ಮೈಸೂರು: ಲೆನಿನ್, ಪೆರಿಯಾರ್ ಪ್ರತಿಮೆ ಧ್ವಂಸ ಖಂಡಿಸಿ ದಸಂಸ ಪ್ರತಿಭಟನೆ

Update: 2018-03-08 16:53 GMT

ಮೈಸೂರು,ಮಾ.8: ತ್ರಿಪುರಾದಲ್ಲಿ ಲೆನಿನ್ ಪ್ರತಿಮೆ ಹಾಗೂ ತಮಿಳುನಾಡಿನಲ್ಲಿ ಪೆರಿಯಾರ್ ಪ್ರತಿಮೆಯನ್ನು ಧ್ವಂಸಗೊಳಿಸಿರುವ ಬಿಜೆಪಿ ಹಾಗೂ ಸಂಘಪರಿವಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯವರು ನಗರದ ಟೌನ್ ಹಾಲ್ ಮುಂಭಾಗವಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

ತ್ರಿಪುರಾದಲ್ಲಿ ಲೆನಿನ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅದೇ ಜಾಗದಲ್ಲಿ ಮತ್ತೆ ಅದೇ ಮಾದರಿಯ ಲೆನಿನ್ ಪ್ರತಿಮೆಯನ್ನು ಸ್ಥಾಪಿಸಬೇಕು. ಜನರ ಮಹಾನ್ ನಾಯಕರಾದ ಲೆನಿನ್ ಮತ್ತು ಪೆರಿಯಾರ್ ಅವರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಎಚ್.ರಾಜಾ ಮತ್ತು ಬಿಜೆಪಿ ಮುಖಂಡ ಸುಬ್ರಹ್ಮಣ್ಯಸ್ವಾಮಿಯ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ತಮಿಳುನಾಡಿನ ತಿರುಪಟೂರ್ ನಗರಪಾಲಿಕೆ ಕಚೇರಿ ಒಳಗಿರುವ ಪೆರಿಯಾರ್ ಅವರ ಪ್ರತಿಮೆಗೆ ಹಾನಿಯುಂಟು ಮಾಡಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಪೆರಿಯಾರ್ ಪ್ರತಿಮೆಗಳಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಕೌದಳ್ಳಿ ಗೋವಿಂದರಾಜು, ಚಿಕ್ಕ ಜವರಯ್ಯ, ದೇವರಾಜು, ಯಡದೊರೆ ಮಹದೇವಯ್ಯ, ಸಂತೋಷ್, ಮೂರ್ತಿ ಕಲ್ಲಹಳ್ಳಿ, ಯಡಕೊಳ ಯತೀಶ್, ಮುರುಡಗಳ್ಳಿ ಮಹದೇವ ಇತರರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News