ಮಡಿಕೇರಿ: ಸಣ್ಣಪುಟ್ಟ ಮಾರ್ಪಾಡುಗಳೊಂದಿಗೆ ನಗರಸಭೆಯ ಆಯ-ವ್ಯಯಕ್ಕೆ ಅನುಮೋದನೆ
ಮಡಿಕೇರಿ, ಮಾ.5: ಮಡಿಕೇರಿ ನಗರಸಭೆಯ 2018-19ನೇ ಸಾಲಿನ ಆಯ-ವ್ಯಯಕ್ಕೆ ಕೆಲವು ಸಣ್ಣಪುಟ್ಟ ಮಾರ್ಪಾಡುಗಳೊಂದಿಗೆ ಸೋಮವಾರ ಅನುಮೋದನೆ ನೀಡಲಾಯಿತು.
ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಅಪರಾಹ್ನ ನಗರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಫೆ.26ರಂದು ಮಂಡಿಸಿದ್ದ ಆಯ-ವ್ಯಯವನ್ನು ಕೆಲವು ಮಾರ್ಪಾಡುಗಳೊಂದಿಗೆ ಅಂಗೀಕರಿಸಲಾಯಿತು.
ಮಡಿಕೇರಿ ನಗರಸಭೆಗೆ 2018-19ನೇ ಸಾಲಿಗೆ 65.87 ಕೋಟಿ ನಿರೀಕ್ಷಿತ ಆದಾಯ ಹಾಗೂ 62.37 ಕೋಟಿ ನಿರೀಕ್ಷಿತ ವೆಚ್ಚ ಸೇರಿದಂತೆ 3.50 ಕೋಟಿ ಮಿಗತೆ ಬಜೆಟ್‍ನ್ನು ಮಂಡಿಸಲಾಗಿತ್ತು. ಬಜೆಟ್ ಸಭೆಗೆ ಅಲ್ಪಾವಧಿಯ ನೋಟೀಸ್ ನೀಡಿರುವ ಹಿನ್ನೆಲೆಯಲ್ಲಿ ಹಾಗೂ ನಿಯಮಾನುಸಾರ ಸಾರ್ವಜನಿಕರ ಸಭೆ ಕರೆದು ಸಲಹೆ ಪಡೆಯದೆ ಆಯ-ವ್ಯಯ ಸಿದ್ಧಪಡಿಸಿರುವುದನ್ನು ವಿರೋಧಿಸಿ ಅಂದಿನ ಸಭೆಯನ್ನು ವಿಪಕ್ಷ ಬಿಜೆಪಿಯ ಸರ್ವಸದಸ್ಯರು ಹಾಗೂ ಆಡಳಿತಾರೂಢ ಕಾಂಗ್ರೆಸ್‍ನ ಇಬ್ಬರು ಸದಸ್ಯರು ಬಹಿಷ್ಕರಿಸಿದ್ದರು.
ಆದರೆ ಸರಕಾರದ ಆದೇಶದಂತೆ ಫೆ.28ರೊಳಗಾಗಿ ಆಯ-ವ್ಯಯ ಮಂಡಿಸಬೇಕೆಂಬ ಹಿನ್ನೆಲೆಯಲ್ಲಿ ಅಧ್ಯಕ್ಷರು ಅಂದು ಆಯ-ವ್ಯಯ ಮಂಡಿಸಿದ್ದರಲ್ಲದೆ, ಮಾರ್ಪಾಡುಗಳಿದ್ದಲ್ಲಿ ಮುಂದಿನ ಸಭೆಯಲ್ಲಿ ಚರ್ಚಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು.
ಅದರಂತೆ ಮೂರು ದಿನಗಳ ಅವಧಿಯಲ್ಲಿ ಸಾರ್ವಜನಿಕರ ಸಲಹೆ ಪಡೆಯಲು ಸಭೆ ಕರೆಯಲಾಗಿತ್ತಾದರೂ, ಸಭೆಗೆ ಇಬ್ಬರು ಮಹಿಳೆಯರನ್ನು ಹೊರತುಪಡಿಸಿದರೆ ನಾಗರಿಕರಾರೂ ಭಾಗವಹಿಸದ ಹಿನ್ನೆಲೆಯಲ್ಲಿ ನಗರಸಭೆಯ ಆಡಳಿತ ಮುಜುಗರಕ್ಕೊಳಗಾಗಿತ್ತು. ಸೋಮವಾರ ಕರೆದಿದ್ದ ಆಯ-ವ್ಯಯ ಅನುಮೋದನಾ ಸಭೆಗೂ ವಿಪಕ್ಷ ಸದಸ್ಯರು ಭಾಗವಹಿಸುವ ಬಗ್ಗೆ ನಗರಸಭೆಯ ಆಡಳಿತ ಮಂಡಳಿ ಅನುಮಾನ ವ್ಯಕ್ತಪಡಿಸಿತ್ತಾದರೂ, ಸಭೆಗೆ ಎಲ್ಲಾ ಸದಸ್ಯರು ಹಾಜರಾಗುವ ಮೂಲಕ ಆರೋಗ್ಯಪೂರ್ಣ ಚರ್ಚೆ ನಡೆಯಿತು.
ನಗರಸಭೆಯ ಅಧೀನದಲ್ಲಿರುವ ಶಾಲಾ ಶಿಕ್ಷಕರಿಗೆ ಗೌರವಧನ ನೀಡಲು ಆಯ-ವ್ಯಯದಲ್ಲಿ ಅನುದಾನ ಮೀಸಲಿಡಬೇಕು. ರಾಜಾಸೀಟ್ ಬಳಿ ವಾಹನ ನಿಲುಗಡೆ ಶುಲ್ಕ ವಸೂಲು ಮಾಡುವುದನ್ನು ಹರಾಜು ಮಾಡುವ ಬದಲು ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮವಹಿಸುವಂತೆ ಸೂಚಿಸಬೇಕು. ಅಕ್ರಮವಾಗಿ ನಿರ್ಮಾಣವಾಗುವ ಕಟ್ಟಡಗಳಿಗೆ ವಿಧಿಸುವ ದಂಡ ಶುಲ್ಕವನ್ನು ಪ್ರತ್ಯೇಕ ಖಾತೆ ತೆರೆದು ಜಮಾ ಮಾಡಬೇಕು ಎಂಬಿತ್ಯಾದಿ ಸಲಹೆಗಳು ಸದಸ್ಯರಿಂದ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಹಾಗೂ ಪೌರಾಯುಕ್ತೆ ಬಿ.ಶುಭಾ ಹಾಜರಿದ್ದರು.