×
Ad

ಹೊಸ ನಾಡಧ್ವಜ ನಮಗೆ ಬೇಕಿಲ್ಲ : ವಾಟಾಳ್ ನಾಗರಾಜ್

Update: 2018-03-09 18:43 IST

ಬೆಂಗಳೂರು, ಮಾ.9: ರಾಜ್ಯ ಸರಕಾರದ ಹೊಸ ಮಾದರಿಯ ನಾಡ ಧ್ವಜ ನಮಗೆ ಬೇಕಿಲ್ಲ. ಐದು ದಶಕಗಳಿಂದ ಕನ್ನಡಿಗರ ಭಾವನೆಗಳ ಬೆಳಕಾಗಿದ್ದ ಹಾಲಿ ಧ್ವಜವೇ ನಾಡಧ್ವಜವಾಗಿ ಮುಂದುವರಿಯಲಿ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದರು.

ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಹೊಸದಾಗಿ ಮೂರು ಬಣ್ಣದ ಹೊಸ ನಾಡ ಧ್ವಜ ಅನಾವರಣಗೊಳಿಸಿದೆ. ಆದರೆ, ನಮಗೆ ಕೆಂಪು ಮತ್ತು ಹಳದಿ ಬಣ್ಣದ ಹಳೆಯ ಧ್ವಜವೇ ಖಾಯಂ ಆಗಿರಬೇಕು ಎಂದರು.

ಸಾಹಿತಿಗಳಿಗೆ ಗೊತ್ತಿಲ್ಲ: ಐದು ದಶಕಗಳ ಹಿಂದೆ ಮ.ರಾಮಮೂರ್ತಿ ಹಾಗೂ ನಾವು ಕೆಂಪು-ಹಳದಿ ಕರ್ನಾಟಕದ ಭೂಪಟ ಹಾಗೂ ಏಳು ತೆನೆಗಳುಳ್ಳ ಧ್ವಜವನ್ನು ರೂಪಿಸಿದ್ದೆವು. ನಂತರ ರಾಮಮೂರ್ತಿ ಅವರು ಹಳದಿ-ಕೆಂಪು ಬಾವುಟವೇ ಇರಲಿ ಎಂದು, ಅದು ನಮ್ಮ ನಾಡಿನ ಬಾವುಟವೆಂದು ಅಂದೇ ಘೋಷಣೆ ಮಾಡಿದ್ದೇವೆ. ಇದೀಗ ಏಕಾಏಕಿ ಬದಲಾವಣೆ ಮಾಡುವ ಅಗತ್ಯತೆ, ಅನಿವಾರ್ಯತೆ ಏನಿತ್ತು. ನಾಡಿನ ಧ್ವಜದ ಮಹತ್ವ ಅರಿಯದ ಕೆಲವು ಸಾಹಿತಿಗಳು, ಬುದ್ಧಿಜೀವಿಗಳು ಇದಕ್ಕೆ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿದರು.

ಸಾಹಿತಿಗಳು, ಬರಹಗಾರರು, ಅಧಿಕಾರಿಗಳು ಸೇರಿ ಹೊಸ ನಾಡಧ್ವಜ ರೂಪಿಸಿದ್ದಾರೆ. ಆದರೆ, ಇದೇ ಸಾಹಿತಿಗಳು ಹಳದಿ, ಕೆಂಪು ಬಣ್ಣದ ಧ್ವಜವನ್ನೇ ಕಳೆದ ಐದು ದಶಕಗಳಿಂದಲೂ ನಾಡಧ್ವಜವೆಂದು ಹಾರಿಸುತ್ತ ಬಂದಿದ್ದರು. ಪ್ರತೀ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ನಾಡಧ್ವಜಾರೋಹಣ ನಡೆಯುತ್ತಿತ್ತು. ನ.1ರಂದು ನಡೆಯುತ್ತಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸರಕಾರವೇ ಹಳದಿ-ಕೆಂಪು ಬಣ್ಣದ ಧ್ವಜವನ್ನು ಹಾರಿಸುತ್ತಿತ್ತು. ಆಗ ಇದು ಸರಕಾರಿ ಧ್ವಜವಾಗಿರಲಿಲ್ಲವೆ ಎಂದ ಅವರು, ಹಳದಿ-ಕೆಂಪು-ಬಿಳಿ ಮೂರು ಬಣ್ಣ ಹಾಗೂ ಗಂಡುಬೇರುಂಡದ ಚಿಹ್ನೆಯುಳ್ಳ ಧ್ವಜ ರೂಪಿಸಿರುವ ಕ್ರಮ ಸರಿಯಲ್ಲ ಎಂದು ಹೇಳಿದರು.

‘ಯಾವುದೇ ಕಾರಣಕ್ಕೂ ಸರಕಾರ ರೂಪಿಸಿರುವ ಧ್ವಜವನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು’
-ವಾಟಾಳ್ ನಾಗರಾಜ್, ಕನ್ನಡ ಹೋರಾಟಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News