ಭ್ರಷ್ಟರಿಗೆ ರಕ್ಷಣೆ ಕೊಡುವ ಕಾಂಗ್ರೆಸ್ ಸರಕಾರ ತೊಲಗಲಿದೆ: ಹೆಚ್.ಡಿ. ಕುಮಾರಸ್ವಾಮಿ

Update: 2018-03-08 14:38 GMT

ಹಾಸನ,ಮಾ.8: ನಿಮ್ಮಪ್ಪನಾಣೆಗೂ ಜಾಹಿರಾತುಗೆ ಮರುಳಾಗಿ ಮುಂದಿನ ಚುನಾವಣೆಯಲ್ಲಿ ಜನ ಬೆಂಬಲಿಸುವುದಿಲ್ಲ. ಹಾಗೆಯೇ ಭ್ರಷ್ಟಚಾರರಿಗೆ ರಕ್ಷಣೆ ಕೊಡುವ ಕಾಂಗ್ರೆಸ್ ಸರಕಾರ ತೊಲಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ಮಾತಿನ ವಾಗ್ದಾಳಿ ನಡೆಸಿದರು.

ನಗರದ ಖಾಸಗಿ ಹೊಟೇಲೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಿಮ್ಮ ದುರಹಂಕಾರದ ಮಾತು ನಿಲ್ಲಿಸಿ. ನಿಮ್ಮ ಜಾಹೀರಾತಿಗೆ ಮರುಳಾಗಿ ಜನರು ಮತ್ತೆ ನಿಮ್ಮನ್ನು ಬೆಂಬಲಿಸುತ್ತಾರೆ ಎಂದು ಕೊಳ್ಳಬೇಡಿ. ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗೋಲ್ಲ ಅಂತ ನೀವು ಹೇಳುತ್ತಿದ್ದೀರೋ? ಹಾಗೆಯೇ ನಿಮ್ಮಪ್ಪನಾಣೆ ಜಾಹೀರಾತು ನೋಡಿ ನಾಡಿನ ಜನ ನಿಮಗೆ ಅಧಿಕಾರ ಕೊಡಲ್ಲ ಎಂದು ಭವಿಷ್ಯ ನುಡಿದರು.

ರಾಜ್ಯಸಭೆ ಚುನಾವಣೆಯಲ್ಲಿ ಫಾರೂಕ್ ಅವರೇ ನಮ್ಮ ಅಭ್ಯರ್ಥಿ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ನಮ್ಮ ಅಭ್ಯರ್ಥಿಗೆ ಬೆಂಬಲ ಕೊಡಿ ಎಂದು ಕಾಂಗ್ರೆಸ್ ಅರ್ಜಿ ಹಾಕಿಲ್ಲ. ಕೇಂದ್ರ ನಾಯಕರ ಜೊತೆಗೆ ನಮ್ಮ ಅಭ್ಯರ್ಥಿ ಮಾತನಾಡಿದ್ದಾರೆ ಎಂದ ಹೆಚ್ಡಿಕೆ, ಬಿಬಿಎಂಪಿಗೂ, ರಾಜ್ಯಸಭೆ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ಈಗ ಜೆಡಿಎಸ್ ಜೊತೆ ಹೊಂದಾಣಿಕೆ ಅಗತ್ಯವಿಲ್ಲ ಎನ್ನುತ್ತಿದ್ದಾರೆ. ನಂಜನಗೂರು-ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲದಿಂದ ಗೆದ್ದೆವು ಎಂದು ಹೇಳಿದ್ದು ಮರೆತು ಹೋಯಿತೇ? ಆಗ ನಾವು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇವಾ? ನಿಮ್ಮ ದುರಂಕಾರಕ್ಕೆ ಕಾಲವೇ ಉತ್ತರ ನೀಡಲಿದೆ ಎಂದು ಕಿಡಿ ಕಾರಿದರು. 'ಎವೆರಿ ಹಾಲಿಡೇ ಈಸ್ ನಾಟ್ ಸಂಡೇ ಸಿದ್ರಾಮಯ್ಯ' ನವರೇ, ಮೂಲ ಕಾಂಗ್ರೆಸ್ಸಿಗರು ನಿಮಗೆ ಶಕ್ತಿಧಾರೆ ಎರೆದರು. ಆದರೆ ನೀವು ಆ ಶಕ್ತಿಯಲ್ಲೇ ಹೈಜಾಕ್ ಮಾಡಿ ನೀವೇ ಹೈಕಮಾಂಡ್ ನಂತೆ ವರ್ತಿಸುತ್ತಿದ್ದೀರಿ ಎಂದು ಹೇಳಿದರು.

ನೈಸ್ ಕಂಪನಿಯಿಂದ 1200 ಕೋಟಿ ರೂ. ಹಣವನ್ನು ವಾಪಸ್ ಪಡೆಯಬೇಕು ಎಂಬ ಸದನ ಸಮಿತಿ ಶಿಫಾರಸ್ಸು ಇಂಪ್ಲಿಮೆಂಟ್ ಆಗಿದೆ. ಆದರೆ ಆ ಹಣ ರಾಜ್ಯ ಸರಕಾರದ ಖಜಾನೆ ಬಂದಲು ಚುನಾವಣೆ ಖರ್ಚಿಗಾಗಿ ಕಾಂಗ್ರೆಸ್ ಇಲ್ಲವೇ ಸಿದ್ದರಾಮಯ್ಯ ಖಾತೆಗೆ ಜಮಾವಣೆ ಆಗಿರಬಹುದು ಎಂದು ದೂರಿದರು. ಬಿಜೆಪಿ ವಿರುದ್ಧವೂ ಹರಿಹಾಯ್ದ ಮಾಜಿ ಸಿಎಂ, ತ್ರಿಪುರ, ನಾಗಾಲ್ಯಾಂಡ್ ನಂತೆ ಸುಳ್ಳು ಹೇಳಿ, ಕರ್ನಾಟಕದ ಜನರನ್ನು ಸುಲಭವಾಗಿ ಓಲೈಸಿ ಅಧಿಕಾರ ಹಿಡಿಯಲು ಆಗಲ್ಲ ಎಂದರು.

ಇನ್ನು ರಾಜ್ಯ ಲೋಕಾಯುಕ್ತರಿಗೆ ಚೂರಿ ಇರಿತ ಘಟನೆ ಹಿಂದೆ ಸರಕಾರದ ಚಿತಾವಣೆ ಇದೆಯೇ ಎಂಬುದನ್ನು ಸಿಎಂ ಸಿದ್ದರಾಮಯ್ಯ ನಾಡಿನ ಜನರ ಮುಂದೆ ಹೇಳಲಿ ಎಂದು ಒತ್ತಾಯಿಸಿದರು. ಈಗಾಗಲೇ ಲೋಕಾಯುಕ್ತ ಸಂಸ್ಥೆಯನ್ನು ಸಾಯಿಸಿ, ಅದರ ಚಟುವಟಿಕೆ ಬಂದ್ ಮಾಡಿರುವ ನೀವು, ನಿನ್ನೆಯ ಕೃತ್ಯಕ್ಕೆ ಸರಕಾರದ ಪ್ರೇರಣೆ ಇದೆಯೇ ಎಂಬ ಸತ್ಯ ಹೊರಗಿಡಿ ಎಂದು ಆಗ್ರಹಿಸಿದರು. ಲೋಕಾಯುಕ್ತರಿಗೆ ರಕ್ಷಣೆ ಇಲ್ಲ ಎಂದ ಮೇಲೆ ಯಾರಿಗೆ ರಕ್ಷಣೆ ಕೊಡುತ್ತೀರಿ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ನಿಮಗೆ ನೈತಿಕತೆ ಇದ್ದರೆ ಬುರುಡೆ ಭಾಷಣ ಬಿಟ್ಟು ನಾನು ನಾಡಿನ ಜನರಿಗೆ ರಕ್ಷಣೆ ಕೊಡಲು ಸಾಧ್ಯವಿಲ್ಲ ಅಂತ ರಾಜೀನಾಮೆ ಕೊಡಿ ಎಂದು ಒತ್ತಾಯಿಸಿದರು. ಇಲ್ಲದಿದ್ದರೆ ನಿಮ್ಮ ಗೃಹಸಚಿವರು ಅಥವಾ ನಿಮ್ಮ ಹೈಟೆಕ್ ಸಲಹೆಗಾರರು ಹೊಣೆ ಹೊರುತ್ತಾರಾ ? ಮುಂದಿನ ದಿನಗಳಲ್ಲಿ ನಿಮಗೆ ಮಾರಿಹಬ್ಬ ಕಾದಿದೆ ಬರೆದಿಟ್ಟುಕೊಳ್ಳಿ ಎಂದು ಎಚ್ಚರಿಸಿದರು.

ಇದೇ ವೇಳೆ ನೈಸ್ ಅಕ್ರಮ ಸಂಬಂಧ ರಾಜ್ಯಪಾಲರಿಗೆ ದೂರು ನೀಡುವುದಾಗಿ ತಿಳಿಸಿದ ಕುಮಾರಸ್ವಾಮಿ, ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಾತ್ರ ನೈಸ್ ಅಪರಾಧಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನುಡಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಹೆಚ್.ಎಸ್. ಪ್ರಕಾಶ್, ಮುಖಂಡರು ಕೆ.ಎಂ. ರಾಜೇಗೌಡ, ಪಟೇಲ್ ಶಿವರಾಂ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News