ಇಲ್ಲಿ ಕೆಂಪಿರುವೆ ಕಂಡರೆ ಬಾಯಲ್ಲಿ ನೀರೂರಿಸುತ್ತಾರೆ !

Update: 2018-03-06 15:14 GMT

ಚಿಕ್ಕಮಗಳೂರು, ಮಾ.6: ಇರುವೆಗಳಲ್ಲಿ ವಿವಿಧ ಬಗೆಯ ಇರುವೆಗಳಿವೆ. ಕೆಲ ಇರುವೆಗಳು ನಿರುಪದ್ರವಿಗಳಾಗಿದ್ದರೆ, ಇನ್ನು ಕೆಲವು ಜಾತಿಯ ಇರುವೆಗಳು ಕಚ್ಚಿದರೆ ಸಹಿಸಲಸಾಧ್ಯ ನೋವಾಗುವುದು ಎಲ್ಲರಿಗೂ ತಿಳಿದ ವಿಚಾರ. ಮಕ್ಕಳಂತೂ ಇರುವೆಗಳನ್ನು ಕಂಡರೆ ಕಾಲಿಗೆ ಬುದ್ಧಿಹೇಳುವುದು ಸಾಮಾನ್ಯ. ಆದರೆ ಮಲೆನಾಡಿನಲ್ಲಿ ಇರುವೆಗಳನ್ನೇ ಚಟ್ನಿ ಮಾಡಿ ತಿಂದು ಬಾಯಿ ಚಪ್ಪರಿಸುವ ವಿಶಿಷ್ಟ ಆಹಾರ ಪದ್ದತಿ ಇದೆ ಎಂದರೆ ನೀವು ನಂಬಲೇಬೇಕು.

ಚಿಕ್ಕಮಗಳೂರು ವಿಶಿಷ್ಟ ಆಹಾರ ಪದ್ಧತಿಗೆ ಹೆಸರಾದ ಜಿಲ್ಲೆಯಾಗಿದೆ. ಅದರಲ್ಲೂ ಜಿಲ್ಲೆಯ ಮಲೆನಾಡಿನ ಭಾಗವಂತೂ ತನ್ನದೇ ಆದ ಆಹಾರ ಕ್ರಮಗಳಿಗೆ ಖ್ಯಾತಿ ಪಡೆದಿದೆ. ಮಲೆನಾಡಿನ ಆದಿವಾಸಿಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಇರುವೆ ಜಾತಿಗೆ ಸೇರಿರುವ ಪ್ರಭೇದವಾಗಿರುವ ಕೆಂಪಿರುವೆ(ಚೆಗಳಿ ಇರುವೆ)ಗಳನ್ನು ಕಂಡರೆ ಬಾಯಲ್ಲಿ ನೀರೂರಿಸುತ್ತಾರೆ. ಸಾಮಾನ್ಯವಾಗಿ ಮರ, ಗಿಡಗಳ ಮೇಲೆಯೇ ವಾಸಿಸುವ ಚೆಗಳಿ ಇರುವೆಗಳ ಚಟ್ನಿ ಮಲೆನಾಡಿನ ಆದಿವಾಸಿಗಳ ಸಾಂಪ್ರದಾಯಿಕ ಆಹಾರವಾಗಿದ್ದರೂ ಇತ್ತೀಚೆಗೆ ಚೆಗಳಿ ಇರುವೆಗಳ ಔಷಧೀಯ ಗುಣಗಳಿಂದಾಗಿ ಚಟ್ನಿಯನ್ನು ಮಾಂಸಾಹಾರಿ ಜನಾಂಗದವರೆಲ್ಲರೂ ಚಪ್ಪರಿಸಲು ಆರಂಭಿಸಿದ್ದಾರೆ.

ಚೆಗಳಿ ಇರುವೆ ಮಲೆನಾಡಿನಲ್ಲಿ ಹೆಚ್ಚು ಕಂಡು ಬರುವ ಕೀಟವಾಗಿದ್ದು, ದೊಡ್ಡ ದೊಡ್ಡ ಮರಗಳಲ್ಲಿ ಮರದ ಎಲೆಗಳನ್ನೇ ಗೂಡಾಗಿ ಮಾರ್ಪಡಿಸಿಕೊಂಡು ಗುಂಪು ಗುಂಪಾಗಿ ವಾಸಿಸುವ ಪ್ರಭೇದವಾಗಿವೆ. ಸಾಮಾನ್ಯವಾಗಿ ಈ ಚೆಗಳಿ ಇರುವೆಗಳು ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ಸಂತಾನೋತ್ಪತ್ತಿಗೆ ಮುಂದಾಗುತ್ತವೆ. ಈ ವೇಳೆ ಮರಗಳಲ್ಲಿ ದೊಡ್ಡ ದೊಡ್ಡ ಗೂಡುಗಳನ್ನು ಹೆಣೆದು ಸಂತಾನೋತ್ಪತ್ತಿಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುತ್ತವೆ. ಈ ವೇಳೆ ಹೆಣ್ಣು ಚೆಗಳಿ ಇರುವೆಗಳು ಸಾವಿರಾರು ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ. ಇದೇ ಸಂದರ್ಭಕ್ಕಾಗಿ ಕಾಯುವ ಮಲೆನಾಡಿನ ಆದಿವಾಸಿಗಳು ಇರುವೆ ಗೂಡುಗಳನ್ನು ಕಿತ್ತು ಬೆಂಕಿಯಲ್ಲಿ ಕಾಯಿಸಿ ಚೆಗಳಿರುವೆಗಳ ಮೊಟ್ಟೆ ಮರಿಗಳು ಹಾಗೂ ಇರುವೆಗಳನ್ನು ಸೇರಿಸಿ ಹದವಾಗಿ ಬೇಯಿಸುತ್ತಾರೆ. ಚೆಗಳಿ ಇರುವೆಗಳೊಂದಿಗೆ ತೆಂಗನಕಾಯಿ, ಕಾಳು ಮೆಣಸು, ಒಣಮೀನು, ಕಾರ ಬೆರೆಸಿ ಚಟ್ನಿ ಮಾಡಿ ದೋಸೆ, ಇಡ್ಲಿ, ಅನ್ನ, ಚಪಾತಿ, ಗಂಜಿಯೊಂದಿಗೆ ತಿನ್ನುವ ಕ್ರಮ ಆದಿವಾಸಿಗಳಲ್ಲಿದೆ.

ಚೆಗಳಿಯಲ್ಲಿದೆ ವಿಶಿಷ್ಟ ಔಷಧೀಯ ಗುಣ:

ಮಲೆನಾಡಿನಲ್ಲಿ ಚೆಗಳಿ ಚಟ್ನಿಗೆ ಭಾರೀ ಬೇಡಿಕೆ ಇದೆ. ಆದರೆ ಯಾರೂ ಈ ಇರುವೆಗಳನ್ನು ಹಣಕ್ಕಾಗಿ ಮಾರುವ ದಂಧೆಗಿಳಿದಿಲ್ಲ. ಚೆಗಳಿ ಇರುವೆಗಳಲ್ಲಿರುವ ವಿಶಿಷ್ಟ ಔಷಧೀಯ ಅಂಶಗಳು ಹಲವು ಮಾರಕ ಕಾಯಿಲೆಗಳಿಗೆ ರಾಮಬಾಣ ಎಂಬ ಹಿನ್ನೆಲೆಯಲ್ಲಿ ಮಲೆನಾಡಿನ ಆದಿವಾಸಿ ಸಮುದಾಯದವರಿಗೆ ಚೆಗಳಿ ಚಟ್ನಿ ಎಂದರೆ ಪಂಚಪ್ರಾಣ. ಚೆಗಳಿ ಚೆಟ್ನಿ ಟೈಪಾಯಿಡ್‍ನಂತಹ ಮಾರಕ ರೋಗ ಸೇರಿದಂತೆ, ಶೀತ, ಕೆಮ್ಮು, ಕಫದಂತಹ ಬಾಧೆಗಳಿಗೆ ರಾಮಬಾಣವಾಗಿದೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಲೆನಾಡಿನಲ್ಲಿ ಚೆಗಳಿ ಚಟ್ನಿ ಜನಪ್ರಿಯವಾಗುತ್ತಿದೆ. ಕೇವಲ ಆದಿವಾಸಿಗಳು ಮಾತ್ರವಲ್ಲದೇ ಇತ್ತೀಚೆಗೆ ಮಾಂಸಾಹಾರಿಗಳೆಲ್ಲರೂ ಚೆಗಳಿ ಇರುವೆಗಳ ರುಚಿಗೆ ಮಾರು ಹೋಗುತ್ತಿದ್ದಾರೆ. ಇರುವೆಗಳೆಂದರೆ ಓಡಿ ಹೋಗುವ ಮಕ್ಕಳಿಗೆ ಔಷಧೀಯ ಗುಣದ ಹಿನ್ನೆಲೆಯಲ್ಲಿ ಚೆಗಳಿ ಚಟ್ನಿ ತಿನ್ನಿಸುವುದು ವಾಡಿಕೆಯಾಗಿದೆ. ಚೆಗಳಿ ಚಟ್ನಿಗೆ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ ಮಲೆನಾಡಿನಿಂದ ವಿಶಿಷ್ಟ ಬಗೆಯ ಚೆಗಳಿ ಅಳಿವಿನಂಚಿಗೆ ಸರಿಯಬಹುದು ಎಂಬ ಆರೋಪವನ್ನು ಇರುವೆ ಪ್ರಿಯರು ಮಾಡದಿದ್ದರೆ ಸಾಕೆಂಬುವುದು ಚೆಗಳಿ ಚಟ್ನಿ ಪ್ರಿಯರ ಅಭಿಪ್ರಾಯವಾಗಿದೆ.

Writer - ಕೆ.ಎಲ್ ಶಿವು

contributor

Editor - ಕೆ.ಎಲ್ ಶಿವು

contributor

Similar News