×
Ad

ರಿವರ್ ರ‍್ಯಾಫ್ಟಿಂಗ್ ಅನ್ನು ಶಾಶ್ವತವಾಗಿ ನಿಷೇಧಿಸಿ: ಮಾಜಿ ಸಚಿವ ಎಂ.ಸಿ.ನಾಣಯ್ಯ

Update: 2018-03-08 22:54 IST

ಮಡಿಕೇರಿ, ಮಾ.8: ದುಬಾರೆಯಲ್ಲಿ ನಡೆಯುತ್ತಿರುವ ರಿವರ್ ರ್ಯಾಫ್ಟಿಂಗ್‍ನ್ನು ತಾತ್ಕಾಲಿಕವಾಗಿ ನಿಷೇಧಿಸಿರುವ ಜಿಲ್ಲಾಧಿಕಾರಿಗಳ ಕ್ರಮವನ್ನು ಸ್ವಾಗತಿಸಿರುವ ಮಾಜಿ ಸಚಿವ ಎಂ.ಸಿ. ನಾಣಯ್ಯ ಅವರು, ಈ ಆದೇಶವನ್ನು ಶಾಶ್ವತ ಆದೇಶವನ್ನಾಗಿ ಪರಿವರ್ತಿಸುವುದರೊಂದಿಗೆ ಈ ಸಾಹಸಿ ಕ್ರೀಡೆಯ ಜವಬ್ದಾರಿಯನ್ನು ಜಂಗಲ್ ಲಾಡ್ಜಸ್‍ನ ಆಡಳಿತಕ್ಕೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂಬಂಧವಾಗಿ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರಿಗೆ ಪತ್ರ ಬರೆದಿರುವ ನಾಣಯ್ಯ ಅವರು, ದುಬಾರೆ ಅರಣ್ಯ ಪ್ರದೇಶದ ಕಾವೇರಿ ನದಿಯಲ್ಲಿ ರ್ಯಾಫ್ಟಿಂಗ್ ಕಾರ್ಯಾಚರಣೆಯಲ್ಲಿ ನಡೆಯುತ್ತಿರುವ ದಂಧೆ, ಶೋಷಣೆ ಮತ್ತು ಅಪಾಯದ ಕುರಿತು 2012ರ ಮೇ 8ರಂದು ಅಂದಿನ ಅಪರ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರಿಗೆ ಪತ್ರ ಬರೆದು ಈ ದಂಧೆಯನ್ನು ನಿಯಂತ್ರಿಸುವಂತೆ ಕೋರಿದ್ದಲ್ಲದೆ, 2012ರ ನ.21ರಂದು ತಾನು ವಿಧಾನ ಪರಿಷತ್ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೆ. ಅಲ್ಲದೆ 2014ರಲ್ಲಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಅನುರಾಗ್ ತಿವಾರಿ ಅವರಿಗೂ ಪತ್ರ ಬರೆದಿದ್ದೆ. ಆದರೆ ಈ ನಿಟ್ಟಿನಲ್ಲಿ ಯಾವುದೇ ಕ್ರಮವಾಗಿರಲಿಲ್ಲ ಎಂದು ವಿಷಾದಿಸಿದ್ದಾರೆ.

ಪ್ರಸಕ್ತ ಜಿಲ್ಲಾಧಿಕಾರಿಗಳಾಗಿರುವ ತಾವು ದುಬಾರೆ ಅರಣ್ಯ ಪ್ರದೇಶದ ವಿವಿಧ ಭಾಗದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ರಿವರ್ ರ್ಯಾಫ್ಟಿಂಗ್ ದಂಧೆ, ಶೋಷಣೆ, ಜನರ ಪ್ರಾಣಹಾನಿ, ಶಾಂತಿ-ಸುವ್ಯವಸ್ಥೆ ಮತ್ತು ಕಾನೂನುಭಂಗ ಮತ್ತು ಉಲ್ಲಂಘನೆಯಿಂದ ಆಗುತ್ತಿರುವ ಅಪಾಯಕಾರಿ ಪರಿಸ್ಥಿತಿಯನ್ನು ತಡೆಗಟ್ಟಲು ಸಿ.ಆರ್.ಪಿ.ಸಿ. ಕಲಂ 130ರ ಅಡಿಯಲ್ಲಿ ಜಿಲ್ಲೆಯಾದ್ಯಂತ ರಿವರ್ ರ್ಯಾಫ್ಟಿಂಗ್ ಉದ್ದಿಮೆ ನಡೆಸುವುದನ್ನು ಫೆ. 22ರಿಂದ ನಿಷೇಧಿಸಿರುವುದು ಬಹಳ ಸಮಯೋಚಿತವಾದ ಮತ್ತು ಶ್ಲಾಘನೀಯವಾದ ಕ್ರಮವಾಗಿದೆ ಎಂದು ತಿಳಿಸಿದ್ದಾರೆ.

ತಾನು ಈ ಹಿಂದೆ ರಿವರ್ ರ್ಯಾಪ್ಟಿಂಗ್ ದಂಧೆಯ ಬಗ್ಗೆ ಬರೆದಿರುವ ಪತ್ರಗಳಲ್ಲಿ  ಈ ತಾವು ಪ್ರಸಕ್ತ ವ್ಯಕ್ತಪಡಿಸಿರುವ ಆತಂಕಗಳನ್ನು ಮತ್ತು ಅಪಾಯಕಾರಿ ರ್ಯಾಫ್ಟಿಂಗ್ ದಂಧೆಯಲ್ಲಿ ನಡೆಯುತ್ತಿರುವ ಶೋಷಣೆ ಮತ್ತು ಕಾನೂನಿನ ಉಲ್ಲಂಘನೆಯನ್ನು ಸಂಪೂರ್ಣವಾಗಿ ಉಲ್ಲೇಖಿಸುವುದರೊಂದಿಗೆ ಈ ರ್ಯಾಫ್ಟಿಂಗ್ ದಂಧೆಯನ್ನು ಕೂಡಲೇ ನಿಯಂತ್ರಿಸಬೇಕು ಮತ್ತು ರ್ಯಾಫ್ಟಿಂಗ್‍ನ್ನು ನಡೆಸುವುದಾದರೆ ಇದರ ಸಂಪೂರ್ಣ ಜವಬ್ದಾರಿ ಮತ್ತು ಹತೋಟಿಯನ್ನು ದುಬಾರೆಯಲ್ಲಿ ಸರ್ಕಾರದ ವತಿಯಿಂದ ನಡೆಸಲಾಗುತ್ತಿರುವ ಜಂಗಲ್ ಲಾಡ್ಜ್ ಉದ್ಯಮಕ್ಕೆ ವಹಿಸಬೇಕೆಂದು ಕೋರಿದ್ದೆ.  2012ರಲ್ಲಿ ಬರೆದ ಮೊದಲನೇ ಪತ್ರದಲ್ಲಿ ತಾವು ಆತಂಕ ಪಡಿಸಿರುವ ಎಲ್ಲಾ ಆತಂಕಗಳನ್ನು ಅಂದಿನ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ತಿಳಿಸಿದ ಮೇರೆ ಅವರು ಇದರ ಬಗ್ಗೆ ಗಮನಹರಿಸಿ ರ್ಯಾಫ್ಟಿಂಗ್ ಕಾರ್ಯಕ್ರಮವನ್ನು ಜಂಗಲ್ ಲಾಡ್ಜ್ ಮುಖಾಂತರವೇ ನಡೆಸುವಂತೆ ಕಾರ್ಯಕ್ರಮ ಹಾಕಿಕೊಂಡಿರುವುದಾಗಿ ತಿಳಿಸಿದ್ದರು ಎಂದು ನಾಣಯ್ಯ ವಿವರಿಸಿದ್ದಾರೆ.

ಮೇಲಿನ ಕಾರಣಗಳಿಂದ ಮತ್ತು ತಾವು ಇತ್ತೀಚೆಗೆ ಕೊಡಗು ಜಿಲ್ಲೆಯ ಕಾವೇರಿ ನದಿ ತಟದಲ್ಲಿ ರ್ಯಾಫ್ಟಿಂಗ್‍ನ್ನು ಸ್ಥಗಿತಗೊಳಿಸಬೇಕಾದ ಅನಿವಾರ್ಯತೆಯ ಕಾರಣಗಳಿಂದಾಗಿ ಮತ್ತು ಈ ಒಂದು ರ್ಯಾಫ್ಟಿಂಗ್ ಕ್ರೀಡೆಯನ್ನು ಖಾಸಗಿ ವ್ಯಕ್ತಿಗಳು ನಡೆಸುತ್ತಿರುವುದರಿಂದ ಎದುರಿಸಬೇಕಾದ ಅಪಾಯಕಾರಿ ದುರಂತಗಳನ್ನು ಮತ್ತು ಕಾನೂನಿನ ಉಲ್ಲಂಘನೆಯನ್ನು ಶಾಶ್ವತವಾಗಿ ನಿಯಂತ್ರಿಸಬೇಕಾಗಿರುವುದರಿಂದ ತಾವು ತಾತ್ಕಾಲಿಕವಾಗಿ ಹೊರಡಿಸಿರುವ ಆದೇಶವನ್ನು ಶಾಶ್ವತ ಆದೇಶವನ್ನಾಗಿ ಪರಿವರ್ತಿಸಬೇಕು ಎಂದು ನಾಣಯ್ಯ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಪ್ರವಾಸಿಗರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ, ಕಾನೂನಿನ ಸುರಕ್ಷತೆಯ ಹಿತದೃಷ್ಟಿಯಿಂದ ಮತ್ತು ರ್ಯಾಫ್ಟಿಂಗ್ ದಂಧೆಯಿಂದ ಮತ್ತು ಕಾನೂನಿನ ಉಲ್ಲಂಘನೆಯಿಂದ ಇತ್ತೀಚಿನ ವರ್ಷಗಳಲ್ಲಿ ಹಲವಾರು ಪ್ರವಾಸಿಗರು ಮೃತಪಟ್ಟಿದ್ದು, ಈ ಒಂದು ರ್ಯಾಪ್ಟಿಂಗ್ ಕಾರ್ಯಕ್ರಮವನ್ನು ಮುಂದುವರಿಸಬೇಕೆಂದು ಜಿಲ್ಲಾಡಳಿತ, ಅರಣ್ಯ ಮತ್ತು ಪರಿಸರ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ಮುಖ್ಯಸ್ಥರು ತೀರ್ಮಾನಿಸಿದರೆ ಈ ಸಾಹಸಿ ಕ್ರೀಡೆಯ ಜವಾಬ್ದಾರಿಕೆಯನ್ನು ವೈಜ್ಞಾನಿಕವಾಗಿ, ಸುರಕ್ಷಿತವಾಗಿ ಮತ್ತು ಪ್ರವಾಸಿಗರು ಹಾಗೂ ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜಂಗಲ್ ಲಾಡ್ಜ್ ನ ಆಡಳಿತಕ್ಕೆ ವಹಿಸಲು ಆಡಳಿತಾತ್ಮಕ ತೀರ್ಮಾನ ಕೈಗೊಳ್ಳಬೇಕು ಎಂದೂ ನಾಣಯ್ಯ ಅವರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News