×
Ad

ಶಾಸಕ ಶಿವಮೂರ್ತಿ ಪುತ್ರಿ, ನಿರ್ಮಾಪಕ ಸುಂದರ್ ಗೌಡ ಪ್ರಕರಣಕ್ಕೆ ಹೊಸ ತಿರುವು: ಚಾಮುಂಡಿಬೆಟ್ಟದಲ್ಲಿ ಮದುವೆ

Update: 2018-03-08 22:28 IST

ಮೈಸೂರು,ಮಾ.8: ಮಾಸ್ತಿಗುಡಿ ಸಿನಿಮಾದ ನಿರ್ಮಾಪಕ ಪಿ.ಸುಂದರ್ ಗೌಡ ಹಾಗೂ ಮಾಯಕೊಂಡ ಶಾಸಕ ಶಿವಮೂರ್ತಿ ನಾಯಕ್ ಅವರ ಮಗಳು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ ಎನ್ನಲಾಗಿದೆ.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಇಂದು ಮುಂಜಾನೆ ಮದುವೆಯಾಗಿದ್ದಾರೆ ಎಂದು ಸುಂದರ್ ಗೌಡ ಮತ್ತು ಸಂಬಂಧಿಕರು ತಂಗಿರುವ ಹೋಟೆಲ್ ಮೂಲಗಳು ತಿಳಿಸಿವೆ. 

ಈ ಸಂಬಂಧ ಹುಡುಗನ ಕಡೆಯ ಸಂಬಂಧಿಕರು ಬುಧವಾರ ಸಂಜೆಯೇ ಹೋಟೆಲ್‍ನಲ್ಲಿ ರೂಂ ಬಾಡಿಗೆ ಪಡೆದಿದ್ದು, ಇಂದು ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ಮದುವೆ ಮಾಡಿಕೊಂಡು ಬಂದಿದ್ದಾರೆ. ಆದರೆ, ಅಷ್ಟರಲ್ಲಿ ಹೋಟೆಲ್‍ಗೆ ಪೊಲೀಸರು ಬಂದಿದ್ದಾರೆ ಎಂಬ ಮಾಹಿತಿ ಪಡೆದು ಸಂಬಂಧಿಕರು ಮಾತ್ರ ಹೋಟೆಲ್‍ಗೆ ಬಂದಿದ್ದಾರೆ. 

ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಶಾಸಕ ಶಿವಮೂರ್ತಿ ನಾಯಕ್ ಬೆಂಗಳೂರಿನ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಪೊಲೀಸರು ಹೋಟೆಲ್‍ಗೆ ಬಂದು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹುಡುಗಿಯ ಹೇಳಿಕೆ ಪಡೆಯುವವರೆಗೂ  ಹುಡುಗನ ಸಂಬಂಧಿಕರು ಹೋಟೆಲ್ ಬಿಟ್ಟು ತೆರಳದಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ನಿನ್ನೆ ಸಂಜೆಯೇ ಹುಡುಗನ ಸಂಬಂಧಿಕರು ಹೋಟೆಲ್‍ಗೆ ಬಂದು ನಾಲ್ಕು ರೂಂಗಳನ್ನ ಬಾಡಿಗೆಗೆ ಪಡೆದಿದ್ದು, ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಹೋಗಿ ಮದುವೆಯಾಗಿದ್ದಾರೆ. ಈ ಮಧ್ಯೆ ಬೆಳ್ಳಂಬೆಳಗ್ಗೆ ಬೆಂಗಳೂರಿನ ಸುಮಾರು 40 ಕ್ಕೂ ಹೆಚ್ಚು ಪೊಲೀಸರು ಹೋಟೆಲ್‍ಗೆ ಬಂದು ವಿಚಾರಣೆ ನಡೆಸುತ್ತಿದ್ದು, ಹೋಟೆಲ್‍ನ ಸಿಸಿಟಿವಿ ದೃಶ್ಯಗಳನ್ನ ವಶಕ್ಕೆ ಪಡೆದಿದ್ದಾರೆ ಎಂದು ಹೋಟೆಲ್ ಮಾಲೀಕ ಮಾಧ್ಯಮದವರ ಮುಂದೆ ಹೇಳೀಕೆ ನೀಡಿದ್ದಾರೆ. 

ಶಾಸಕರ ಪುತ್ರಿ ಬಂದು ಹೇಳಿಕೆ ನೀಡುವವರೆಗೆ ಸಂಬಂಧಿಕರನ್ನು ಹೋಟೆಲ್‍ನಿಂದ ಬಿಡದಂತೆ ಹೋಟೆಲ್ ಮಾಲೀಕರಿಗೆ ಪೊಲೀಸರು ಸೂಚಿಸಿದ್ದಾರೆ ಎನ್ನಲಾಗಿದೆ. 

ಈ ಮಧ್ಯೆ ಚಾಮುಂಡಿ ಬೆಟ್ಟದಲ್ಲಿ ವಿವಾಹವಾಗಿರುವ ಈ ಜೋಡಿ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಿದ್ದು, ಅಲ್ಲಿ ಪೊಲೀಸ್ ಠಾಣೆಯೊಂದರಲ್ಲಿ ಹೇಳಿಕೆ ನೀಡಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News