ದಾವಣಗೆರೆ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ

Update: 2018-03-08 13:33 GMT

ದಾವಣಗೆರೆ,ಮಾ.8: ಭಾರತದಲ್ಲಿ ಸಮಾನತೆ ಕಲ್ಪನೆ ಹೊಸತಲ್ಲ. ಅರ್ಧನಾರೀಶ್ವರ ಎಂಬ ಪರಿಕಲ್ಪನೆ ಮೂಲಕ ಪುರುಷ ಮತ್ತು ಮಹಿಳೆ ಸಮ ಎನ್ನುವ ಮೂಲಕ ಮಹಿಳಾ ಸಮಾನತೆಗೆ ಒತ್ತು ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ಜಿಲ್ಲಾಡಳಿತ, ಜಿಪಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಚಿಂದೋಡಿ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಪ್ರಸ್ತುತ ರಾಜ್ಯ ಸರ್ಕಾರ ಆಡಳಿತಕ್ಕೆ ಬಂದ ನಂತರ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ಗರ್ಭಿಣಿ-ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡುವ ಮಾತೃಪೂರ್ಣ ಯೋಜನೆ, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೆ ಸುತ್ತುನಿಧಿ ಮೂಲಕ ಪ್ರೋತ್ಸಾಹಧನ, ಸ್ತ್ರೀಶಕ್ತಿ ಸಮೃದ್ಧಿ ಯೋಜನೆಯಡಿ 30 ಜಿಲ್ಲೆಗಳಲ್ಲಿ ಸ್ತ್ರೀಶಕ್ತಿ ಒಕ್ಕೂಟಗಳ ರಚನೆ, ಮಹಿಳೆಯರಿಗೆ ಜಿಲ್ಲಾ ಮಟ್ಟದಲ್ಲಿ ವಿಶೇಷ ಚಿಕಿತ್ಸಾ ಘಟಕ ಸ್ಥಾಪನೆ, ಮಹಿಳಾ ಉದ್ದಿಮೆದಾರರಿಗೆ ಶೇ.4ರ ಬಡ್ಡಿಯಲ್ಲಿ ಸಾಲ ಸೇರಿದಂತೆ ಹತ್ತು ಹಲವಾರು ಯೋಜನೆ ಜಾರಿಗೆ ತರಲಾಗಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿ ಈ ಯೋಜನೆ ಫಲಾನುಭವಿಗಳಿಗೆ ತಲುಪಿಸಿದರೆ ಅನುಕೂಲವಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಮಾತನಾಡಿ, ದೇವರ ಮತ್ತೊಂದು ಪ್ರತಿರೂಪ ಎಂದರೆ ತಾಯಿ. ಅಂತಹ ಎಲ್ಲ ತಾಯಂದಿರಿಗೆ ನಮನಗಳು. ದೇವತೆಗೆ ಸಮನಾದ ಸ್ಥಾನ ತಾಯಿಗೆ ನೀಡಲಾಗಿದೆ. ಎಲ್ಲವನ್ನು ಸಮಾನವಾಗಿ ಕಾಣುವ ಆಲೋಚನೆಯೇ ಭಗವದ್ಗೀತೆ. ಇಂತಹ ಸಮಾನತೆಯ ಆಲೋಚನೆ ಇಂದಿನ 24 ಗಂಟೆಗೆ ಸೀಮಿತವಾಗಿರಬಾರದು. ಬದಲಾಗಿ 24*7 ಆಗಿರಬೇಕು. ಆಗ ಸಮಾಜವನ್ನು ಉನ್ನತಮಟ್ಟದಲ್ಲಿ ನಿರ್ಮಿಸಲು ಸಾಧ್ಯ. ಇಂತಹ ಉತ್ತಮ ಆಲೊಚನೆಗಳನ್ನು ಬಿತ್ತುವ ಕಾರ್ಯಕ್ರಮ ಶ್ಲಾಘನೀಯವಾಗಿದ್ದು, ನಾವೆಲ್ಲಾ ಈ ದಾರಿಯಲ್ಲಿ ಸಾಗಬೇಕಿದೆ ಎಂದು ಕರೆ ನೀಡಿದರು.

ಜಿಪಂ ಸಿಇಓ ಎಸ್. ಅಶ್ವತಿ ಮಾತನಾಡಿ, ಮಹಿಳಾ ದಿನಾಚರಣೆಯಂದು ಮಾತ್ರ ಮಹಿಳೆಯರ ಹಕ್ಕು, ಸಮಸ್ಯೆಗಳಿತ್ಯಾದಿ ಚರ್ಚೆಯಾಗದೆ ಪ್ರತಿ ದಿನ ಇತ್ತ ಕಡೆ ಗಮನ ಹರಿಯುವಂತಾಗಬೇಕು. ಮಹಿಳೆ ಇಂದು ಮನೆ ಒಳಗೆ ಹೊರಗೆ ತಮ್ಮ ಜವಾಬ್ದಾರಿ ನಿರ್ವಹಿಸುತ್ತಾ ಸಮತೋಲನ ಸಾಧಿಸುತ್ತಿದ್ದಾಳೆ ಎಂದರು.

ಎಸ್ಪಿ ಡಾ. ಭೀಮಾಶಂಕರ್ ಎಸ್. ಗುಳೇದ್ ಮಾತನಾಡಿ, ಪುರುಷ ಮಾಡುವ ಎಲ್ಲ ಕೆಲಸ ಮಹಿಳೆ ಮಾಡುತ್ತಾಳೆ. ಆದರೆ, ಮಹಿಳೆ ಮಾಡುವ ಕೆಲಸ ಪುರುಷ ಮಾಡುವುದಕ್ಕೆ ಆಗುತ್ತಿಲ್ಲ ಎನ್ನಬಹುದು. ಪುರುಷರಿಗಿಂತ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದಿದ್ದಾಳೆ. ಪ್ರತಿದಿನ ಇಂತಹದ್ದೇ ಸಂಭ್ರಮ ನೆಲೆಸಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಪಂ ಅಧ್ಯಕ್ಷೆ ಮಂಜುಳಾ ಟಿ ವಿ ರಾಜು ಮಾತನಾಡಿದರು. ಕಲೆ, ಸಾಂಸ್ಕೃತಿಕ ಚಟುವಟಿಕೆ, ಸಮಾಜ ವಿಭಾಗ ಕ್ರೀಡೆ, ಸಂಗೀತ, ತಾರ್ಕಿಕ, ನಾವೀನ್ಯತೆ ಕ್ಷೇತ್ರದಲ್ಲಿ ತಲಾ ಇಬ್ಬರು ಅಸಾಧಾರಾಣ ಪ್ರತಿಭೆ ಇರುವ ಮಕ್ಕಳನ್ನು ಗುರುತಿಸಿ ಪ್ರಶಸ್ತಿ ಮತ್ತು ನಗದು ರು. 10 ಸಾವಿರ ನಗದು ಬಹುಮಾನ ನೀಡಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದ ಕ್ರಿಕೆಟ್, ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿಜೇತರಾದ ಮಹಿಳೆಯರಿಗೆ ಪ್ರಶಸ್ತಿ ನೀಡಲಾಯಿತು.

ಜಿಪಂ ಉಪಾಧ್ಯಕ್ಷೆ ಗೀತಾ ಗಂಗಾನಾಯ್ಕ, ಜಿಪಂ ಸದಸ್ಯರಾದ ಜಯಶೀಲ, ಶೈಲಜಾ ಬಸವರಾಜಪ್ಪ, ಓಬಳಪ್ಪ, ಜನಪ್ರತಿನಿಧಿಗಳು, ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಪ್ರಭಾರಿ ಉಪವಿಭಾಗಾಧಿಕಾರಿ ಡಾ. ಮಧು ಪಾಟಿಲ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News