ಚಿಕ್ಕಮಗಳೂರು: ಚುನಾವಣಾ ಲಾಂಛನ ಬಿಡುಗಡೆ ಸಮಾರಂಭ
ಚಿಕ್ಕಮಗಳೂರು, ಮಾ.8: ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಮುಂಬರುವ ವಿಧಾನಸಭಾ ಚುನಾವಣೆ ನಾಮಪತ್ರ ಸಲ್ಲಿಕೆಯ ಅಂತಿಮ ದಿನಾಂಕದವರೆಗೂ ಕಾಲಾವಕಾಶವಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದ್ದಾರೆ.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಭಾರತ ಚುನಾವಣಾ ಆಯೋಗ ಹೊರತಂದಿರುವ ಚುನಾವಣೆ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮತದಾರರ ಅಂತಿಮ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಆದರೂ ಸಾರ್ವಜನಿಕರಿಗೆ ತಮ್ಮ ಹೆಸರನ್ನು ಸೇರ್ಪಡೆಗೊಳಿಸಲು ಮತ್ತು ತಿದ್ದುಪಡಿ ಮಾಡಲು ಈಗಲೂ ಅವಕಾಶವಿದೆ. ಜನವರಿ 1, 2018ಕ್ಕೆ 18 ವರ್ಷ ತುಂಬಿದ ಯುವಜನತೆ ಹೊಸ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಬಹುದಾಗಿದೆ ಎಂದ ಅವರು, ಈ ಅವಕಾಶವನ್ನು ಯುವ ಜನತೆ ಬಳಸಿಕೊಳ್ಳಬೇಕು. ತಮ್ಮ ಹೆಸರನ್ನು ತಪ್ಪದೇ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ತಿಳಿಸಿದರು.
ಅಂತಿಮ ಮತದಾರರ ಪಟ್ಟಿಯಲ್ಲಿ ನ್ಯೂನತೆ ಕಂಡು ಬಂದಲ್ಲಿ ತಮ್ಮ ಗಮನಕ್ಕೆ ತರುವಂತೆ ಎಲ್ಲಾ ಪಕ್ಷಗಳಿಗೂ ಈಗಾಗಲೇ ತಿಳಿಸಲಾಗಿದೆ. ಲೋಪದೋಷಗಳನ್ನು ತಮ್ಮ ಗಮನಕ್ಕೆ ತಂದಲ್ಲಿ ಅದನ್ನು ಸರಿಪಡಿಸಲಾಗುವುದು ಎಂದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಸಿ.ಸತ್ಯಭಾಮ ಮಾತನಾಡಿ, 18 ವರ್ಷ ತುಂಬಿದವರು ಮಾತ್ರ ಹೊಸ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಅರ್ಹರಾಗಿರುತ್ತಾರೆ ಎಂದು ಹೇಳಿದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಪ್ರಭಾವತಿ ಎಂ.ಹಿರೇಮಠ್ ಚುನಾವಣಾ ಲಾಂಛನವನ್ನು ಬಿಡುಗಡೆಗೊಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಬಸವರಾಜ್ ಚೇಂಗಟ್ಟಿ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೆ.ಮಂಜೇಗೌಡ ಉಪಸ್ಥಿತರಿದ್ದರು.