×
Ad

ಹನೂರು : ಅಸ್ಪೃಶ್ಯತಾ ನಿವಾರಣೆ ಕುರಿತ ವಿಚಾರ ಸಂಕಿರಣ

Update: 2018-03-09 17:16 IST

ಹನೂರು,ಮಾ.9 : ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲಿ ಸಮಾಜದಲ್ಲಿನ ಹಿಂದುಳಿದ ವರ್ಗದವರ ಮೇಲೆ ನಡೆಯುತ್ತಿದ್ದ ದೌರ್ಜನ್ಯ, ಅನ್ಯಾಯ ಹಾಗೂ ಅಸ್ಪೃಶ್ಯತೆ ವಿರುದ್ಧ ಹೋರಾಡಿದವರಲ್ಲಿ ಗಾಂಧೀಜಿ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಅವರ ಪಾತ್ರ ಅಪಾರ ಎಂದು ತಾಪಂ ಶಿಕ್ಷಣ ಮತ್ತು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಜವಾದ್ ಆಹಮದ್ ತಿಳಿಸಿದರು. 

ಹನೂರು ಸಮೀಪ ರಾಮಾಪುರದ ಡಾ. ಬಾಬು ಜಗಜೀವನರಾಮ್ ಸಮುದಾಯ ಭವನದಲ್ಲಿ ಶುಕ್ರವಾರ ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಅಸ್ಪೃಶ್ಯತಾ ನಿವಾರಣೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಪ್ರತಿಯೊಬ್ಬರೂ ಶಿಕ್ಷಣ ಪಡೆದಾಗ ಮಾತ್ರ ಸಮಾಜದಲ್ಲಿ ಅಸ್ಪೃಶ್ಯತೆ ನಿವಾರಣೆಯಾಗಲು ಸಾಧ್ಯ. ಆದುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಈ ದಿಸೆಯಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಆದುದರಿಂದ ವಿದ್ಯಾರ್ಥಿಗಳು ಈ ಬಗ್ಗೆ ಪಾಲಕರಲ್ಲಿ ಅರಿವು ಮೂಡಿಸಬೇಕಿದೆ. ಅಸ್ಪೃಶ್ಯತೆ ನಿವಾರಣೆಯಾಗಬೇಕಾದರೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎಂದು ತಿಳಿಸಿದರು.

ಪ್ರಸ್ತುತ ದಿನಗಳಲ್ಲೂ ಸಹ ಅಸ್ಪೃಶ್ಯತೆ ಒಂದು ಸಾಮಾಜಿಕ ಪಿಡುಗಾಗಿದೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಭಾತೃತ್ವ ಹಾಗೂ ಸಮಾನತೆ ನೆಲೆಸಬೇಕಾದರೆ ಅಸ್ಪೃಶ್ಯತೆಯನ್ನು ನಿವಾರಿಸುವುದು ಅನಿವಾರ್ಯವಾಗಿದೆ ಎಂದರು 

ವಕೀಲ ಡಿ.ವೆಂಕಟಾಚಲ ಮಾತನಾಡಿ, ಜನರಲ್ಲಿ ಕಾನೂನಿನ ಬಗ್ಗೆ ತಿಳುವಳಿಕೆ ಮೂಡಿಸುವ ಸಲುವಾಗಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ದಿಸೆಯಲ್ಲಿ ಎಸ್ಸಿ, ಎಸ್ಟಿ ವರ್ಗದ ಜನರಿಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕಾನೂನು ಸಲಹಾ ಕೇಂದ್ರದ ಮೂಲಕ ಉಚಿತ ಕಾನೂನು ಸೇವೆಯನ್ನು ನೀಡಲಾಗುತ್ತಿದೆಯಲ್ಲದೇ ಕಾನೂನಿನ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಸಮಾಜದಲ್ಲಿ ಅಸ್ಪೃಶ್ಯತೆಯಿಂದ ಅಸಮಾನತೆ ತಾಂಡವಾಡುತ್ತಿದೆ. ಆದುದರಿಂದ ಅಸ್ಪೃಶ್ಯತೆ ನಿವಾರಣೆಯಾಗಬೇಕಾದರೆ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಬೇಕು. ಇದರ ಜತೆಗೆ ಪ್ರತಿಯೊಬ್ಬರೂ ಅಕ್ಷರಸ್ಥರಾಗಬೇಕು ಎಂದರು. 

ಇದೇ ವೇಳೆ ಅಸ್ಪೃಶ್ಯತೆ ನಿವಾರಣೆ ಕುರಿತು ಚಾ.ನಗರ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಪಿ. ದೇವರಾಜು ವಿಷಯ ಮಂಡಿಸಿದರು. ಕಾರ್ಯಕ್ರಮಕ್ಕೂ ಮುನ್ನಾ ಗ್ರಾಮದಲ್ಲಿ ಕಲಾ ತಂಡದ ವತಿಯಿಂದ ಅಸ್ಪೃಶ್ಯತೆ ನಿವಾರಣೆ ಕುರಿತು ಬೀದಿ ನಾಟಕ ಆಯೋಜಿಸಲಾಗಿತ್ತು. 

ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಮಂಜುಳಾರಂಗಸ್ವಾಮಿ ತಾಪಂ ಸದಸ್ಯ ರಾಜೇಂದ್ರ, ಗ್ರಾಪಂ ಅಧ್ಯಕ್ಷೆ ನಲ್ಲಮ್ಮ, ಉಪಾಧ್ಯಕ್ಷೆ ಕನಕ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಕೆ. ಮಂಜುಳಾ,  ಪ್ರಭಾರ ನಿರ್ವಹಣಾಧಿಕಾರಿ ಮಂಜುನಾಥ್ ,ಪಿಡಿಒ ಮಹದೇವಸ್ವಾಮಿ ಹಾಗೂ ಇನ್ನಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News