×
Ad

ಸೊರಬ: ರಾಷ್ಟ್ರೀಯ ವಿಚಾರ ಸಂಕಿರಣ ಪೂರ್ವ ಭಾವಿ ಸಭೆ

Update: 2018-03-06 22:35 IST

ಸೊರಬ,ಮಾ.6: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಚಿಂತಕರ, ಪ್ರಗತಿಪರರ ಹತ್ಯೆಗಳು ನಿರಂತರವಾಗಿ ನಡೆಯುತ್ತಿದ್ದು, ನಾಡಿನ ವೈಚಾರಿಕತೆಯ ಕಗ್ಗೊಲೆಯಾಗುತ್ತಿದೆ ಎಂದು ಸಮಾಜ ಚಿಂತಕ ಹಾಗೂ ಡಿಎಸ್‍ಎಸ್ ತಾಲೂಕು ಸಲಹಾ ಸಮಿತಿ ಸದಸ್ಯ ರಾಜಪ್ಪ ಮಾಸ್ತರ್ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ ಬೆಂಗಳೂರಿನಲ್ಲಿ ನಡೆಯಲಿರುವ ಎತ್ತ ಸಾಗುತ್ತಿದೆ ಭಾರತ ಎಂಬ ಶೀರ್ಷಿಕೆಯಡಿಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣದ ಪೂರ್ವ ಭಾವಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯಾ ನಂತರ ಮನು ಧರ್ಮವು ಸಂಘ ಪರಿವಾರ ಮತ್ತು ಬಿಜೆಪಿಯ ರೂಪ ಧರಿಸಿ ದೇಶದ ಸಾಮಾಜಿಕ ಸಾಮರಸ್ಯ ಕದಡುತ್ತಾ, ಸಾಮಾಜಿಕ ನ್ಯಾಯದಂತಹ ಅತ್ಯುನ್ನತ ಪ್ರಗತಿಪರ ಆದರ್ಶಕ್ಕೆ ತೀವ್ರ ಹಾನಿಯುಂಟು ಮಾಡುತ್ತಿರುವುದು ಕಳವಳಕಾರಿಯಾದ ಸಂಗತಿಯಾಗಿದೆ. ಕೆಲ ದಿನಗಳ ಹಿಂದೆ  ಆರೆಸ್ಸೆಸ್ ಮೋಹನ್ ಭಾಗವತ್ ಭಾರತದ ಸೈನಿಕರಿಗಿಂತ ಆರೆಸ್ಸೆಸ್ ಪಡೆ ಶ್ರೇಷ್ಠವೆಂದಿರುವುದು ಈ ದೇಶದ ಸಂವಿದಾನ, ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಗಳನ್ನು ಅಣಕಿಸಿ ಅವಮಾನಿಸಿದಂತಾಗಿದೆ. ಮನುಷ್ಯತ್ವ ಮರೆತ ಕಿಡಿಗೇಡಿಗಳು ತಲೆ ಕಡಿಯುವ, ನಾಲಿಗೆ ಕತ್ತರಿಸುವ, ಪಾಕಿಸ್ತಾನಕ್ಕೆ ಓಡಿಸುವ, ಜಾತ್ಯಾತೀತ ವ್ಯಕ್ತಿ ಮತ್ತು ಸಂಘಟನೆಗಳನ್ನು ತುಚ್ಚವಾಗಿ ನಿಂದಿಸುವ ಹೀನ ಕೃತ್ಯಗಳಲ್ಲಿ ತೊಡಗಿದ್ದಾರೆ.

ಇಂತಹ ಸಂದಿಗ್ದ ಸ್ಥಿತಿಯಲ್ಲಿ ಜನಸಾಮಾನ್ಯರು, ಹೋರಾಟಗಾರರು, ಸಾಮಾಜಿಕ ಕಾಳಜಿಯುಳ್ಳವರು, ಸಂವಿದಾನದ ಬಗ್ಗೆ ನಿಷ್ಠೆಯುಳ್ಳವರು, ಅಂಬೇಡ್ಕರ್ ವಾದಿಗಳು, ಭವಿಷ್ಯದ ಬಗ್ಗೆ ಜವಾಬ್ದಾರಿ ಇರುವವರು ಒಗ್ಗೂಡಲೇ ಬೇಕಾದ ಸಂದರ್ಭ ಕೂಡಿ ಬಂದಿದ್ದು. ಇದೇ ಮಾ.10 ಮತ್ತು 11 ರಂದು ಬೆಂಗಳೂರಿನ ಪುರಭವನ(ಟೌನ್‍ಹಾಲ್)ದ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ವೇದಿಕೆಯಲ್ಲಿ ಡಿಎಸ್‍ಎಸ್‍ನ 4 ಪ್ರಮುಖ ಸಂಘಟನೆಗಳ ನೇತೃತ್ವದಲ್ಲಿ ಎತ್ತ ಸಾಗುತ್ತಿದೆ ಭಾರತ ಎಂಬ ಶೀರ್ಷಿಕೆಯಡಿಯಲ್ಲಿ ಬೃಹತ್ ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಂಡಿದ್ದು ಸಾಹಿತಿ ದೇವನೂರು ಮಹಾದೇವ, ಡಾ.ಸಿದ್ಧಲಿಂಗಯ್ಯ, ಎಲ್.ಹನುಮಂತಯ್ಯ, ಬಹುಭಾಷಾ ಚಿತ್ರನಟ ಪ್ರಕಾಶ್‍ರೈ, ತಮಿಳುನಾಡಿನ ವೀರಮಣಿ, ಪ್ರೊ.ಕಾಂಚಾಐಲಯ್ಯ, ಪ್ರೊ.ರವಿವರ್ಮಕುಮಾರ್, ಅಬ್ದುಲ್ ಸಲಾಂ ಪುತ್ತಿಗೆ, ದಿನೇಶ್ ಅಮಿನ್ ಮಟ್ಟು, ಡಾ. ಮಲ್ಲಿಕಾಘಂಟಿ, ಡಾ.ಬಂಜಗೆರೆ ಜಯಪ್ರಕಾಶ್ ಸೇರಿದಂತೆ ಸಾಹಿತಿಗಳು, ಪ್ರಗತಿಪರ ಚಿಂತರು ಪಾಲ್ಗೊಳ್ಳಲಿದ್ದು, ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಲು ಮನವಿ ಮಾಡಿದರು.

ಡಿಎಸ್‍ಎಸ್ ಜಿಲ್ಲಾ ಸಂಚಾಲಕ ಕೆ.ವಿ.ನಾಗರಾಜ್ ಅರಳಸುರಳಿ, ತಾಲೂಕು ಸಂಚಾಲಕ ಮಂಜಪ್ಪ ಹಸವಿ, ಸಂಘಟನಾ ಸಂಚಾಲಕ ಸಾಮಣ್ಣ ತುಡಿನೀರು, ರಾಜಪ್ಪ, ಅಬ್ದುಲ್ ರಶೀದ್, ಎ.ಬಿ.ಬಸಪ್ಪ, ಸುನಿಲ್ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News