಜಾನುವಾರುಗಳ ಹೊಟ್ಟೆ ಸೇರುತ್ತಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ. ಇನ್ನಾದರೂ ಪಾಲಿಕೆ ಆಡಳಿತ ಈ ಘಟಕದ ಅವ್ಯವಸ್ಥೆ ಸರಿಪಡಿಸಿ, ಸುಸಜ್ಜಿತವಾಗಿಟ್ಟುಕೊಳ್ಳುವತ್ತ ಗಮನ ಹರಿಸಬೇಕಾಗಿದೆ' ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಘದ ಮುಖಂಡ ಡಿ.ಎಸ್.ಅರುಣ್ ಹೇಳಿದ್ದಾರೆ.
'ನಿರ್ಲಕ್ಷ್ಯ ಧೋರಣೆ ಸರಿಯಲ್ಲ' : ನಿವಾಸಿ ಡಿ.ಜೆ.ನಾಗರಾಜ್
'ಶಿವಮೊಗ್ಗ ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿ ರೂಪಿಸುವುದಾಗಿ ಹೇಳಿ ನೂರಾರು ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಆದರೆ ಈಗಿರುವ ಕನಿಷ್ಠ ವ್ಯವಸ್ಥೆಯನ್ನು ಪಾಲಿಕೆ ಆಡಳಿತ ಸರ್ಮಕವಾಗಿ ನಿರ್ವಹಣೆ ಮಾಡಲು ಆಗುತ್ತಿಲ್ಲ. ಇದಕ್ಕೆ ಗೋಪಾಳಗೌಡ ಬಡಾವಣೆಯಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕ ಸಾಕ್ಷಿಯಾಗಿದೆ. ಪಾಲಿಕೆಯ ನಿರ್ಲಕ್ಷ್ಯ, ಬೇಜವಾಬ್ದಾರಿ ಧೋರಣೆಯಿಂದ ಇಡೀ ಘಟಕ ಅವ್ಯವಸ್ಥೆಯ ಆಗರವಾಗಿದೆ. ರೋಗ ಹರಡುವ ತಾಣವಾಗುತ್ತಿದೆ. ಜಾನುವಾರುಗಳ ಸಾವಿನ ತಾಣವಾಗಿ ಪರಿವರ್ತಿತವಾಗುತ್ತಿದೆ. ಇಂತಹ ಸಣ್ಣ ಘಟಕದ ಮೇಲುಸ್ತುವಾರಿ ಸಮರ್ಪಕವಾಗಿ ಮಾಡಲು ಆಗದ ಪಾಲಿಕೆಯು ಇನ್ನು ಸ್ಮಾರ್ಟ್ ಸಿಟಿ ಯೋಜನೆಯನ್ನು ಹೇಗೆ ಅನುಷ್ಠಾನ ಮಾಡುತ್ತದೆ ಎಂಬುವುದು ಯಕ್ಷ ಪ್ರಶ್ನೆಯಾಗಿದೆ' ಎಂದು ಗೋಪಾಳಗೌಡದ ನಿವಾಸಿ ಡಿ.ಜೆ.ನಾಗರಾಜ್‍ರವರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ.