×
Ad

ಮೈಸೂರಿನ ಜನತೆ, ಅಧಿಕಾರಿಗಳ ಸಹಕಾರದಿಂದ ತೃಪ್ತಿಕರ ಸೇವೆ ಸಲ್ಲಿಸಿದ್ದೇನೆ: ಜಿಲ್ಲಾಧಿಕಾರಿ ಡಿ.ರಂದೀಪ್

Update: 2018-03-08 22:25 IST

ಮೈಸೂರು,ಮಾ.8: ಜಿಲ್ಲಾಧಿಕಾರಿಯಾಗಿ ಇಲ್ಲಿ ಒಂದೂವರೆ ವರ್ಷ ಕೆಲಸ ನಿರ್ವಹಿಸಿರುವುದು ತೃಪ್ತಿಕರವಾಗಿದೆ. ಇಲ್ಲಿನ ಜನತೆ ಹಾಗೂ ಅಧಿಕಾರಿಗಳ ಸಹಕಾರದಿಂದ ಯಶಸ್ವಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಯಿತು. ಇದಕ್ಕಾಗಿ ನಾನು ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಮೈಸೂರು ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ, ವರ್ಗಾವಣೆಗೊಂಡಿರುವ ಡಿ. ರಂದೀಪ್ ಹೇಳಿದರು.

ವರ್ಗಾವಣೆ ಹಿನ್ನೆಲೆ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ವತಿಯಿಂದ ಗುರುವಾರ  ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಕಚೇರಿಯಲ್ಲಿ ಗ್ರೂಪ್ ಡಿ ಸಿಬ್ಬಂದಿಯಿಂದ ಎ.ಡಿ.ಸಿ. ವರೆಗೆ ಎಲ್ಲರೂ ಸಹಕಾರ ನೀಡಿದ್ದರಿಂದ ಉತ್ತಮ ಕೆಲಸ ಮಾಡಲು ಸಾಧ್ಯವಾಯಿತು. ಮೈಸೂರಿನಲ್ಲಿ ಹಲವಾರು ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಜಿಲ್ಲಾಮಟ್ಟದ ಅಧಿಕಾರಿಗಳು ಒಂದು ತಂಡವಾಗಿ ಕೆಲಸ ಮಾಡಿದರು. ನನ್ನ ಅವಧಿಯಲ್ಲಿ ಏನೇ ಉತ್ತಮ ಕೆಲಸವಾಗಿದ್ದರೂ ಅದರ ಶ್ರೇಯಸ್ಸು ಎಲ್ಲರಿಗೂ ಸೇರಬೇಕು ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ. ಶಿವಶಂಕರ್ ಮಾತನಾಡಿ, ಅಭಿವೃದ್ಧಿ ವಿಷಯಗಳು ಜಿಲ್ಲಾ ಪಂಚಾಯಿತಿಗೆ ಹೆಚ್ಚು ಸೇರಿದ್ದರೂ ಸಹ ಜಿಲ್ಲಾಧಿಕಾರಿಗಳ ಆಸಕ್ತಿ, ಸಹಭಾಗಿತ್ವ ಇಲ್ಲದಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ. ರಂದೀಪ್ ಸರ್ ಅವರ ಪ್ರೋತ್ಸಾಹದಿಂದ ಜಿಲ್ಲೆಯಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳು ಆಗಿವೆ ಎಂದು ತಿಳಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಿರಿಯ ಉಪ ನಿರ್ದೇಶಕ ಡಾ. ಕಾ. ರಾಮೇಶ್ವರಪ್ಪ  ಮಾತನಾಡಿ, ಜಿಲ್ಲಾಧಿಕಾರಿ ರಂದೀಪ್ ಅವರ ಪರಿಶ್ರಮದ ಫಲವಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ರತಿಯೊಬ್ಬರಿಗೂ ಉತ್ತಮ ಆಹಾರ ಒದಗಿಸಲು ಸಾಧ್ಯವಾಯಿತು. ಓಪನ್ ಸ್ಟ್ರೀಟ್ ಫೆಸ್ಟಿವಲ್ ಮೂಲಕ ಮೈಸೂರಿಗೆ ಒಂದು ಬ್ರಾಂಡ್ ತಂದುಕೊಟ್ಟರು. ಚಿಕ್ಕ ವಯಸ್ಸಿನ ಅಧಿಕಾರಿಗಳಿಗೆ ಕೋಪ ಜಾಸ್ತಿ. ಆದರೆ ರಂದೀಪ್ ಸರ್ ಅವರು ಯಾವುದಕ್ಕೂ ಕೋಪ ಮಾಡಿಕೊಳ್ಳದೆ ಶಾಂತಚಿತ್ತರಾಗಿ ಕೆಲಸ ನಿರ್ವಹಿಸಿದರು ಎಂದರು.

ಅಪರ ಜಿಲ್ಲಾಧಿಕಾರಿ ಟಿ. ಯೋಗೇಶ ಅವರು ಮಾತನಾಡಿ, ಜಿಲ್ಲಾಧಿಕಾರಿಗಳ ಕಚೇರಿಯನ್ನು ರಂದೀಪ್ ಸರ್ ಅವರು ಈ-ಆಫೀಸ್ ಮಾಡಿದರು. ಇದರಿಂದ ಕಡತಗಳನ್ನು ಬೇಗ ವಿಲೇವಾರಿ ಮಾಡಲು ಸಾಧ್ಯವಾಗುತ್ತಿದೆ. ಕೆಲವು ಕಡತಗಳಿಗೆ 2 ನಿಮಿಷಗಳಲ್ಲಿ ಅನುಮೋದನೆ ಪಡೆದುಕೊಂಡಿದ್ದೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News