×
Ad

ಪ್ರತಿಮೆ ನಾಶ ಮಾಡುವವರ ವಿರುದ್ಧ ಕಠಿಣ ಕ್ರಮ ಅಗತ್ಯ: ಡಿ.ವಿ.ಸದಾನಂದ ಗೌಡ

Update: 2018-03-09 18:38 IST

ಬೆಂಗಳೂರು, ಮಾ.9: ದೇಶದಲ್ಲಿ ಸ್ಥಾಪನೆಗೊಂಡಿರುವ ಯಾವುದೆ ಪ್ರತಿಮೆಯನ್ನು ನಾಶ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದರು.

ಶುಕ್ರವಾರ ನಿಟ್ಟೆ ಮೀನಾಕ್ಷಿ ತಾಂತ್ರಿಕ ವಿದ್ಯಾಲಯ ವತಿಯಿಂದ ಆಯೋಜಿಸಿದ್ದ ‘ರಾಷ್ಟ್ರಮಟ್ಟದ ವಾರ್ಷಿಕ ತಂತ್ರಜ್ಞಾನ -ಸಾಂಸ್ಕೃತಿಕ ಹಬ್ಬ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದೇಶಿ ವ್ಯಕ್ತಿಯ ಪ್ರತಿಮೆ ದೇಶದಲ್ಲಿ ಸ್ಥಾಪನೆಗೆ ವಿರೋಧವಿದೆ. ಆದರೂ ಈಗಾಗಲೆ ಸ್ಥಾಪಿಸಿರುವ ಪ್ರತಿಮೆಗೆ ಕಾನೂನು ಬಾಹಿರವಾಗಿ ಧ್ವಂಸ ಮಾಡುವುದು ಸರಿಯಲ್ಲವೆಂದು ತಿಳಿಸಿದರು.

ಸಾರ್ವಜನಿಕ ಸ್ಥಳದಲ್ಲಿ ಸ್ಥಾಪನೆಗೊಂಡಿರುವ ಪ್ರತಿಮೆಗಳು ಬೇಡವಾದರೆ, ಅದರ ತೆರವಿಗೆ ಕಾನೂನು ಕ್ರಮಗಳಿವೆ. ಆದರೆ, ಜನತೆಯ ಭಾವನೆಗಳಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಪ್ರತಿಮೆಗಳನ್ನು ಧ್ವಂಸ ಮಾಡಲಾಗಿದ್ದು, ಆರೋಪಿಗಳು ಯಾವುದೆ ಸಮದಾಯಕ್ಕೆ ಸೇರಿದ್ದರೂ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಜನತೆಯ ರಕ್ಷಣೆ ಮರೀಚಿಕೆ: ಅಪರಾಧ ಪ್ರಕರಣಗಳಿಗೆ ನ್ಯಾಯ ಒದಗಿಸಬೇಕಾಗಿದ್ದ ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿಗೆ ರಕ್ಷಣೆ ಇಲ್ಲವಾದರೆ, ಇನ್ನು ಜನ ಸಾಮಾನ್ಯರ ರಕ್ಷಣೆ ಹೇಗೆ ಸಾಧ್ಯ. ರಾಜ್ಯದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಹಲ್ಲೆ ಹಾಗೂ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News