ಸೊರಬ ಕ್ಷೇತ್ರ: ಕಾಂಗ್ರೆಸ್ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ ವಕೀಲ ಲಕ್ಷ್ಮೀಕಾಂತ ಚಿಮಣೂರು
ಶಿವಮೊಗ್ಗ, ಮಾ. 6: ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ರಾಜಕಾರಣ ಬಿರುಸುಗೊಂಡಿದೆ. ಜೆಡಿಎಸ್‍ನಿಂದ ಹಾಲಿ ಶಾಸಕ ಮಧು ಬಂಗಾರಪ್ಪ ಹಾಗೂ ಬಿಜೆಪಿಯಿಂದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆಂಬ ಕುತೂಹಲ ಮುಂದುವರಿದಿದ್ದು, ಈ ನಡುವೆ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಪಕ್ಷದ ಕಾನೂನು ವಿಭಾಗದ ಜಿಲ್ಲಾಧ್ಯಕ್ಷ, ವಕೀಲ ಲಕ್ಷ್ಮೀಕಾಂತ ಚಿಮಣೂರುರವರು ಟಿಕೆಟ್ ಕೋರಿ ಅದಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ.
ತಮ್ಮ ಬೆಂಬಲಿಗರೊಂದಿಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಲಕ್ಷ್ಮೀಕಾಂತ ಚಿಮಣೂರು ಅರ್ಜಿ ಸಲ್ಲಿಸಿದ್ದಾರೆ. ತದನಂತರ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಈ ಬಾರಿ ಸೊರಬ ಕ್ಷೇತ್ರದಲ್ಲಿ ತಮ್ಮ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟರೆ ತಮ್ಮ ಗೆಲುವು ನಿಶ್ಚಿತವಾಗಿದೆ ಎಂದು ಮನವಿ ಕೂಡ ಮಾಡಿದ್ದಾರೆ.
'ಪಕ್ಷದ ನೀತಿ-ನಿಯಮಾನುಸಾರ ತನ್ನ ಕಾರ್ಯ ಚಟುವಟಿಕೆಗಳ ಸಮಗ್ರ ಮಾಹಿತಿಯನ್ನು ಅರ್ಜಿಯ ಜೊತೆ ಸಲ್ಲಿಸಿದ್ದೆನೆ. ಟಿಕೆಟ್ ಕೊಡುವುದು ಬಿಡುವುದು ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ. ಪಕ್ಷದ ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ಬದ್ದನಾಗಿರುತ್ತೇನೆ' ಎಂದು ಲಕ್ಷ್ಮೀಕಾಂತ ಚಿಮಣೂರು ತಿಳಿಸಿದ್ದಾರೆ.
'ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯರಾಗಿರುವ ತಾನು, ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡಿಕೊಂಡು ಬಂದಿದ್ದೇನೆ. ಪಕ್ಷದ ತತ್ವ, ಸಿದ್ದಾಂತಗಳಿಗೆ ಬದ್ದನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಸೊರಬ ಕ್ಷೇತ್ರದಲ್ಲಿ ಕಳೆದ ಹಲವು ವರ್ಷಗಳಿಂದಲೂ ಪಕ್ಷ ಸಂಘಟನೆ ಮಾಡಿಕೊಂಡು ಬಂದಿದ್ದೇನೆ. ತಮಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಒಂದು ವೇಳೆ ಸ್ಪರ್ಧಿಸಿದರೆ ಗೆಲುವು ಕೂಡ ಖಚಿತವಾಗಿದೆ' ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಸರತ್ತು: ಸೊರಬ ಕ್ಷೇತ್ರದಲ್ಲಿ ಈಡಿಗ ಸಮುದಾಯಕ್ಕೆ ಸೇರಿದ ಮತದಾರರ ಸಂಖ್ಯೆ ಹೆಚ್ಚಿದೆ. ಈಗಾಗಲೇ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಆ ವರ್ಗಕ್ಕೆ ಸೇರಿದವರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವುದು ಖಚಿತವಾಗಿದೆ. ಲಕ್ಷ್ಮೀಕಾಂತ ಚಿಮಣೂರು ಕೂಡ ಈಡಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿಯವರ ಆಪ್ತರಾಗಿದ್ದು, ಚಿಮಣೂರಿಗೆ ಟಿಕೆಟ್ ಕೊಡಿಸಲು ಭಂಡಾರಿಯವರು ವರಿಷ್ಠರ ಬಳಿ ಲಾಬಿ ನಡೆಸುತ್ತಿರುವ ಮಾಹಿತಿಗಳು ಕೇಳಿಬರುತ್ತಿವೆ.
ಮತ್ತೊಂದೆಡೆ ಉತ್ತಮ ಸಚ್ಚಾರಿತ್ರ, ಕ್ಷೇತ್ರ ವ್ಯಾಪ್ತಿಯ ಯುವ ಸಮುದಾಯದಲ್ಲಿ ಒಳ್ಳೆಯ ಹೆಸರು ಸಂಪಾದಿಸಿರುವ ಲಕ್ಷ್ಮೀಕಾಂತ ಚಿಮಣೂರುರವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಸ್ಥಳೀಯ ಕಾಂಗ್ರೆಸ್ ಮೂಲಗಳು ಹೇಳುತ್ತಿವೆ. ಇದೆಲ್ಲದರ ನಡುವೆ ವಿವಿಧ ಪಕ್ಷಗಳಿಂದ ಕಾಂಗ್ರೆಸ್‍ಗೆ ಸೇರ್ಪಡೆಗೊಂಡಿರುವ ಕೆಲ ನಾಯಕರು ಟಿಕೆಟ್‍ಗೆ ತೀವ್ರ ಪೈಪೋಟಿ ನಡೆಸುತ್ತಿದ್ದು, ಯಾರಿಗೆ ಟಿಕೆಟ್ ಸಿಗಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.