×
Ad

ಮಹಿಳೆಯರು ತಮ್ಮ ವೈಚಾರಿಕಾ ತಿಳುವಳಿಕೆ ವ್ಯಾಪ್ತಿ ವಿಸ್ತರಿಸಿಕೊಳ್ಳಬೇಕಿದೆ: ಎನ್.ಇಂದಿರಮ್ಮ

Update: 2018-03-08 18:52 IST

ತುಮಕೂರು,ಮಾ.08: ಸಮಾಜದಲ್ಲಿ ನಡೆಯುತ್ತಿರುವ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಅರಿವು ಮೂಡಿಸಿಕೊಂಡು ತಮ್ಮ ವೈಚಾರಿಕ ವ್ಯಾಪ್ತಿಯನ್ನು ಮಹಿಳೆಯರು ವಿಸ್ತರಿಸಿಕೊಳ್ಳಬೇಕಿದೆ ಎಂದು ಪ್ರಗತಿಪರ ಮಹಿಳಾ ಚಿಂತಕಿ ಎನ್.ಇಂದಿರಮ್ಮ ಕರೆ ನೀಡಿದ್ದಾರೆ.

ನಗರದ ಕನ್ನಡ ಭವನದಲ್ಲಿ ವರದಕ್ಷಿಣೆ ವಿರೋದಿ ವೇದಿಕೆ, ಸಾಂತ್ವನ ಕೇಂದ್ರದ ವತಿಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ, ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಮಹಿಳೆಯರಿಗೆ ಸಮಾಜ ಬಹಳ ಹಿಂದಿನಿಂದಲೂ ಚೌಕಟ್ಟು ಹಾಕಿದೆ. ಹೀಗೆಯೇ ಬದುಕಬೇಕೆಂದು ಹೇಳಿದೆ. ಸಾಂಸ್ಕೃತಿಕವಾಗಿ ಹೇರಲಾಗಿರುವ ಕಟ್ಟುಪಾಡುಗಳನ್ನು ಮೀರಿ ಬೆಳೆಯಬೇಕಾದರೆ ಪ್ರಚಲಿತ ವಿದ್ಯಮಾನಗಳ ಅರಿವು ಹೊಂದಬೇಕು. ಸಮಾಜದ ಇತರೆ ವಿಷಯಗಳ ಬಗ್ಗೆಯೂ ಚಿಂತನೆ ನಡೆಸಬೇಕು. ಆಗ ಮಾತ್ರ ಸವಾಲುಗಳನ್ನು ಎದುರಿಸುವ ಧೈರ್ಯ ಬರುತ್ತದೆ ಎಂದರು.

ಮಾರ್ಯಾದಾ ಹತ್ಯೆ ಪ್ರಕರಣಗಳು ರಾಷ್ಟ್ರದ ಉದ್ದಗಲಕ್ಕೂ ವ್ಯಾಪಿಸಿದೆ. ಲೈಂಗಿಕ ಶೋಷಣೆ ದಿನೇ ದಿನೇ ಹೆಚ್ಚಾಗುತ್ತಿದೆ. ಮಹಿಳೆಯರಿಗೆ ಆರ್ಥಿಕಭದ್ರತೆ ಇಲ್ಲದೆ ಇರುವುದು ಹಾಗೂ ಸುರಕ್ಷತೆ ಕೊರತೆಯ ಕಾರಣದಿಂದಾಗಿ ಆಕೆ ಅಷ್ಟು ಸುಲಭವಾಗಿ ಮೇಲೆ ಬರಲು ಸಾಧ್ಯವಾಗುತ್ತಿಲ್ಲ. ಇಂದು ಸ್ತ್ರೀಶಕ್ತಿ ಸಂಘಗಳು ಅರ್ಥ ಕಳೆದುಕೊಳ್ಳುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಸಾಲ ನೀಡುವ ಸಂಘಗಳು ಹೆಚ್ಚು ಬಲಯುತವಾಗುತ್ತಿವೆ. ಎಲ್ಲಾ ಹಳ್ಳಿಗಳಲ್ಲಿಯೂ ಇದು ಸಾಮಾನ್ಯ ಎನ್ನುವಂತಾಗಿದೆ. ಇಂತಹ ಸಂಘಗಳಿಂದ ಪಡೆಯುವ ಸಾಲವನ್ನು ಮದುವೆ ಮತ್ತಿತರ ಅನುಪಯುಕ್ತದಾಯಕ ವಿಷಯಗಳಿಗೆ ಖರ್ಚು ಮಾಡುವ ಕಾರಣ, ಸಾಲ ತೀರಿಸಲು ಸಾಧ್ಯವಾಗದೆ ಸಾಲದ ಸುಳಿಯಲ್ಲಿ ಸಿಕ್ಕಿ ಬೀಳುತ್ತಿದ್ದಾರೆ. ಸಾಲ ಪಡೆಯುವ ಮುನ್ನ ಯೋಚಿಸುವಂತಾಗಬೇಕು ಎಂದರು.

ಆಶಯ ನುಡಿಗಳನ್ನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಸಮಾಜದಲ್ಲಿ ಮಹಿಳೆಯ ಮೇಲೆ ಒಂದಲ್ಲ ಒಂದು ರೀತಿಯ ದೌರ್ಜನ್ಯಗಳು ಮರುಕಳಿಸುತ್ತಲೇ ಇರುತ್ತವೆ. ವರದಕ್ಷಿಣೆ ಕಿರುಕುಳ ಇಂದು ಮತ್ತೊಂದು ಸ್ವರೂಪವನ್ನು ಪಡೆದುಕೊಂಡಿದೆ. ವಿವಾಹ ಮತ್ತಿತರ ವಿಷಯಗಳಲ್ಲಿ ಖರ್ಚು ಮಿತಿಮೀರುತ್ತಿದೆ. ವಿವಾಹ ನಂತರದ ಕೌಟುಂಬಿಕ ದೌರ್ಜನ್ಯಗಳು ಹೆಚ್ಚು ಜೀವಂತಿಕೆ ಪಡೆಯುತ್ತಿದ್ದು, ಅದರಿಂದ ಹೊರಬರಲಾಗದೆ ಎಷ್ಟೊ ಮಹಿಳೆಯರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದರು.

1992ರಲ್ಲಿ ಯುವಜನತೆಯಿಂದ ಪ್ರಾರಂಭವಾದ ವರದಕ್ಷಿಣೆ ವಿರೋದಿ ವೇದಿಕೆ ಹಲವು ಪ್ರಕರಣಗಳಲ್ಲಿ ನ್ಯಾಯ ಕೊಡಿಸಲು ನೆರವಾಗಿದೆ. ಕೌಟುಂಬಿಕ ಸಲಹಾ ಕೇಂದ್ರವಾಗಿಯೂ ಕೆಲಸ ಮಾಡುತ್ತಿರುವ ಈ ವೇದಿಕೆಗೆ ಬಹಳಷ್ಟು ಪ್ರಕರಣಗಳು ಬರುತ್ತಿದ್ದು, ಸಾಂತ್ವನ ಕೇಂದ್ರದ ಮೂಲಕ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯೆ ಎಸ್.ಆರ್.ಶಾಂತಲಾ ಮಾತನಾಡಿ, ಸಂಸಾರವನ್ನು ಸುಲಲಿತವಾಗಿ ನಡೆಸಿಕೊಂಡು ಹೋಗುವ ಮಹಿಳೆ ಸದಾ ಕಾಲ ನಗುನಗುತ್ತಾ ಇರಬೇಕು. ಸಾಮರಸ್ಯಕ್ಕೆ ಮತ್ತೊಂದು ಹೆಸರೇ ಹೆಣ್ಣು. ಗಂಡು ಮತ್ತು ಹೆಣ್ಣು ಇಬ್ಬರೂ ಸಮಾನತೆಯ ಹಾದಿಯಲ್ಲಿ ಸಾಗಿದಾಗ ಮಾತ್ರ ಈ ಸಮಾಜ ಉತ್ತಮ ಸ್ವಾಸ್ಥ್ಯದಿಂದ ಕೂಡಿರುತ್ತದೆ. ಮಹಿಳೆಯರ ಅಭಿವೃದ್ಧಿಗಾಗಿ ಅನೇಕ ಕಾನೂನುಗಳು,ಯೋಜನೆಗಳು ಜಾರಿಗೆ ಬಂದಿವೆ. ಅವುಗಳ ಸದುಪಯೋಗವಾಗಬೇಕು. ಮಾಧ್ಯಮಗಳಲ್ಲಿ ಮಹಿಳೆಯರ ಲೈಂಗಿಕ ಶೋಷಣೆ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವುದು ಗಾಬರಿ ಮೂಡಿಸುತ್ತಿವೆ. ಇಂತಹ ಘಟನೆಗಳು ನಿಲ್ಲಬೇಕು ಎಂದರು.

ಬಹಳ ವರ್ಷಗಳಿಂದ ತುಮಕೂರಿನಲ್ಲಿ ವರದಕ್ಷಿಣೆ ವಿರೋದಿ ವೇದಿಕೆ ಕೆಲಸ ಮಾಡಿಕೊಂಡು ಬರುತ್ತಿದ್ದು, ಅನೇಕ ಹೋರಾಟಗಳಿಗೆ ಸಾಕ್ಷಿಯಾಗಿದೆ. ಇಂತಹ ಸಂಘಟನೆಗಳು ಸಮಾಜದಲ್ಲಿ ಮತ್ತಷ್ಟು ವಿಸ್ತಾರವಾಗಬೇಕು. ಹಿಂದೆ ಕ್ರಿಯಾಶೀಲವಾಗಿ ಇದ್ದಂತೆ ಇನ್ನು ಮುಂದೆಯೂ ಹೆಚ್ಚು ಕ್ರಿಯಾಶೀಲವಾಗಿ ತನ್ನ ಸಂಘಟನೆಯನ್ನು ವಿಸ್ತಿರಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ರುದ್ರಭೂಮಿಯಲ್ಲಿನ ಸೇವೆಗಾಗಿ ಟಿ.ಕೆ.ಯಶೋಧಗೂಳಯ್ಯ ಅವರಿಗೆ ಗಂಗಮಾಳಮ್ಮ ಗಂಗಾಧರಯ್ಯ ಸ್ಮಾರಕ ಮಹಿಳಾ ಚೇತನ ಪ್ರಶಸ್ತಿ, ಪುಸ್ತಕ ಪರಿಚಾರಿಕೆಗಾಗಿ ಯಶೋಧಮ್ಮ ನರಸಿಂಹ ಮೂರ್ತಿ ಅವರಿಗೆ ಚನ್ನಮ್ಮ ಚನ್ನರಾಯಪ್ಪ ಸ್ಮಾರಕ ಮಹಿಳಾ ಸಾಧಕಿ ಪ್ರಶಸ್ತಿ, ಶಿರಾದ ಮಹಿಳಾ ಕಾರ್ಮಿಕ ಹೋರಾಟಗಾರ್ತಿ ಶಾಂತಮ್ಮ ಅವರಿಗೆ ಸರೋಜಾ ಟಿ.ಆರ್.ರೇವಣ್ಣ ಸ್ಮಾರಕ ಶ್ರಮಜ್ಯೋತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸುಫಿಯಾ ಕಾನೂನು ಕಾಲೇಜು ವಿದ್ಯಾರ್ಥಿಗಳು ಬಾಲ್ಯವಿವಾಹ ಹಾಗೂ ಗುರುಶ್ರೀ ಕಾಲೇಜು ಪ್ರಶಿಕ್ಷಣಾರ್ಥಿಗಳು ವರದಕ್ಷಿಣೆ ಕುರಿತು ಕಿರುನಾಟಕ ಪ್ರದರ್ಶಿಸಿದರು. ಸಮಾಜ ಸೇವಕಿ ಆಯಿಶಾ ರಫೀಕ್ ಅಹಮದ್ ಕಾರ್ಯಕ್ರಮ ಉದ್ಘಾಟಿಸಿದರು.

ವರದಕ್ಷಿಣೆ ವಿರೋದಿ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ, ಮಾಜಿ ಅಧ್ಯಕ್ಷೆ ಎಂ.ಬಿ.ಜೀವರತ್ನ, ಪದಾಧಿಕಾರಿಗಳಾದ ಸಿ.ಎಲ್.ಸುನಂದಮ್ಮ, ಲಲಿತಾಮಲ್ಲಪ್ಪ, ರಾಜೇಶ್ವರಿ, ಚಂದ್ರಶೇಖರ್, ಮಲ್ಲಿಕಾಬಸವರಾಜು, ಟಿ.ಆರ್.ರೇವಣ್ಣ,  ಗಾಯತ್ರಿನಾಗೇಶ್, ಮಮತ, ಪಾರ್ವತಮ್ಮರಾಜ್‍ಕುಮಾರ್, ಅಂಬುಜಾಕ್ಷಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News