×
Ad

ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು: ಸಚಿವ ಎಚ್. ಆಂಜನೇಯ

Update: 2018-03-04 22:05 IST

ದಾವಣಗೆರೆ,ಮಾ.4: ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಕಾರ್ಯನಿರ್ವಹಿಸುವ ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಪತ್ರಕರ್ತರಿಗೆ ಸಲಹೆ ನೀಡಿದರು.

ಭಾನುವಾರ ನಗರದ ಸನ್‍ಶೈನ್ ಪುರಂತರ ಆಸ್ಪತ್ರೆ ನವೀಕರಣದ ಮೊದಲ ವರ್ಷದ ಸಂಭ್ರಮ ಉದ್ಘಾಟನೆ ಅಂಗವಾಗಿ ದಾವಣಗೆರೆ ವರದಿಗಾರರ ಕೂಟ ಹಾಗೂ ಸನ್‍ಶೈನ್ ಆಸ್ಪತ್ರೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತರು ಹಾಗೂ ರಾಜಕಾರಣಿಗಳು ಸದಾ ಒತ್ತಡದ ನಡುವೆ ಕಾರ್ಯನಿರ್ವಹಿಸುತ್ತಾರೆ. ಹಾಗಾಗಿ, ಆರೋಗ್ಯದತ್ತ ಖಾಳಜಿ ಕಡಿಮೆ. ಈ ನಿಟ್ಟಿನಲ್ಲಿ ಸನ್‍ಸೈನ್ ಆಸ್ಪತ್ರೆ ಪತ್ರಕರ್ತರ ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದ ಅವರು, ಇಂದಿನ ದಿನಗಳಲ್ಲಿ ವೈದ್ಯರು ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸಲು ಸಿದ್ದರಿಲ್ಲ. ಎಲ್ಲರಿಗೂ ಹಣ ಮಾಡುವ ತವಕ. ಈ ಸಂದರ್ಭ ಸನ್‍ಸೈನ್ ವೈದ್ಯರು ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.

ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್. ಮಲ್ಲೇಶ್ ಮಾತನಾಡಿ, ಪತ್ರಕರ್ತರ ಆರೋಗ್ಯದ ದೃಷ್ಟಿಯಿಂದ ಈ ಶಿಬಿರ ಆಯೋಜಿಸಲಾಗಿದ್ದು, ಈಗಾಗಲೇ ಶಿಬಿರದಲ್ಲಿ 100ಕ್ಕೂ ಹೆಚ್ಚು ಪತ್ರಕರ್ತರು ಹಾಗೂ ಅವರ ಕುಟುಂಬ ವರ್ಗ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ ಎಂದ ಅವರು, ಅದೇರೀತಿ ಪತ್ರಕರ್ತರ ಭವನ ನಿರ್ಮಾಣಕ್ಕೆ ಅನುದಾನ ನೀಡಬೇಕು. ಹಾಗೂ ಮಾಧ್ಯಮ ಕಿಟ್ ವಿತರಣೆಯನ್ನು ಇನ್ನಷ್ಟು ವಿಸ್ತರಿಸಿ ಎಲ್ಲಾ ಪತ್ರಕರ್ತರಿಗೆ ದೊರೆಯುವಂತೆ ಮಾಡಬೇಕೆಂದು ಎಚ್. ಆಂಜನೇಯ ಅವರಲ್ಲಿ ಮನವಿ ಮಾಡಿದರು.

ಆಸ್ಪತ್ರೆಯ ಸಂಸ್ಥಾಪಕ ಡಾ. ವಿನಯ್ ಕುಮಾರ್ ಸಿಂಗ್ ಸ್ವಾಗತಿಸಿ ಪ್ರಾಸ್ಥಾವಿಕ ಮಾತನಾಡಿದರು. ಕೂಟದ ಪ್ರಧಾನ ಕಾರ್ಯದರ್ಶಿ ನಾಗರಾಜ್ ಬಡದಾಳ್, ಖಜಾಂಚಿ ತಾರಾನಾಥ್, ದುಬೈನ ಅನಿಫ್ ಸೇತ್, ಖಾಜಿಮುಲ್ಲಾ, ಹಿರಿಯ ಪತ್ರಕರ್ತರಾದ ಏಕಾಂತಪ್ಪ, ಇ.ಮಂಜುನಾಥ್ ಮತ್ತಿತರರಿದ್ದರು. ಮಾಲಾ ಪ್ರಾರ್ಥಿಸಿದರು. ಇದೇ ಸಂದರ್ಭ ಕೇವಲ 30 ರೂ. ನ ಆರೋಗ್ಯ ಕಾರ್ಡ್ ಬಿಡುಗಡೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News