ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳಿ: ಸಚಿವ ಟಿ.ಬಿ.ಜಯಚಂದ್ರ

Update: 2018-03-08 13:15 GMT

ತುಮಕೂರು,ಮಾ.08: ಜನ್ಮ ನೀಡಿ ನಮ್ಮನ್ನೆಲ್ಲ ಸಲಹುವ ಮಾತೃ ಸ್ವರೂಪಿ ಹೆಣ್ಣಿನ ಮನಸ್ಸನ್ನು ನೋಯಿಸದೆ ಅರ್ಥ ಮಾಡಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸ್ತ್ರೀಶಕ್ತಿ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ನಗರದ ಬಾಲಭವನದಲ್ಲಿಂದು ಹಮ್ಮಿಕೊಂಡಿದ್ದ 'ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನು ದ್ವಿತೀಯ ಸ್ಥಾನದಲ್ಲಿ ನೋಡಲಾಗುತ್ತಿದೆ. ಆದರೆ ದೇವರ ದೃಷ್ಟಿಯಲ್ಲಿ ಹೆಣ್ಣು-ಗಂಡೆಂಬ ವ್ಯತ್ಯಾಸವಿಲ್ಲ. ಕಥೆ, ಕವನಗಳಲ್ಲಿ ದೇವತೆಯೆಂದು ಬಣ್ಣಿಸುವ ನಾವು ನಿಜ ಜೀವನದಲ್ಲಿ ಕಡೆಗಾಣಿಸುತ್ತೇವೆ. ಹೆಣ್ಣಿನಲ್ಲಿ ದುಷ್ಟ ಗುಣಗಳನ್ನು ನಿಯಂತ್ರಿಸುವಂಥ ಶಕ್ತಿ ಅಡಗಿದ್ದು, ಗಂಡಿನ ಎಲ್ಲ ಯಶಸ್ಸಿನ ಹಿಂದೆ ಪ್ರೇರಣೆಯಾಗಿರುತ್ತಾಳೆ. ನೂರಕ್ಕೂ ಹೆಚ್ಚು ಮಹಿಳಾಪರ ಕಾನೂನುಗಳು ಜಾರಿಯಲ್ಲಿದ್ದರೂ ಹೆಣ್ಣಿನ ಹೆಸರಿನಲ್ಲಾಗುವ ದೌರ್ಜನ್ಯಗಳು ಇನ್ನೂ ನಿಂತಿಲ್ಲ. ಹೆಣ್ಣನ್ನು ಗೌರವಾದರಗಳಿಂದ ಕಾಣುವ ಸಂಸಾರಗಳು ಮಾತ್ರ ಸುಖಿಯಾಗಿರುತ್ತವೆ ಎಂದು ನಾವೆಲ್ಲ ಮನಗಾಣಬೇಕು. ಮಹಿಳೆಯರ ಮೇಲಾಗುವ ಅತ್ಯಾಚಾರ ಪ್ರಕರಣಗಳನ್ನು ಅತೀ ರಂಜಿಸಿ ಪ್ರಸಾರ ಮಾಡುವುದನ್ನು ಮಾಧ್ಯಮಗಳು ನಿಲ್ಲಿಸಬೇಕು. ಇದರಿಂದ ಹೆಣ್ಣಿನ ಮೇಲಿರುವ ಸದಭಿಪ್ರಾಯಗಳಿಗೆ ಕುಂದುಂಟಾಗುವ ಸಾಧ್ಯತೆಯಿದೆ ಎಂದು ಮನವಿ ಮಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಫೀಕ್ ಅಹಮದ್ ಮಾತನಾಡಿ, ಮಹಿಳಾ ದಿನಾಚರಣೆ ಮಹತ್ವದ ದಿನ. ಸಮಾಜದಲ್ಲಿ ಮಹಿಳೆಯರ ಮೇಲಿದ್ದ ಕೀಳು ಭಾವನೆಗಳ ನಿಲುವು ಈಗ ಬದಲಾಗುತ್ತಿದ್ದು, ತನ್ನ ಹಕ್ಕುಗಳನ್ನು ಚಲಾಯಿಸುವಲ್ಲಿ ಮಹಿಳೆ ಹಂತ ಹಂತವಾಗಿ ಮೇಲೆರುತ್ತಿದ್ದಾಳೆ. ದೇಶಕ್ಕಾಗಿ ಅಳಿದು ಹೋದ ಕ್ರಾಂತಿಕಾರಿ ಮಹಿಳೆಯರನ್ನು ಸ್ಮರಿಸಿದ ಅವರು ಮಹಿಳೆಯರಿಗೆ ರಾಜಕೀಯ ಶಕ್ತಿ ನೀಡಲು ಸ್ಥಳೀಯ ಸಂಸ್ಥೆಗಳ ಸ್ಥಾನಗಳಲ್ಲಿ ಕಲ್ಪಿಸಿರುವ ಶೇ.50ರಷ್ಟು ಮೀಸಲಾತಿಯನ್ನು ವಿಧಾನಸಭೆ, ಲೋಕಸಭೆಗೂ ವಿಸ್ತರಿಸಬೇಕು. ರಾಜ್ಯದಲ್ಲಿ ಮಹಿಳಾ ನಾಯಕಿಯರ ಕೊರತೆಯಿದೆ. ರಾಜ್ಯ ವಿಧಾನಸಭೆಯ 224 ಸದಸ್ಯರ ಸ್ಥಾನದಲ್ಲಿ ಕೇವಲ 7 ಸ್ಥಾನದಲ್ಲಿ ಮಾತ್ರ ಮಹಿಳೆಯರಿದ್ದಾರೆ. ರಾಜಕೀಯವಾಗಿ ಮಹಿಳೆಯರು ಇನ್ನು ಬೆಳೆದಾಗ ಮಾತ್ರ ಮಹಿಳಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು. 

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಮಾತನಾಡಿ, 'ಪ್ರಗತಿಗಾಗಿ ಒತ್ತು' ಎಂಬ ಮಹಿಳಾ ದಿನಾಚರಣೆಯ ಆಶಯವು ಅರ್ಥಪೂರ್ಣವಾಗಿದೆ. ಕೌಟುಂಬಿಕ ಹಾಗೂ ಸಾಮಾಜಿಕ ವಲಯಗಳಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ, ಲಿಂಗತಾರತಮ್ಯದ ವಿರುದ್ಧ ಧ್ವನಿ ಎತ್ತಲು ವಿಶ್ವದಾದ್ಯಂತ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಹಿಳೆಯರೇ ಮಹಿಳೆಯರ ಅಭಿವೃದ್ಧಿಗಾಗಿ ಕಟಿಬದ್ಧರಾಗಿ ನಿಲ್ಲಬೇಕು. ಮಹಿಳಾ ಸಾಧಕಿಯರು ತಮ್ಮ ಸುತ್ತಮುತ್ತಲಿನ ಅವಿದ್ಯಾವಂತ, ಶೋಷಣೆಗೊಳಗಾದ ಮಹಿಳೆಯರನ್ನು ಮುಖ್ಯವಾಹಿನಿಗೆ ತಂದು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದಾಗ ಮಾತ್ರ ದಿನಾಚರಣೆ ಅರ್ಥಪೂರ್ಣವಾಗುತ್ತದೆ ಎಂದು ತಿಳಿಸಿದರು. 

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಸಶಕ್ತಳು ಎಂದು ತನ್ನ ಸಾಧನೆಗಳ ಮೂಲಕ ಸಮಾಜಕ್ಕೆ ತೋರಿಸಿಕೊಟ್ಟಿದ್ದಾಳೆ. ಹಿಂದಿನ ಕಾಲದಲ್ಲಿ ಹಲವಾರು ಮೌಢ್ಯತೆ ಹಾಗೂ ಕಟ್ಟುಪಾಡುಗಳನ್ನು ಸಹಿಸಿಕೊಂಡು ಬಂದಿದ್ದ ಮಹಿಳೆ ಇಂದು ಜಾಗೃತಳಾಗಿ ರೂಪುಗೊಂಡಿದ್ದಾಳೆ. ವಿದ್ಯಾವಂತೆಯಾಗಿ, ಉದ್ಯೋಗಿಯಾಗಿ ಎಷ್ಟೋ ಕುಟುಂಬಗಳಿಗೆ ದಾರಿ ದೀಪವಾಗಿದ್ದಾಳೆ ಎಂದ ಅವರು, ಶೋಷಣೆಗೊಳಗಾದ ಮಹಿಳೆಯರು ಅನ್ಯಾಯದ ವಿರುದ್ಧ ಪ್ರತಿಭಟಿಸುವ ಗುಣ ಬೆಳೆಸಿಕೊಂಡಾಗ ಮಾತ್ರ ಸಾಮಾಜಿಕ ನ್ಯಾಯ ದೊರಕಿದಂತಾಗುತ್ತದೆ ಎಂದು ಹೇಳಿದರು.

ಜಿ.ಪಂ.ಸಿಇಓ ಅನಿಸ್ ಜಾಯ್ ಕಣ್ಮಣಿ, ಜಿ.ಪಂ. ಸದಸ್ಯರಾದ ಯಶೋಧಮ್ಮ ಶಿವಣ್ಣ, ಜಯಲಕ್ಷ್ಮಿ ಜಯರಾಮ್, ಎಪಿಎಂಸಿ ನಿರ್ದೇಶಕಿ ಚಂದ್ರಕಲಾ ಸದಾಶಿವಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ದಿವ್ಯಾ ಎಸ್. ಗೋಪಿನಾಥ್, ವಿವಿಧ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು. 

ಈ ಸಂದರ್ಭದಲ್ಲಿ ಸಚಿವರು 'ಸವಿರುಚಿ' ಮೊಬೈಲ್ ಕ್ಯಾಂಟೀನ್‍ಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಮಹಿಳಾ ದಿನಾಚರಣೆ ಪ್ರಯುಕ್ತ ಮಾರ್ಚ್ 6ರಂದು ಹಮ್ಮಿಕೊಂಡಿದ್ದ  ವಿವಿಧ ಆಟೋಟ ಸ್ಪರ್ಧೆ, ಅಡುಗೆ ಸ್ಪರ್ಧೆ ಹಾಗೂ ಕವಿಗೋಷ್ಠಿ ವಿಜೇತರಿಗೆ ಬಹುಮಾನ ವಿತರಿಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News