ನಾನು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ : ಬಿ.ಕೆ. ರಂಗಸ್ವಾಮಿ

Update: 2018-03-09 11:40 GMT

ಹಾಸನ,ಮಾ.9: ಮುಂದೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಹಣ, ಹೆಂಡ ಆಮಿಷಗಳಿಗೆ ಒಳಗಾಗದೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಬೇಕು. ನಾನು ಕೂಡ ಹಾಸನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಬಿ.ಕೆ. ರಂಗಸ್ವಾಮಿ ತಿಳಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಸಿಕೊಂಡಿದ್ದು, ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‍ಗೆ ಅರ್ಜಿ ಹಾಕಿ ವರಿಷ್ಠರ ಗಮನ ಸೆಳೆದಿದ್ದೇನೆ. ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಕಳೆದ ಹಲವು ಬಾರಿ ಶಾಸಕರಾಗಿರುವ ಎಚ್.ಎಸ್.ಪ್ರಕಾಶ್ ಅವರ ಸಂಪೂರ್ಣ ನಿರ್ಲಕ್ಷ್ಯದಿಂದ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳು ಕಾಡುತ್ತಿದೆ. ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ, ರಸ್ತೆ, ಒಳಚರಂಡಿ ವ್ಯವಸ್ಥೆಯ ಸಮಸ್ಯೆ ಸೇರಿದಂತೆ ಸಾಕಷ್ಟು ಸಮಸ್ಯೆಗಳಿದ್ದು, ಅದನ್ನು ಬಗೆಹರಿಸುವಲ್ಲಿ ಶಾಸಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಶಾಸಕರ ದಿವ್ಯ ನಿರ್ಲಕ್ಷ್ಯದಿಂದ ಕ್ಷೇತ್ರ ಸಂಪೂರ್ಣವಾಗಿ ಹಿಂದೆ ಉಳಿದಿದೆ.  ಹಾಸನ ಜಿಲ್ಲಾ ಕೇಂದ್ರ ಸಂಪೂರ್ಣವಾಗಿ ಅಭಿವೃದ್ಧಿಯಲ್ಲಿ ಹಿನ್ನೆಡೆಯಾಗಿದೆ ಎಂದು ದೂರಿದರು.

ನನಗೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ. ಅನ್ಯಮಾರ್ಗದಿಂದ ಹಣ ಸಂಪಾದನೆ ಮಾಡುವ ಅಗತ್ಯವಿಲ್ಲ. ಇರುವಷ್ಟು ದಿನಗಳ ಕಾಲ ಜನರ ಸೇವೆ ಮಾಡುವ ಮನಸ್ಸು ಹೊಂದಿದ್ದೇನೆ. ಈ ಕಾರಣ ಇಷ್ಟುಕೊಂಡು ಟಿಕೆಟ್ ಅರ್ಜಿ ಹಾಕಿದ್ದು, ಕ್ಷೇತ್ರದ ಜನರು ಆಶೀರ್ವಾದ ಮಾಡಿದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ನಾರಾಯಣದಾಸ್, ನಾಗೇಂದ್ರ, ನಂಜೇಗೌಡ ಮತ್ತು ರಂಗಪ್ಪ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News