ದಾವಣಗೆರೆ: ಕನ್ನಡ ಭಾಷೆಗೆ ಅವಮಾನ ಖಂಡಿಸಿ ಪ್ರತಿಭಟನೆ
ದಾವಣಗೆರೆ,ಮಾ.6: ಕಲಬುರಗಿ ಮಹಾ ನಗರ ಪಾಲಿಕೆ ಸದಸ್ಯರ ಕನ್ನಡ ನಾಮಫಲಕಕ್ಕೆ ಮಸಿ ಬಳಿದು, ಕನ್ನಡ ಭಾಷೆಗೆ, ಕನ್ನಡಿಗರಿಗೆ ಅವಮಾನಿಸಿದ ಕುಕೃತ್ಯ ಖಂಡಿಸಿ ನಗರದಲ್ಲಿ ಮಂಗಳವಾರ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ, ಜಿಲ್ಲಾ ಘಟಕ ಪ್ರತಿಭಟಿಸಿತು.
ಇಲ್ಲಿನ ಜಯದೇವ ವೃತ್ತದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಎಸಿ ಕಚೇರಿಗೆ ತೆರಳಿ ಮನವಿ ಅರ್ಪಿಸಿದರು.
ಈ ಸಂದರ್ಭ ಮಾತನಾಡಿದ ಅಮ್ಜದ್ ಅಲಿ, ಕಲಬುರಗಿ ಮಹಾ ನಗರ ಪಾಲಿಕೆ ಸದಸ್ಯರು ಅಲ್ಲಿನ ಪಾಲಿಕೆ ಕಟ್ಟಡದ ಮೇಲಿದ್ದ ಕನ್ನಡ ನಾಮಫಲಕಕ್ಕೆ ಮಸಿ ಬಳಿಯುವ ಮೂಲಕ ಕನ್ನಡ ಭಾಷೆಗೆ, ಕನ್ನಡಿಗರಿಗೆ ಅವಮಾನಿಸಿದ್ದನ್ನು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದ ಅವರು, ಸಾರ್ವಜನಿಕ ಸಂಸ್ಥೆಯಾದ ಕಲಬುರಗಿ ಪಾಲಿಕೆಯಲ್ಲಿ ಜವಾಬ್ಧಾರಿಯುತ ಸ್ಥಾನದಲ್ಲಿರುವ ಅಲ್ಲಿನ ಸದಸ್ಯರು ಕನ್ನಡ ನಾಮಫಲಕಕ್ಕೆ ಮಸಿ ಬಳಿದಿದ್ದನ್ನು ಇಡೀ ರಾಜ್ಯದ ಜನತೆ ಖಂಡಿಸಿದ್ದು, ಕನ್ನಡ ನೀರು ಕುಡಿದು, ಇಲ್ಲಿನ ಅನ್ನ ತಿಂದು, ಕನ್ನಡಿಗರ ಮತಗಳಿಂದಲೇ ಆಯ್ಕೆಯಾದಂತಹ ಪಾಲಿಕೆ ಸದಸ್ಯರ ಇಂತಹ ಕೃತ್ಯ ಎಸಗಿದ್ದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಲಿ ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸೇನೆಯ ಜಿಲ್ಲಾ ಯುವ ಘಟಕದ ಅಧ್ಯಕ್ಷ ಎಸ್. ಶ್ರೇಯಸ್, ತಾಲೂಕು ಅಧ್ಯಕ್ಷ ಸೈಯದ್ ನಜೀರ್, ಎಂ.ರವಿ, ಪ್ರಕಾಶ ಬಾಬು, ಅಜೀಂ, ಶಫೀವುಲ್ಲಾ, ಮಂಜುನಾಥ ಗಂಗೂರು, ರೈತ ಸಂಘದ ಯುವ ಮುಖಂಡ ಮಲ್ಲಶೆಟ್ಟಿಹಳ್ಳಿ ಹನುಮೇಶ, ಸಂತೋಷ ದೊಡ್ಡಮನಿ, ದಯಾನಂದ, ಗೌರೀಶ, ರಘು, ಬೀರಪ್ಪ, ಇರ್ಫಾನ್, ಶಿವಣ್ಣ ಇದ್ದರು.