ಮಂಡ್ಯ: ಅಡಪದ ಅಪ್ಪಣ್ಣ ಜಯಂತ್ಯುತ್ಸವ, ಸವಿತಾ ಸಮಾಜ ಜಾಗೃತಿ ಸಮಾವೇಶ
ಮಂಡ್ಯ, ಮಾ.6: ಚುನಾವಣೆ ಬಂದಾಗ ಮಾತ್ರ ಶೋಷಿತರನ್ನು ಬಳಕೆ ಮಾಡಿಕೊಳ್ಳುವ ಪಕ್ಷಗಳು ಮತ್ತು ಜನಪ್ರತಿನಿಧಿಗಳು, ನಂತರ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಎಂದು ಸವಿತಾ ಪೀಠದ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ವಿಷಾದಿಸಿದರು.
ಸವಿತಾ ಸಮಾಜ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ವತಿಯಿಂದ ನಗರದ ಕಲಾಮಂದಿರದಲ್ಲಿ ಮಂಗಳವಾರ ನಡೆದ ಸವಿತಾ ಮಹರ್ಷಿ ಮತ್ತು ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಹಾಗೂ ಮಂಡ್ಯ ತಾಲೂಕು ಸವಿತಾ ಸಮಾಜ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಸವಿತಾ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟಿರುವ 25 ಕೋಟಿ ರೂ.ಗಳನ್ನು ಸರಕಾರ ಹಿಂದಕ್ಕೆ ಪಡೆದು ಸವಿತಾ ಸಮುದಾಯಕ್ಕೂ ಒಂದು ಅಭಿವೃದ್ಧಿ ನಿಗಮ ಅಸ್ತಿತ್ವಕ್ಕೆ ತರಬೇಕು. ಇದಕ್ಕೆ ಇತರೆ ಕೆಲವು ಅತ್ಯಂತ ಸಣ್ಣ ಸಮುದಾಯಗಳನ್ನೂ ಸೇರ್ಪಡೆ ಮಾಡಲಿ ಎಂದು ಅವು ಒತ್ತಾಯಿಸಿದರು.
ಸವಿತಾ ಸಮುದಾಯ ಶೈಕ್ಷಣಿಕವಾಗಿಇನ್ನೂ ಬದಲಾವಣೆಯಾಗಿಲ್ಲ. ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು. ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಿ ಉನ್ನತ ಹುದ್ದೆಗಳನ್ನು ಪಡೆಯು ನಿಟ್ಟಿನಲ್ಲಿ ಸಾಧನೆ ಮಾಡಲು ಪ್ರೊತ್ಸಾಹ ನೀಡಬೇಕು ಎಂದು ಅವರು ಸಲಹೆ ನೀಡಿದರು. ಬಸವಣ್ಣನವರಿಗೆ ಆಶ್ರಯ ನೀಡಿದ್ದ ಬಿಜ್ಜಳ ಮಹಾರಾಜ, ಅಶೋಕ ಚಕ್ರವರ್ತಿ ಸವಿತಾ ಸಮುದಾಯಕ್ಕೆ ಸೇರಿದ್ದವರು. ಇಂತಹ ಮಹಾನ್ ಪುರುಷರು ಜನ್ಮ ತಳೆದ ಸಮುದಾಯ ಶೋಷಣೆಗೆ ಒಳಗಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಬಿಎಸ್ಪಿ ಮುಖಂಡ ಎಂ.ಕೃಷ್ಣಮೂರ್ತಿ, ಭಜರಂಗಸೇನೆ ರಾಜ್ಯಾಧ್ಯಕ್ಷ ಬಿ.ಮಂಜುನಾಥ್, ಜೆಡಿಎಸ್ ಮುಖಂಡ ರಾಧಾಕೃಷ್ಣ, ಬಿಜೆಪಿ ನಗರಾಧ್ಯಕ್ಷ ಅರವಿಂದ್, ಜನಪರ ಹೋರಾಟಗಾರ ಲಕ್ಷ್ಮಣ್ ಚೀರನಹಳ್ಳಿ, ಬಿಜೆಪಿ ಅಭಿವೃದ್ಧಿ ಪ್ರಕೋಷ್ಠ ಸಂಚಾಲಕ ಡಾ.ಸದಾನಂದ್, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಂ.ಜಿ.ತಿಮ್ಮೇಗೌಡ, ಸವಿತಾ ಸಮುದಾಯ ಮುಖಂಡರಾದ ಎಂ.ಎಸ್. ರಾಜಣ್ಣ, ನರಸಿಂಹಯ್ಯ, ಪಿ.ರಾಮಮೂರ್ತಿ, ಎಚ್.ಸಿ.ಚಿಕ್ಕಬೋರಪ್ಪ, ಬಸವರಾಜು, ಮೂರ್ತಿ, ಡಿ.ಕೆ.ಕುಮಾರ್, ಅನಿಲ್‍ಕುಮಾರ್, ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.