ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಮೂಲಕ ಮುಖ್ಯ ವಾಹಿನಿಗೆ ಬರಬೇಕು: ಎಂಎಲ್‍ಸಿ ವೀಣಾ ಅಚ್ಚಯ್ಯ
ಮಡಿಕೇರಿ, ಮಾ.8: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಲು ಆತ್ಮವಿಶ್ವಾಸವನ್ನು ತೋರಬೇಕೆಂದು ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ಕರೆ ನೀಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಸ್ತ್ರೀಶಕ್ತಿ ಒಕ್ಕೂಟ ಇವರ ಸಹಯೋಗದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಗುರುವಾರ ನಡೆದ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಿಳೆಯರಿಗಾಗಿ ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ, ಆ ದಿಸೆಯಲ್ಲಿ ಪ್ರಸಕ್ತ ಬಜೆಟ್‍ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 50 ಸಾವಿರ ರೂ ಸಹಾಯಧನದಲ್ಲಿ ದ್ವಿಚಕ್ರ ವಾಹನ ಕಲ್ಪಿಸಲು ಪ್ರಕಟಿಸಿದೆ. ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು, ಆತ್ಮವಿಶ್ವಾಸದ ಬದುಕಿಗೆ ಸಹಕಾರಿಯಾಗಲಿದೆ ಎಂದು ವೀಣಾ ಅಚ್ಚಯ್ಯ ಅಭಿಪ್ರಾಯಪಟ್ಟರು.
ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಮಾತನಾಡಿ ಸ್ತ್ರೀಶಕ್ತಿ ಗುಂಪುಗಳು ಗ್ರಾಮೀಣ ಬ್ಯಾಂಕುಗಳು ಇದ್ದಂತೆ, ಆ ನಿಟ್ಟಿನಲ್ಲಿ ಸ್ತ್ರೀಶಕ್ತಿ ಗುಂಪುಗಳು ಸ್ವಾವಲಂಬಿ ಬದುಕಿಗೆ ಸಹಕಾರಿ ಎಂದು ಹೇಳಿದರು.
ಪ್ರತಿಯೊಬ್ಬರ ಬದುಕು ಚೆನ್ನಾಗಿ ಕಾಣಬೇಕಾದರೆ ಹೆಣ್ಣು ಅಥವಾ ಗಂಡು ಯಾವುದೇ ಮಗು ಇರಲಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗಬೇಕು. ಸಮ ಸಮಾಜ ನಿರ್ಮಾಣಕ್ಕೆ ಮಹಿಳೆಯರು ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಟಿ.ಪಿ.ರಮೇಶ್ ಹೇಳಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷರಾದ ಮಾಸ್ಟರ್ ಆರ್‍ಕೆಜಿಎಂಎಂ ಮಹಾಸ್ವಾಮೀಜಿ ಅವರು ಮಾತನಾಡಿ, ರಾಷ್ಟ್ರದಲ್ಲಿ ಕಾನೂನಿಗೆ ಬುನಾದಿ, ದೇಶದ ಸಂವಿಧಾನವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ಅರಿವು ಹೊಂದಿರಬೇಕು ಎಂದರು.
ಭಾರತದ ಸಂವಿಧಾನದಲ್ಲಿ ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳು ಇದ್ದು, ಅವುಗಳನ್ನು ಬಳಸಿಕೊಳ್ಳುವಂತಾಗಬೇಕು. ಕಾನೂನಿನಲ್ಲಿ ಮಹಿಳೆಯರಿಗೆ ವಿಶೇಷ ರಕ್ಷಣೆ ಒದಗಿಸಿದೆ. ಇಂದಿರಾ ಗಾಂಧಿ, ಕಲ್ಪನಾ ಚಾವ್ಲಾ ಮತ್ತಿತರ ಮಹಿಳೆಯರು ರಾಷ್ಟ್ರದಲ್ಲಿ ಮಹಾನ್ ಸಾಧನೆ ಮಾಡಿದ್ದಾರೆ ಎಂದು ಅವರು ವಿವರಿಸಿದರು.
ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮಾತನಾಡಿ, ಮಹಿಳಾ ದಿನಾಚರಣೆಯನ್ನು ಪ್ರತಿ ಕುಟುಂಬದಲ್ಲಿ ಸಂಭ್ರಮ, ಸಡಗರದಿಂದ ಆಚರಿಸುವಂತಾಗಬೇಕು ಎಂದು ಕರೆ ನೀಡಿದರು.
ಹಿಂದೆ ಹೆಣ್ಣು ಮಗು ಹುಟ್ಟಿದರೆ ಮೂಗು ಮುರಿಯುವ ಕಾಲವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇದು ಬದಲಾಗಿದೆ. ಸಮಾಜದಲ್ಲಿ ಹೆಣ್ಣಿಗೆ ಸಮಾನ ಅವಕಾಶಗಳಿದ್ದು, ಹೆಣ್ಣು ಮಕ್ಕಳಿಗೆ ಒಳ್ಳೆಯ ಮತ್ತು ಕಡ್ಡಾಯ ಶಿಕ್ಷಣ ನೀಡುವಂತಾಗಬೇಕು ಎಂದರು.
‘ಮಹಿಳೆಯರು ದುಡಿಯುವಂತಾಗಬೇಕು. ದುಡಿದು ಬದುಕಿದರೆ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು, ಇದರಿಂದ ಆತ್ಮಾಭಿಮಾನ ಮತ್ತು ಆತ್ಮಸ್ಥೈರ್ಯ ಹೆಚ್ಚಲಿದೆ ಎಂದು ಜಿಲ್ಲಾಧಿಕಾರಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.’
ವಿಶ್ವ ಮಹಿಳಾ ದಿನಾಚರಣೆ ಈ ಬಾರಿ ‘ಪ್ರಗತಿಗಾಗಿ ಹೋರಾಟ-ಅಭಿವೃದ್ಧಿಗೆ ಕೈಜೋಡಿಸಿ’ ಎಂಬ ದ್ಯೇಯ ವಾಕ್ಯವನ್ನು ಹೇಳಲಾಗಿದ್ದು, ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಮಾತನಾಡಿ ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ. ಆದ್ದರಿಂದ ಹೆಣ್ಣು ಸಮಾಜವನ್ನು ತಿದ್ದುತ್ತಾಳೆ ಮತ್ತು ಇತರರಿಗೆ ಕಲಿಸುತ್ತಾಳೆ. ಒಂದು ಸಂಸಾರದ ನೌಕೆಯನ್ನು ಸಾಗಿಸುವಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯ ಎಂದು ತಿಳಿಸಿದರು.
ಜಿ.ಪಂ.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅದ್ಯಕ್ಷರಾದ ಎಂ.ಕೆ.ವಿಜು ಸುಬ್ರಮಣಿ ಮಾತನಾಡಿ ಭಾರತ ಮಾತೆಗೆ ಮಾತೃ ಸ್ಥಾನವನ್ನು ನೀಡಿದ್ದೇವೆ. ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆಯರು ಇರುತ್ತಾರೆ ಎಂದು ತಿಳಿಸಿದರು.
ತಾ.ಪಂ.ಅಧ್ಯಕ್ಷರಾದ ತೆಕ್ಕಡ ಶೋಭಾ ಮೋಹನ್ ಮಾತನಾಡಿ ತಾಯಿ ಮಗುವನ್ನು ಬೆಳಸಿ ರಕ್ಷಣೆ ಮಾಡುವಲ್ಲಿ ಅವಳ ಪಾತ್ರ ಮುಖ್ಯವಾದದ್ದು, ಆರ್ಥಿಕವಾಗಿ ಸಬಲರಾಗಿ ತಮ್ಮ ಬದುಕು ಕಟ್ಟಿಕೊಳ್ಳಿ ಎಂದು ತಿಳಿಸಿದರು.
ಮಕ್ಕಳ ರಕ್ಷಣಾಧಿಕಾರಿ ಮಮ್ತಾಜ್ ಅವರು ಮತದಾನದ ಮಹತ್ವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು, ಅಂಗನವಾಡಿಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸ್ತೀಶಕ್ತಿ ಉತ್ತಮ ಗುಂಪುಗಳಿಗೆ ಪ್ರಶಸ್ತಿ ಹಾಗೂ ನಗದು ಬಹುಮಾನ ವಿತರಿಸಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿ.ಜೆ.ಎಂ ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವಿಜಯ ಕುಮಾರ್, ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ, ಜಿ.ಪಂ.ಸದಸ್ಯರಾದ ಕೆ.ಪಿ.ಚಂದ್ರಕಲಾ, ಸುನಿತಾ, ಸ್ತ್ರೀಶಕ್ತಿ ಒಕ್ಕೂಟಗಳ ಅಧ್ಯಕ್ಷರಾದ ಮೇರಿ ಅಂಬೂದ, ಕವಿತಾ, ರಜನಿ, ರೆಹನಾ ಬಾನು, ತಾರಾಮಣಿ, ರತ್ನ ಇತರರು ಹಾಜರಿದ್ದರು.