ಶಿವಮೊಗ್ಗ: ಕುಖ್ಯಾತ ಅಂತರಾಜ್ಯ ಕಳ್ಳನ ಬಂಧನ
ಶಿವಮೊಗ್ಗ, ಮಾ. 6: ಕರ್ನಾಟಕ ಮಾತ್ರವಲ್ಲದೆ ನಾಲ್ಕೈದು ರಾಜ್ಯಗಳ ಪೊಲೀಸ್ ಇಲಾಖೆಗೆ ಬೇಕಾಗಿದ್ದ ಕಳ್ಳನೋರ್ವನನ್ನು ಶಿವಮೊಗ್ಗ ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಆರೋಪಿಯಿಂದ ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ವಶಕ್ಕೆ ಪಡೆದುಕೊಂಡಿದ್ದಾರೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದಾಸನಗುತ್ತಿ ಎಮ್ಮೆದೊಡ್ಡಿ ಗ್ರಾಮದ ನಿವಾಸಿ, ಪ್ರಸ್ತುತ ಮಂಡ್ಯದ ಗುತ್ತಲು ಎಂಬಲ್ಲಿ ನೆಲೆಸಿರುವ ಮಹಮ್ಮದ್ ಸಾದಿಕ್ ಯಾನೆ ಕಡೂರು ಸಾದಿಕ್ ಯಾನೆ ಸುಲ್ತಾನ್ (34) ಬಂಧಿತ ಕುಖ್ಯಾತ ಕಳ್ಳ ಎಂದು ಗುರುತಿಸಲಾಗಿದೆ. ಈತನನ್ನು ಮಂಡ್ಯದಲ್ಲಿ ಬಂಧಿಸಲಾಗಿದೆ.
ಆರೋಪಿಯಿಂದ 1.245 ಕೆ.ಜಿ. ತೂಕದ ಬಂಗಾರದ ಆಭರಣ, 11 ಕೆ.ಜಿ. ಬೆಳ್ಳಿ, 1 ಕಾರು, 1 ಬೈಕ್, ಒಂದು ಕ್ಯಾಮರಾ, 60 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ. ಒಟ್ಟಾರೆ ಆತನಿಂದ ವಶಕ್ಕೆ ಪಡೆದ ನಗನಾಣ್ಯದ ಒಟ್ಟು ಅಂದಾಜು ಮೊತ್ತ 45,33,350 ರೂ.ಗಳಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್, ಡಿವೈಎಸ್‍ಪಿ ಸುದರ್ಶನ್ ಮಾರ್ಗದರ್ಶನದಲ್ಲಿ ದೊಡ್ಡಪೇಟೆ ಇನ್ಸ್ ಪೆಕ್ಟರ್ ಹರೀಶ್ ಕೆ. ಪಾಟೀಲ್, ದೊಡ್ಡಪೇಟೆ ಇನ್ಸ್ ಪೆಕ್ಟರ್ ಅಭಯ್‍ಪ್ರಕಾಶ್ ಸೋಮನಾಳ್ ಮತ್ತವರ ಸಿಬ್ಬಂದಿಯು ಆರೋಪಿಯನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, 'ಆರೋಪಿಯ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಅತ್ಯಂತ ಚಾಕಚಕ್ಯತೆಯಿಂದ ಆರೋಪಿಯನ್ನು ವಿಶೇಷ ತಂಡ ಬಂಧಿಸಿದೆ. ಈ ಕಾರ್ಯಾಚರಣೆಯನ್ನು ಮೆಚ್ಚಿ ತಾವು ವೈಯಕ್ತಿಕವಾಗಿ 50 ಸಾವಿರ ನಗದು ಬಹುಮಾನವನ್ನು ವಿಶೇಷ ಪೊಲೀಸ್ ತಂಡಕ್ಕೆ ನೀಡುತ್ತಿದ್ದೇನೆ. ಹಾಗೆಯೇ ಈ ತಂಡದಲ್ಲಿದ್ದ ಮೂವರು ಪೊಲೀಸರನ್ನು ಮುಖ್ಯಮಂತ್ರಿ ಪದಕಕ್ಕೆ ಶಿಫಾರಸ್ಸು ಕೂಡ ಮಾಡಲಾಗುತ್ತಿದೆ' ಎಂದು ತಿಳಿಸಿದ್ದಾರೆ.