ಕೊಳ್ಳೇಗಾಲ: ಬೃಹತ್ ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರ
ಕೊಳ್ಳೇಗಾಲ, ಮಾ.04: ಸಮಾಜದಿಂದ ನಾವು ಪಡೆಯುವ ಋಣದ ಒಂದು ಭಾಗವನ್ನಾದರೂ ತೀರಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಹಿರಿಯ ವೈದ್ಯರಾದ ಡಾ. ಎಸ್. ಶಿವರುದ್ರಸ್ವಾಮಿ ತಿಳಿಸಿದರು.
ಪಟ್ಟಣದ ಗೀತಾ ಪ್ರೈಮರಿ ಶಾಲೆ ಆವರಣದಲ್ಲಿ ಎನ್. ಮಹೇಶ್ ಜನಸೇವಾ ಕೇಂದ್ರದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಬೃಹತ್ ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ತಪಾಸಣಾ ಶಿಬಿರ ಚುನಾವಣೆ ಗಿಮಿಕ್ ಅಲ್ಲ. ಕಳೆದ 6 ತಿಂಗಳುಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಚುನಾವಣೆ ನಂತರವೂ ಮುಂದುವರೆಯಲಿದೆ ಎಂದು ಬಿಎಸ್‍ಪಿ ರಾಜ್ಯಾಧ್ಯಕ್ಷ ಎನ್. ಮಹೇಶ್ ತಿಳಿಸಿದರು.
ಕ್ಷೇತ್ರದಲ್ಲಿ ಆರೋಗ್ಯ ಮತ್ತು ನಿರುದ್ಯೋಗ ಸಮಸ್ಯೆ ನಿವಾರಣೆ ಹಿನ್ನೆಲೆಯಲ್ಲಿ 6 ಆರೋಗ್ಯ ತಪಾಸಣಾ ಶಿಬಿರಗಳ ಮೂಲಕ 6ಸಾವಿರ ವಿವಿಧ ಕಾಯಿಲೆಗಳ ರೋಗಿಗಳ ಉಚಿತ ತಪಾಸಣೆ ಮತ್ತು ಔಷದಿ ಸೌಲಭ್ಯ, 300 ಜನರ ನೇತ್ರ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 400 ಬಾಟೆಲ್ ರಕ್ತ ಸಂಗ್ರಹಿಸಿ, ಜೀವ ಉಳಿಸುವ ಕೆಲಸವನ್ನು ಮಾಡಲಾಗಿದೆ ಎಂದು ವಿವರಿಸಿದರು.
ಎನ್. ಮಹೇಶ್ ಜನಸೇವಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 80 ಖಾಸಗಿ ಕಂಪನಿಗಳು 6,100ಜನ ನಿರುದ್ಯೋಗಿಗಳು ಭಾಗವಹಿಸಿ 2800 ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸುವ ಮೂಲಕ ಆ ಕುಟುಂಬಗಳಿಗೆ ನಿರಂತರ ಆದಾಯ ದೊರೆಯುವಂತಾಗಿದೆ ಎಂದರು.
ಎಲ್ಲರೂ ಆನೆ ಗುರುತಿಗೆ ಮತಹಾಕುವ ಮೂಲಕ ಈ ಭಾರಿ ನಾನು ಆಯ್ಕೆಯಾಗಿ ನಿಮ್ಮೆಲ್ಲರ ಸೇವೆ ಮಾಡಲು ಅವಕಾಶ ಮಾಡಬೇಕು ಎಂದು ಮನವಿ ಮಾಡಿದರು.
ಗುರುಮಲ್ಲೇಶ್ವರ ದಾಸೋಹ ಮಠದ ಶಿವಪ್ಪಸ್ವಾಮಿಗಳು, ಜೇತವನ ಬುದ್ಧ ವಿಹಾರ ಜ್ಞಾನಲೋಕ ಬಂತೇಜಿ, ನಗರಸಭೆ ಸದಸ್ಯ ರಾಮಕೃಷ್ಣ, ನಾಗಸುಂದ್ರಮ್ಮ ಜಗದೀಶ್, ರಂಗಸ್ವಾಮಿ, ಬಿಎಸ್‍ಪಿ ಜಿಲ್ಲಾಧ್ಯಕ್ಷ ಬಾಗಳಿ ರೇವಣ್ಣ, ಉಪಾಧ್ಯಕ್ಷ ಸೋಮಣ್ಣ ಉಪ್ಪಾರ್, ವಕೀಲರ ಸಂಘದ ಅಧ್ಯಕ್ಷ ಡಿ.ಎಸ್. ಬಸವರಾಜು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ, ರಾಜೇಂದ್ರ, ಬಸಂತ್‍ಮೋಟಾಯ್, ಡಾ.ಶಿವಕುಮಾರ್ ಅರವಿಂದ ಕಣ್ಣಿನ ಆಸ್ಪತ್ರೆ, ಕೊಯಮತ್ತೂರು, ಪಾಲಾಕ್ಷ ಆಸ್ಪತ್ರೆ, ಮೈಸೂರು, ಟಿ.ನರಸೀಪುರ ಮಗು ಫೌಂಡೇಷನ್, ಬಹುಜನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ವೈದ್ಯರ ತಂಡ ಶಿಬಿರದಲ್ಲಿ ಪಾಲ್ಗೊಂಡಿದ್ದರು.