ಮುಸ್ಲಿಮರು ಅಯೋಧ್ಯೆಯ ಮೇಲಿನ ಹಕ್ಕು ಬಿಟ್ಟು ಕೊಡದಿದ್ದಲ್ಲಿ ಭಾರತ ಇನ್ನೊಂದು ಸಿರಿಯಾ ಆಗಬಹುದು

Update: 2018-03-05 08:51 GMT

ಹೊಸದಿಲ್ಲಿ,ಮಾ.5 :  ರಾಮ ಮಂದಿರ ವಿಚಾರವನ್ನು ಆದಷ್ಟು ಬೇಗ ಇತ್ಯರ್ಥಗೊಳಿಸದೇ ಇದ್ದರೆ ಭಾರತ ಇನ್ನೊಂದು ಸಿರಿಯಾ ಆಗಿ ಪರಿವರ್ತಿತವಾಗಬಹುದು ಎಂದು  ಆರ್ಟ್ ಆಫ್ ಲಿವಿಂಗ್ ಸ್ಥಾಪಕ ಶ್ರೀ ಶ್ರೀ ರವಿಶಂಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಳೆದ ಕೆಲ ಸಮಯದಿಂದ ಈ ವಿವಾದ ಇತ್ಯರ್ಥಗೊಳಿಸಲು ಶ್ರಮಿಸುತ್ತಿರುವ ರವಿಶಂಕರ್ ಅವರು ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮೇಲಿನಂತೆ ಹೇಳಿದ್ದಾರೆ.

ಅಯೋಧ್ಯೆ ವಿವಾದದ ಬಗ್ಗೆ ಮಾತನಾಡುವಾಗ ಸಿರಿಯಾ ವಿಚಾರವನ್ನು ಪ್ರಸ್ತಾಪಿಸಿ “ಮುಸ್ಲಿಮರು ಅಯೋಧ್ಯೆ ಮೇಲೆ ತಮ್ಮ ಹಕ್ಕು ಸ್ಥಾಪಿಸುವುದನ್ನು ಸೌಹಾರ್ದತೆಯ ಸಂಕೇತವಾಗಿ ಬಿಟ್ಟು ಬಿಡಬೇಕು. ಅಯೋಧ್ಯೆ ಮುಸ್ಲಿಮರ ಧಾರ್ಮಿಕ ಸ್ಥಳವಲ್ಲ,” ಎಂದು ರವಿಶಂಕರ್ ಹೇಳಿದ್ದಾರೆ.

“ವಿವಾದಿತ ಸ್ಥಳವೊಂದರಲ್ಲಿ  ಪ್ರಾರ್ಥನೆ ಸಲ್ಲಿಸಲು ಇಸ್ಲಾಂ ಅನುಮತಿಸುವುದಿಲ್ಲ. ಶ್ರೀ ರಾಮ ದೇವರನ್ನು ಇನ್ನೊಂದು ಸ್ಥಳದಲ್ಲಿ ಹುಟ್ಟುವಂತೆ ಮಾಡಲಾಗುವುದಿಲ್ಲ,” ಎಂದು ಅವರು ಹೇಳಿದರು.

ವಿವಾದಿತ ಸ್ಥಳದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಆಸ್ಪತ್ರೆಯೊಂದನ್ನು ನಿರ್ಮಿಸಬೇಕೆಂಬ ಸಲಹೆಯನ್ನು ರವಿಶಂಕರ್ ತಳ್ಳಿ ಹಾಕಿದ್ದಾರೆ. “ಕೆಲ ಜನರಿಗೆ ವಿವಾದದಿಂದ ಲಾಭವಿರುವುದರಿಂದ ನನ್ನ ಸಂಧಾನ ಯತ್ನಗಳನ್ನು ಅವರು ವಿರೋಧಿಸುತ್ತಿದ್ದಾರೆ. ನ್ಯಾಯಾಲಯದ ತೀರ್ಪನ್ನು ಎಲ್ಲಾ ಜನರೂ ಒಪ್ಪುತ್ತಾರೆಂದು ಹೇಳಲಾಗದು,'' ಎಂದು ಅವರು ಹೇಳಿದ್ದಾರೆ.

ಕಳೆದೊಂದು ವರ್ಷದ ಅವಧಿಯಲ್ಲಿ ರವಿಶಂಕರ್ ಅವರು ಈ ವಿವಾದವನ್ನು ನ್ಯಾಯಾಲಯದ ಹೊರಗೆ ಪರಿಹರಿಸಬೇಕೆಂಬ ಯತ್ನದಲ್ಲಿ 500ಕ್ಕೂ ಹೆಚ್ಚು ಮಂದಿಯನ್ನು ವಿವಿಧೆಡೆ ವೈಯಕ್ತಿಕವಾಗಿ ಹಾಗೂ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿಸಿದ್ದಾರೆ.  ಆಲ್ ಇಂಡಿಯಾ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಉಚ್ಛಾಟಿತ ಸದಸ್ಯ  ಸೈಯದ್ ಸಲ್ಮಾನ್ ಹುಸೈನ್ ನದ್ವಿ ಅವರನ್ನೂ ಇತ್ತೀಚೆಗೆ ರವಿಶಂಕರ್ ಭೇಟಿಯಾಗಿದ್ದರು. ನದ್ವಿ ಅವರಿಗೆ ರವಿಶಂಕರ್ ಹಣ ನೀಡಿದ್ದಾರೆಂಬ ಆರೋಪಗಳೂ ಇದ್ದು ಈ ಆರೋಪವನ್ನು ರವಿಶಂಕರ್ ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News