ಮಡಿಕೇರಿ: ಜಿಲ್ಲೆಯ ಎರಡೂ ಕ್ಷೇತ್ರಗಳ ಗೆಲುವಿಗೆ ಶ್ರಮಿಸಿ; ಚುಮ್ಮಿದೇವಯ್ಯ ಕರೆ
ಮಡಿಕೇರಿ, ಮಾ.6 : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ರಾಹುಲ್ ಗಾಂಧಿ ಬ್ರಿಗೇಡ್‍ನ ಪಾತ್ರ ಪ್ರಮುಖವಾಗಿದ್ದು, ಯುವ ಕಾರ್ಯಕರ್ತರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಬ್ರಿಗೇಡ್‍ನ ಜಿಲ್ಲಾಧ್ಯಕ್ಷರು ಹಾಗೂ ಮೂಡಾದ ಅಧ್ಯಕ್ಷರಾದ ಚುಮ್ಮಿ ದೇವಯ್ಯ ಕರೆ ನೀಡಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ರಾಹುಲ್ ಗಾಂಧಿ ಬ್ರಿಗೇಡ್‍ನ ಮಡಿಕೇರಿ ನಗರ ಸಮಿತಿಯ ನೂತನ ಅಧ್ಯಕ್ಷರಾದ ಹೆಚ್.ಎಸ್.ಯತೀಶ್ ಕುಮಾರ್ ಅವರ ಅಧಿಕಾರ ಸ್ವೀಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಹುಲ್ ಗಾಂಧಿ ಬ್ರಿಗೇಡ್‍ನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ವಿಶೇಷವಾದ ಜವಬ್ದಾರಿ ಇದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಪಣ ತೊಡಬೇಕೆಂದರು. ಈ ಬಾರಿಯ ಚುನಾವಣೆಯಲ್ಲಿ ಬ್ರಿಗೇಡ್ ನಿರ್ಣಾಯಕ ಪಾತ್ರ ವಹಿಸಲಿದ್ದು, ಕಾರ್ಯಕರ್ತರ ಶ್ರಮದಲ್ಲಿ ಪಕ್ಷದ ಗೆಲುವು ಅಡಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಎಂ.ಅಯ್ಯಪ್ಪ ಮತನಾಡಿ, ಬಹಳ ವರ್ಷಗಳ ಹಿಂದೆ ಇಂದಿರಾ ಬ್ರಿಗೇಡ್ ಸದಸ್ಯರಿಗೆ ರಾಜ್ಯ ಮಟ್ಟದಲ್ಲಿ ತರಬೇತಿ ನೀಡಿ ಪಕ್ಷದ ಬೆಳವಣಿಗೆಗೆ ಕ್ರಮ ಕೈಗೊಳ್ಳಲಾಗುತ್ತಿತ್ತು. ಇದೀಗ ರಾಹುಲ್ ಬ್ರಿಗೇಡ್‍ನ ನೂತನ ಸದಸ್ಯರಿಗೂ ತರಬೇತಿ ನೀಡಿ ಮುಂಬರುವ ವಿಧಾನಸಭಾ ಚುನಾವಣೆಯ ಜವಬ್ದಾರಿಯನ್ನು ನೀಡಬೇಕಾಗಿದೆ ಎಂದರು. ಮತ್ತಷ್ಟು ಹೊಸ ಮುಖಗಳಿಗೆ ಅವಕಾಶವನ್ನು ನೀಡುವ ಮೂಲಕ ಯುವ ಸಮೂಹ ಪಕ್ಷದಲ್ಲಿ ಕ್ರಿಯಾಶೀಲರಾಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಪರ ಯೋಜನೆಗಳ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದು, ರಾಜ್ಯ ಸರಕಾರದ ಸಾಧನೆಗಳನ್ನು
ಪ್ರತಿ ಮನೆ, ಮನೆಗಳಿಗೆ ತಿಳಿಸಬೇಕೆಂದರು. ಅಭ್ಯರ್ಥಿಗಳ ಹೆಸರು ಪ್ರಕಟವಾಗುವುದನ್ನೇ ಕಾಯುತ್ತಾ ಕಾಲಹರಣ ಮಾಡುವ ಬದಲು ಪಕ್ಷದ ಗೆಲುವಿಗಾಗಿ ಈಗಿನಿಂದಲೇ ಕಾರ್ಯೋನ್ಮುಖರಾಗಬೇಕೆಂದರು. ಹಗಲು ಕಾಂಗ್ರೆಸ್, ರಾತ್ರಿ ಬಿಜೆಪಿಯಾಗಿರದೆ ಪಕ್ಷವನ್ನು ತ್ಯಜಿಸಿ ಮನೆಯಲ್ಲಿರುವುದೇ ಉತ್ತಮ ಎಂದು ಅಯ್ಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ನಗರಸಭಾ ಸದಸ್ಯ ಹೆಚ್.ಎಂ.ನಂದಕುಮಾರ್ ಮಾತನಾಡಿ, ವಿರೋಧ ಪಕ್ಷದವರ ಟೀಕೆ, ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಳ್ಳದೆ ಧೈರ್ಯವಾಗಿ ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದರು. ರಾಹುಲ್ ಬ್ರಿಗೇಡ್‍ಗೆ ಹೆಚ್ಚಿನ ಸಂಖ್ಯೆಯ ಯುವಕರನ್ನು ನೇಮಿಸಿಕೊಳ್ಳುವಂತೆ ಸಲಹೆ ನೀಡಿದರು.
ಮೂಡಾ ಮಾಜಿ ಅಧ್ಯಕ್ಷರಾದ ಸುರಯ್ಯ ಅಬ್ರಾರ್ ಮಾತನಾಡಿ, ಬ್ರಿಗೇಡ್‍ಗೆ ಆಯ್ಕೆಗೊಂಡ ಪ್ರತಿಯೊಬ್ಬರೂ ತಮ್ಮ ಜವಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವಂತೆ ಕಿವಿ ಮಾತು ಹೇಳಿದರು.
ರಾಹುಲ್ ಗಾಂಧಿ ಬ್ರಿಗೇಡ್‍ನ ಮಡಿಕೇರಿ ಅಧ್ಯಕ್ಷರಾದ ಹೆಚ್.ಎಸ್.ಯತೀಶ್ ಕುಮಾರ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ(ಅಪ್ರು), ನಗರಸಭಾ ಸದಸ್ಯ ಎಂ.ಎ.ಉಸ್ಮಾನ್, ಎಂ.ಇ.ಹನೀಫ್ ಮಾತನಾಡಿದರು.
ನಗರಸಭಾ ಸದಸ್ಯರುಗಳಾದ ಪ್ರಕಾಶ್ ಆಚಾರ್ಯ, ಜುಲೇಕಾಬಿ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್ ಹಾಗೂ ಜಾನ್ಸನ್ ಪಿಂಟೋ ಉಪಸ್ಥಿತರಿದ್ದರು.