ಸೊರಬ: ಲವಕುಶ ಪೌರಾಣಿಕ ಯಕ್ಷಗಾನ ಕಾರ್ಯಕ್ರಮ
ಸೊರಬ,ಮಾ.8: ತಾಲೂಕಿನ ಇತಿಹಾಸದಲ್ಲಿಯೇ ಕಡಿಮೆ ದಿನಗಳಲ್ಲಿ ಅತ್ಯುತ್ತಮ ಸಂಘಟನೆಮಾಡಿ ದಾಖಲೆ ಸಂಖ್ಯೆಯಲ್ಲಿ ಯಕ್ಷಗಾನ ಅಭಿಮಾನಿಗಳನ್ನು ಸೇರಿಸಿದ ಕೀರ್ತಿ ಸತೀಶ್ ಹೆಗಡೆ ಶಾಂತಗೇರಿ ಅವರಿಗೆ ಸಲ್ಲುತ್ತದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವೈದ್ಯ ಡಾ.ಎಂ.ಕೆ.ಭಟ್ ಅಭಿಪ್ರಾಯ ಪಟ್ಟರು.
ಪಟ್ಟಣದ ವಿವೇಕಾನಂದ ಶಾಲಾ ಆವರಣದಲ್ಲಿ ಹಮ್ಮಿಕೊಂಡ ಲವಕುಶ ಪೌರಾಣಿಕ ಯಕ್ಷಗಾನ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಿರಿ ಕಲಾಮೇಳದ ಸಂಯೋಜಕರಾದ ಸುರೇಶ್ ಹೆಗಡೆ ಕಡತೋಕ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಆಧುನಿಕತೆಯ ಬರಾಟೆಯಲ್ಲಿ ಯಕ್ಷಗಾನ ಸೇರಿದಂತೆ ಹಲವು ಕಲೆಗಳು ಕಣ್ಮರೆಯಾಗುತ್ತಿದ್ದು ಜನರು ಎಚ್ಚೆತ್ತುಕೊಂಡು ನಾಡಿನ ಸಂಸ್ಕೃತಿಯ ಪ್ರತೀಕಗಳಾದ ಜಾನಪದ ಕಲೆಗಳನ್ನು ಉಳಿಸುವತ್ತ ಮುಂದಾಗಬೇಕು. ಯಕ್ಷಗಾನ ಕಲಾಸಕ್ತರು ಕಡಿಮೆ ಇರುವ ಸಂದರ್ಭದಲ್ಲಿಯೂ ಹೆಚ್ಚು ಜನರು ಸೇರಿಸುವುದು ಕಲೆಗಳನ್ನು ಪ್ರೋತ್ಸಾಹಿಸುವ ಹಾಗೂ ಆಸ್ವಾದಿಸುವವರು ಇದ್ದಾರೆ ಎಂಬುದನ್ನು ಬಿಂಬಿಸುತ್ತದೆ. ತಾಲೂಕಿನ ಸಾಂಸ್ಕೃತಿಕ ಬೆಳವಣಿಗೆಗೆ ನಿರಂತರವಾಗಿ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮ ಸಂಯೋಜಕ ಸತೀಶ್ ಹೆಗಡೆ ಶಾಂತಗೇರಿ ಮಾತನಾಡಿ, ತಾಲೂಕು ಸಾಂಸ್ಕೃತಿಕವಾಗಿ ಮುನ್ನಲೆಯಲ್ಲಿದ್ದರೂ ಕೂಡ ಗುರುತಿಸಿ ಪ್ರೋತ್ಸಾಹಿಸುವ ಕೊರತೆ ಎದ್ದುಕಾಣುತ್ತಿದೆ. ಪಟ್ಟಣದಲ್ಲಿ ನಿರ್ಮಾಣ ಮಾಡಿದ ರಂಗಮಂದಿರ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಸಲಾಗದ ದುಸ್ಥಿತಿ ಎದುರಾಗಿದೆ. ಯಕ್ಷಗಾನದ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದವರು ಮಹಿಳೆಯರೇ ಆಗಿರುವುದು ವಿಶೇಷ ಎಂದರು.
ವಿದ್ವಾನ್ ಎಂ.ಗೋಪಾಲ ಅವರ ಶಿಷ್ಯೆ ಪೃಥ್ವಿ ಜಾಣ ಅವರು ಭರತನಾಟ್ಯ ಪ್ರದರ್ಶಿಸಿದರು. ಯಕ್ಷಗಾನದ ಪಾತ್ರಗಳು, ಸುರೇಶ್ ಶೆಟ್ಟಿ ಅವರ ಹಾಡುಗಾರಿಕೆ, ಹಿಮ್ಮೇಳಗಳು ಜನರ ಮನಸೂರೆಗೊಂಡವು.
ಯಕ್ಷಗಾನದಲ್ಲಿ ಕಲಾವಿದರಾದ ಸುರೇಶ ಶೆಟ್ಟಿ ಶಂಕರನಾರಾಯಣ, ಶರತ್ ಹೆಗಡೆ ಜಾನಕೈ, ಭಾರ್ಗವ ಹೆಗ್ಗೋಡು, ಕುಮಾರಿ ಅರ್ಪಿತಾ ಹೆಗಡೆ ಬೆಂಗಳೂರು, ಸೌಮ್ಯ ಅರುಣ, ಕಿರಣ ಪೈ ಶಿವಮೊಗ್ಗ, ಕುಮಾರಿ ನಾಗಶ್ರೀ ಗೀಜಗಾರ್, ನಾಗೇಂದ್ರ ಮೂರೂರು, ಅವಿನಾಶ್ ಕೊಪ್ಪ ಅಭಿನಯಿಸಿದರು.