ಶಿವಮೊಗ್ಗ: ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಟ್ಟೆಚ್ಚರ; ಎಸ್.ಪಿ. ಅಭಿನವ್ ಖರೆ
ಶಿವಮೊಗ್ಗ, ಮಾ. 6: 'ಶಿವಮೊಗ್ಗ ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶಗಳಾದ ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕುಗಳಲ್ಲಿ ನಕ್ಸಲೀಯರ ಚಟುವಟಿಕೆ ಸಂಪೂರ್ಣ ನಿಯಂತ್ರಣದಲ್ಲಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ನಗರದ ಡಿ.ಎ.ಆರ್. ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. 'ಇತ್ತೀಚೆಗೆ ನಕ್ಸಲೀಯರ ಯಾವುದೇ ಚಲನವಲನ, ಚಟುವಟಿಕೆಗಳು ಜಿಲ್ಲೆಯಲ್ಲಿ ಕಂಡುಬಂದಿಲ್ಲ. ಎಲ್ಲಿಯೂ ನಕ್ಸಲೀಯರು ಗೋಚರವಾದ ಮಾಹಿತಿಯಿಲ್ಲ. ಆದರೆ ನೆರೆಹೊರೆ ಜಿಲ್ಲೆಗಳಲ್ಲಿ ನಕ್ಸಲೀಯರ ಚಟುವಟಿಕೆಗಳು ಕಂಡುಬಂದಿದೆ' ಎಂದು ತಿಳಿಸಿದ್ದಾರೆ.
ನಕ್ಸಲೀಯರ ಚಟುವಟಿಕೆ ಕಂಡುಬರದ ಹೊರತಾಗಿಯೂ, ಆಗುಂಬೆ ಹಾಗೂ ಮಾಸ್ತಿಕಟ್ಟೆಯಲ್ಲಿರುವ ನಕ್ಸಲ್ ನಿಗ್ರಹ ಪಡೆಯು ನಿರಂತರವಾಗಿ ಕೂಂಬಿಂಗ್ ಕಾರ್ಯಾಚರಣೆಯನ್ನು ನಡೆಸುತ್ತಿದೆ. ನಕ್ಸಲೀಯರ ಚಲನವಲನ, ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದೆ ಎಂದು ತಿಳಿಸಿದ ಅವರು, 'ನಕ್ಸಲೀಯರ ಶರಣಾಗತಿಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪಗಳು ಜಿಲ್ಲಾ ಪೊಲೀಸ್ ಇಲಾಖೆಯ ಮುಂದೆ ಬಂದಿಲ್ಲ' ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಕಟ್ಟೆಚ್ಚರ: 'ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಂಡಿದೆ. ಕಟ್ಟೆಚ್ಚರ ವಹಿಸಿದೆ. ಕೂಂಬಿಂಗ್ ಕಾರ್ಯಾಚರಣೆಯನ್ನು ಮತ್ತಷ್ಟು ಬಿರುಸುಗೊಳಿಸಲಾಗುವುದು' ಎಂದು ಮಾಹಿತಿ ನೀಡಿದ್ದಾರೆ.
ಕೇಸ್ ದಾಖಲು: ಶಿವಮೊಗ್ಗ ನಗರ ಸಂಚಾರ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಲು ಪೊಲೀಸ್ ಇಲಾಖೆ ನೀಲನಕ್ಷೆಯೊಂದನ್ನು ಸಿದ್ದಪಡಿಸಿದೆ. ಆದಷ್ಟು ಶೀಘ್ರದಲ್ಲಿ ಇದು ಅನುಷ್ಠಾನಗೊಳ್ಳಲಿದೆ. ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಚಾಲಕರನ್ನು ಸಿ.ಸಿ.ಕ್ಯಾಮರಾದ ಮೂಲಕ ಪತ್ತೆ ಹಚ್ಚಿ, ಅವರ ಮನೆಗಳಿಗೆ ನಿಯಮ ಉಲ್ಲಂಘನೆಯ ನೋಟೀಸ್ ಕಳುಹಿಸುವ ವ್ಯವಸ್ಥೆ ಆರಂಭಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅಭಿನವ್ ಖರೆ ತಿಳಿಸಿದ್ದಾರೆ.