ಮಡಿಕೇರಿ: ಗ್ಯಾಲರಿ, ತಡೆಗೋಡೆ ನಿರ್ಮಾಣಕ್ಕೆ ಸಂಸದರಿಂದ ರೂ.20 ಲಕ್ಷ ಮಂಜೂರು
ಮಡಿಕೇರಿ, ಮಾ.6: ನಾಪೋಕ್ಲು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೈದಾನಕ್ಕೆ ಕಿರು ಕ್ರೀಡಾ ಗ್ಯಾಲರಿ ಹಾಗೂ ತಡೆಗೋಡೆ ನಿರ್ಮಿಸಲು ಮೈಸೂರು, ಕೊಡಗು ಕ್ಷೇತ್ರದ ಸಂಸದರಾದ ಪ್ರತಾಪ್‍ಸಿಂಹ ಅವರು 20 ಲಕ್ಷ ರೂ.ಗಳನ್ನು ಮಂಜೂರು ಮಾಡಿರುವುದಾಗಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಈ ಬಾರಿ ಮುನ್ನಡೆಸುತ್ತಿರುವ ನಾಪೋಕ್ಲುವಿನ ಕುಲ್ಲೇಟಿರ ಕುಟುಂಬಸ್ಥರು ತಿಳಿಸಿದ್ದಾರೆ.
ಇತ್ತೀಚೆಗೆ ಕುಟುಂಬದ ನಿಯೋಗ ಸಂಸದರ ಮೈಸೂರಿನ ಸ್ವಗೃಹದಲ್ಲಿ ಭೇಟಿಯಾದ ಸಂದರ್ಭ ಪ್ರತಾಪ್ ಸಿಂಹ ಅವರು ಹಣ ಮಂಜೂರಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಹಾಕಿ ಹಬ್ಬದ ಸಮಿತಿಯ ಅಧ್ಯಕ್ಷರಾದ ಶಂಭುಮಂದಪ್ಪ ತಿಳಿಸಿದ್ದಾರೆ.
ಶಾಲೆಯ ಆವರಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವುದರಿಂದ ಕುಲ್ಲೇಟಿರ ಹಾಕಿ ಹಬ್ಬ ಆಚರಿಸಲು ಹೆಚ್ಚು ಸಹಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಬಾರಿ ನಾಪೋಕ್ಲು ಗ್ರಾಮದ ಕುಲ್ಲೇಟಿರ ಒಕ್ಕವು 22ನೇ ವರ್ಷದ ಈ ಪಂದ್ಯಾವಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲ್ಲಿರುವ ಹಾಕಿ ಉತ್ಸವಕ್ಕೆ ಸುಮಾರು 1.80 ಕೋಟಿ ರೂಪಾಯಿಗಳ ವೆಚ್ಚವನ್ನು ಅಂದಾಜಿಸಲಾಗಿದೆ. ಶಾಲಾ ಮೈದಾನಕ್ಕೆ ತಡೆಗೋಡೆ ಹಾಗೂ ಕಿರು ಕ್ರೀಡಾ ಗ್ಯಾಲರಿಯನ್ನು ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಸದ್ಯದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಂಭುಮಂದಪ್ಪ ತಿಳಿಸಿದ್ದಾರೆ. “ಕುಲ್ಲೇಟಿರ ಹಾಕಿ ನಮ್ಮೆ 2018” ಏಪ್ರಿಲ್ 15 ರಿಂದ ಮೇ 13 ರವರೆಗೆ ನಡೆಯಲಿದೆ.
ಸಂಸದ ಪ್ರತಾಪ್ ಸಿಂಹ ಅವರನ್ನು ಭೇಟಿಯಾದ ಸಂದರ್ಭ ಕುಲ್ಲೇಟಿರ ಹಾಕಿ ಹಬ್ಬದ ಸಮಿತಿಯ ಕಾರ್ಯದರ್ಶಿ ಅಜಿತ್ ನಾಣಯ್ಯ, ಸಂಚಾಲಕರಾದ ಅರುಣ್ ಬೇಬ, ದೇವಿ ದೇವಯ್ಯ, ರಾಜೇಶ್ ತಮ್ಮಯ್ಯ ಹಾಗೂ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾಚಿಮಂಡ ಗಪ್ಪಣ್ಣ ಮತ್ತಿತರರು ಹಾಜರಿದ್ದರು.