ಮೂರ್ತಿ ಭಂಜಕ ರಾಜಕಾರಣದ ಅಪಾಯ

Update: 2018-03-08 03:09 GMT

ಭಾರತದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ನೋಡಿದರೆ ಈ ದೇಶ ಯಾದವೀ ಕಲಹದತ್ತ ಸಾಗುತ್ತಿದೆಯೇನೋ ಎಂಬ ಆತಂಕ ಸಹಜವಾಗಿ ಉಂಟಾಗುತ್ತದೆ. ತ್ರಿಪುರಾದಲ್ಲಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷವನ್ನು ಸೋಲಿಸಿ ಬಿಜೆಪಿ ಅಧಿಕಾರ ವಹಿಸಿಕೊಂಡ ಬಳಿಕ ಅಲ್ಲಿ ನಡೆದಿರುವ ಘಟನೆಗಳು ಆತಂಕ ಮೂಡಿಸುತ್ತಿವೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿರುವ ಎಲ್ಲರನ್ನೂ ಕಳವಳಕ್ಕೀಡು ಮಾಡುತ್ತಿವೆ. ಪ್ರಜಾಪ್ರಭುತ್ವದಲ್ಲಿ ಪ್ರಭುತ್ವದ ಅಧಿಕಾರ ಸೂತ್ರವನ್ನು ಹಿಡಿಯುವ ಪಕ್ಷಗಳು ಆಗಾಗ ಬದಲಾವಣೆಯಾಗುತ್ತದೆ. ಚುನಾವಣೆಯಲ್ಲಿ ಯಾವ ಪಕ್ಷ ಜನಾದೇಶ ಪಡೆಯುತ್ತದೆಯೋ ಆ ಪಕ್ಷ ಅಧಿಕಾರಕ್ಕೆ ಬರುತ್ತದೆ. ಅದೇ ರೀತಿ ತ್ರಿಪುರಾದಲ್ಲಿ ಎರಡೂವರೆ ದಶಕದಿಂದ ಅಧಿಕಾರದಲ್ಲಿದ್ದ ಸಿಪಿಎಂ ಶೇ.43ರಷ್ಟು ಮತ ಪಡೆದರೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಅತ್ಯಂತ ಹೆಚ್ಚು ಸ್ಥಾನಗಳನ್ನು ಪಡೆದ ಬಿಜೆಪಿ ರಾಜ್ಯದ ಅಧಿಕಾರ ಸೂತ್ರವನ್ನು ಹಿಡಿದುಬಿಟ್ಟಿದೆ. ಇಂತಹ ಬದಲಾವಣೆ ಸಹಜವಾದುದು.

ಕೇಂದ್ರದಲ್ಲಿ ಕೂಡಾ ಅನೇಕ ಬಾರಿ ಸರಕಾರಗಳು ಬದಲಾವಣೆಯಾಗಿದೆ. ಸ್ವಾತಂತ್ರಾ ನಂತರ ಎರಡು ದಶಕಗಳ ಕಾಲ ದೇಶವನ್ನು ಅವಿರತವಾಗಿ ಆಳಿದ ಕಾಂಗ್ರೆಸ್ ಪಕ್ಷ ಕೂಡಾ 1977ರಲ್ಲಿ ಅಧಿಕಾರ ಕಳೆದುಕೊಂಡಿತ್ತು. ಆನಂತರ ಕೂಡ ಕೆಲಬಾರಿ ಕಾಂಗ್ರೆಸ್ ಮತ್ತು ಕೆಲಬಾರಿ ಪ್ರತಿಪಕ್ಷಗಳು ಅಧಿಕಾರಕ್ಕೆ ಬಂದಿವೆ. ಇದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣ. ಆದರೆ ತ್ರಿಪುರಾದಲ್ಲಿ ಬಿಜೆಪಿ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ 24ಗಂಟೆಗಳಲ್ಲಿ ಅಲ್ಲಿ ಹಿಂಸಾಚಾರ ಆರಂಭವಾಗಿದೆ. ಸಂಘ ಪರಿವಾರದ ಕಾರ್ಯಕರ್ತರು ತ್ರಿಪುರಾದ ಎರಡು ಕಡೆಗಳಲ್ಲಿ ಕ್ರಾಂತಿಕಾರಿ ನಾಯಕ ಲೆನಿನ್ ಪ್ರತಿಮೆಯನ್ನು ಬುಲ್ಡೋಝರ್ ಬಳಸಿ ಧ್ವಂಸಗೊಳಿಸಿದ್ದಾರೆ. ಇದಿಷ್ಟೇ ಅಲ್ಲದೆ ಅನೇಕ ಕಡೆ ಸಿಪಿಎಂ ಕಚೇರಿಗಳ ಮೇಲೆ ಬಾಂಬ್ ದಾಳಿಗಳು ನಡೆದಿವೆ. ಮಹಿಳೆಯರ ಮೇಲೂ ಹಲ್ಲೆ ನಡೆದಿದೆ. ಸಿಪಿಎಂನ ಸುಮಾರು 514 ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ. ಸಿಪಿಎಂ ಬೆಂಬಲಿಗರ 16 ಮನೆಗಳನ್ನು ಧ್ವಂಸಗೊಳಿಸಲಾಗಿದೆ. ವಾಸ್ತವವಾಗಿ ಚುನಾವಣೆಯಲ್ಲಿ ಸೋತವರು ಹತಾಶೆಗೆ ಒಳಗಾಗಿ ಹಿಂಸಾಚಾರ ನಡೆಸಿದ ಉದಾಹರಣೆಗಳಿವೆ. ಆದರೆ ತ್ರಿಪುರಾದಲ್ಲಿ ಚುನಾವಣೆಯಲ್ಲಿ ಗೆದ್ದವರೇ ಹಿಂಸಾಚಾರಕ್ಕಿಳಿದಿದ್ದಾರೆ. ಪ್ರಮಾಣವಚನ ಸ್ವೀಕರಿಸುವ ಮುನ್ನವೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನ್ನು ನಿರ್ಮಾಣ ಮಾಡಿದ್ದಾರೆ.

ಇಂತಹ ಆತಂಕದ, ಭೀತಿಯ ವಾತಾವರಣ ನಿರ್ಮಾಣವಾದಾಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಶಾಂತಿ ಪಾಲನೆಗೆ ಮುಂದಾಗಬೇಕಿತ್ತು. ಹಿಂಸಾಚಾರವನ್ನು ಖಂಡಿಸಬೇಕಿತ್ತು. ಆದರೆ ಇದಕ್ಕೆ ಪ್ರತಿಯಾಗಿ ಕೇಂದ್ರದ ಸಚಿವರೇ ಲೆನಿನ್ ಪ್ರತಿಮೆ ಧ್ವಂಸಗೊಳಿಸಿದ್ದನ್ನು ಬೆಂಬಲಿಸಿದರು. ಕೇಂದ್ರ ಸಹಾಯಕ ಗೃಹ ಸಚಿವರಾದ ಕಿರಣ್‌ರಿಜಿಜು ಲೆನಿನ್ ಪ್ರತಿಮೆಯ ಧ್ವಂಸವನ್ನು ಪರೋಕ್ಷವಾಗಿ ಸಮರ್ಥಿಸಿದರು. ಇನ್ನೊಬ್ಬ ಕೇಂದ್ರ ಸಚಿವ ಹಂಸರಾಜ್ ಅಹೀರ್, ‘‘ಭಾರತದಲ್ಲಿ ನಾಯಕರಿಗೆ ಕೊರತೆಯಿಲ್ಲ, ಲೆಕ್ಕವಿಲ್ಲದಷ್ಟು ನಾಯಕರಿದ್ದಾರೆ. ಅಂತಹವರ ಪ್ರತಿಮೆಯನ್ನು ಸ್ಥಾಪಿಸಲಿ’’ ಎಂದು ಹೇಳಿದರು. ಬಿಜೆಪಿಯ ಇನ್ನೊಬ್ಬ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿಕೆ ನೀಡಿ, ‘‘ಕಮ್ಯುನಿಸ್ಟ್ ನಾಯಕ ಲೆನಿನ್ ಒಬ್ಬ ಭಯೋತ್ಪಾದಕ; ಆತನ ಪ್ರತಿಮೆ ಭಾರತದಲ್ಲಿ ಬೇಡ’’ ಎಂದು ಹೇಳಿದರು. ಇನ್ನೂ ಆತಂಕದ ಸಂಗತಿ ಎಂದರೆ ಮಾಜಿ ಬಿಜೆಪಿ ನಾಯಕ ಹಾಗೂ ತ್ರಿಪುರಾದ ರಾಜ್ಯಪಾಲ ತಥಾಗತ ರಾಯ್ ಲೆನಿನ್ ಪ್ರತಿಮೆ ಧ್ವಂಸವನ್ನು ಸಮರ್ಥಿಸಿ ಹೇಳಿಕೆ ನೀಡಿ, ‘‘ಒಂದು ರಾಜ್ಯದಲ್ಲಿ ಸರಕಾರಗಳು ಬದಲಾವಣೆಯಾದಾಗ ಇಂತಹ ಘಟನೆಗಳು ಸಾಮಾನ್ಯ. ಹಿಂದಿನ ಸರಕಾರ ಸ್ಥಾಪಿಸಿದ ಮೂರ್ತಿಗಳನ್ನು ಹೊಸ ಸರಕಾರ ತೆಗೆದು ಹಾಕಿದರೆ ತಪ್ಪಿಲ್ಲ’’ಎಂದು ಸಮರ್ಥಿಸಿದರು.

ತಮಿಳುನಾಡಿನ ಬಿಜೆಪಿ ನಾಯಕ ಎಚ್. ರಾಜಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮಿಳುನಾಡಿನಲ್ಲಿ ವಿಚಾರವಾದಿ ಪೆರಿಯಾರ್ ರಾಮಸ್ವಾಮಿ ಅವರ ಪ್ರತಿಮೆಗಳನ್ನು ಧ್ವಂಸಗೊಳಿಸುವುದಾಗಿ ಹೇಳಿದರು. ಪೆರಿಯಾರ್ ಪ್ರತಿಮೆಗಳನ್ನು ಧ್ವಂಸಗೊಳಿಸುವುದಾಗಿ ಬಿಜೆಪಿ ನಾಯಕ ಎಚ್. ರಾಜಾ ಹೇಳಿಕೆ ನೀಡಿದ ರಾತ್ರಿಯೇ ತಮಿಳುನಾಡಿನ ವೆಲ್ಲೂರುನಲ್ಲಿ ಪೆರಿಯಾರ್ ಪ್ರತಿಮೆಯನ್ನು ಭಗ್ನಗೊಳಿಸಲಾಯಿತು. ಉತ್ತರ ಪ್ರದೇಶದ ಮೀರತ್‌ನಲ್ಲಿ ಡಾ. ಅಂಬೇಡ್ಕರ್ ಪ್ರತಿಮೆಯನ್ನು ಕೂಡ ನೆಲಸಮಗೊಳಿಸಲಾಯಿತು. ಪೆರಿಯಾರ್ ಪ್ರತಿಮೆ ಭಗ್ನಗೊಳಿಸಿದ್ದನ್ನು ಪ್ರತಿಭಟಿಸಿ ತಮಿಳುನಾಡಿನಲ್ಲಿ ದ್ರಾವಿಡ ಸಂಘಟನೆಗಳು ತೀವ್ರ ಹೋರಾಟಕ್ಕೆ ಇಳಿದಿವೆ. ಅಲ್ಲಿ ಹಿಂಸಾಚಾರ ಭುಗಿಲೆದ್ದಿದೆೆ. ಇದೇ ಸಂದರ್ಭದಲ್ಲಿ ಕೋಲ್ಕತಾದಲ್ಲಿ ಜನಸಂಘದ ಸಂಸ್ಥಾಪಕ ಶ್ಯಾಮ್‌ಪ್ರಸಾದ್ ಮುಖರ್ಜಿ ಅವರ ಪ್ರತಿಮೆಯನ್ನು ಭಗ್ನಗೊಳಿಸಲಾಗಿದೆ. ಇನ್ನೊಂದೆಡೆ ತಮಿಳುನಾಡಿನಲ್ಲಿ ಬಿಜೆಪಿ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ.

ದೇಶದಲ್ಲಿ ಇಷ್ಟೆಲ್ಲಾ ಘಟನೆಗಳು ನಡೆದಾಗ ಮೌನವಾಗಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಬಿಜೆಪಿಯ ಅಧ್ಯಕ್ಷ್ಷ ಅಮಿತ್ ಶಾ ಘಟನೆ ನಡೆದ ಮೂರನೇ ದಿನ ಬಾಯಿ ಬಿಟ್ಟಿದ್ದಾರೆ. ಮೂರ್ತಿ ಭಗ್ನದ ಘಟನೆಗಳನ್ನು ಪ್ರಧಾನಿ ಖಂಡಿಸಿದ್ದಾರೆ. ಅವರ ಈ ಹೇಳಿಕೆಯ ಪ್ರಾಮಾಣಿಕತೆಯ ಬಗ್ಗೆ ಸಂದೇಹ ಮೂಡುತ್ತದೆ. ಘಟನೆ ನಡೆದ ತಕ್ಷಣ ಅವರು ಹೇಳಿಕೆ ನೀಡಬೇಕಾಗಿತ್ತು. ತಾವು ಹೇಳಿಕೆ ನೀಡುವ ಬದಲಾಗಿ ತಮ್ಮ ಸಂಪುಟದ ಸಚಿವರಿಂದ ಲೆನಿನ್ ಮೂರ್ತಿ ಧ್ವಂಸವನ್ನು ಬೆಂಬಲಿಸಿ ಹೇಳಿಕೆ ನೀಡಿಸಿದರು. ಅದಕ್ಕೆ ಯಾವ ಪ್ರತಿಕ್ರಿಯೆ ಬರುತ್ತದೆ ಎಂದು ನೋಡಿದರು. ಇದಕ್ಕೆ ತಮಿಳುನಾಡು ಸೇರಿದಂತೆ ದೇಶದ ಇತರ ಕಡೆಗಳ ಜನ ತೀವ್ರವಾಗಿ ಪ್ರತಿರೋಧ ವ್ಯಕ್ತಪಡಿಸಿದಾಗ, ಅನಿವಾರ್ಯವಾಗಿ ಬುಧವಾರ ಈ ಘಟನೆಯನ್ನು ಖಂಡಿಸಿ ಹೇಳಿಕೆ ನೀಡಿದ್ದಾರೆ. ಪೆರಿಯಾರ್ ಪ್ರತಿಮೆ ಧ್ವಂಸಕ್ಕೆ ಮೊದಲು ಕರೆ ನೀಡಿದ್ದ ತಮಿಳುನಾಡಿನ ಬಿಜೆಪಿ ನಾಯಕ ಎಚ್.ರಾಜಾ ಕೂಡಾ ಬುಧವಾರ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಇಬ್ಬಂದಿತನ ಧೋರಣೆ ಪ್ರಧಾನಿ ಸ್ಥಾನದಲ್ಲಿರುವವರಿಗೆ ಶೋಭೆ ತರುವುದಿಲ್ಲ.

ದೇಶದಲ್ಲಿ ಹೆಚ್ಚುತ್ತಿರುವ ಬೆಲೆ ಏರಿಕೆ, ನಿರುದ್ಯೋಗ ಮತ್ತು ನೋಟು ಅಮಾನ್ಯೀಕರಣದಿಂದ ಉಂಟಾಗಿರುವ ಆರ್ಥಿಕ ಅವ್ಯವಸ್ಥೆಗಳಿಂದ ಜನ ರೋಸಿ ಹೋಗಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂ. ದೋಚಿದ ನೀರವ್ ಮೋದಿ, ಲಲತ್ ಮೋದಿ ಮತ್ತು ವಿಜಯ ಮಲ್ಯ ದೇಶದಿಂದ ಪಲಾಯನ ಮಾಡಿದ್ದಾರೆ. ಬ್ಯಾಂಕುಗಳ ಈ ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದರಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಧಾನಿ ಸಂಘಪರಿವಾರದ ಸಮ್ಮತಿಯೊಂದಿಗೆ ಅದರ ಕಾರ್ಯಕರ್ತರ ಮೂಲಕ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿಸುತ್ತಿದ್ದಾರೆ.

ಪ್ರತಿಮೆ ಧ್ವಂಸದಂತಹ ಘಟನೆಗಳ ಹಿಂದೆಯೂ ಅವರ ಕೈವಾಡ ಇದೆಯೇ ಏನೋ ಎಂಬ ಸಂದೇಹ ಸಹಜವಾಗಿ ಉಂಟಾಗುತ್ತದೆ. ಭಾರೀ ಬಂಡವಾಳಗಾರರು ದೇಶದ ಬ್ಯಾಂಕುಗಳನ್ನು ಲೂಟಿ ಮಾಡಿದ ಘಟನೆಗಳನ್ನು ಮುಚ್ಚಿ ಹಾಕಲು ಹಾಗೂ ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸಲು ಬಿಜೆಪಿ ಅತ್ಯಂತ ವ್ಯವಸ್ಥಿತವಾಗಿ ಪ್ರಚೋದನಾಕಾರಿ ಚಟುವಟಿಕೆಗಳ ಮೂಲಕ ಧರ್ಮ ಮತ್ತು ಜಾತಿಯ ಆಧಾರದಲ್ಲಿ ಜನರನ್ನು ವಿಭಜಿಸುವ ಕೋಮು ಧ್ರುವೀಕರಣದ ರಾಜಕಾರಣ ಆರಂಭಿಸಿದೆಯೇನೋ ಎಂಬ ಸಂದೇಹ ಸಹಜವಾಗಿ ಉಂಟಾಗುತ್ತದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ದೇಶದಲ್ಲಿ ಯಾದವೀ ಕಲಹ ಉಂಟಾಗಿ ಅರಾಜಕತೆಯ ವಾತಾವರಣ ಸೃಷ್ಟಿಯಾದರೆ ಅಚ್ಚರಿಪಡಬೇಕಾಗಿಲ್ಲ. ಭಾರತದ ಪ್ರಜಾಪ್ರಭುತ್ವ ಈಗ ಅಪಾಯದಲ್ಲಿದೆ. ಇದನ್ನು ಜನರೇ ರಕ್ಷಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News