ಮಾ.14ರ ಸಂಪುಟ ಸಭೆಯಲ್ಲಿ ಸೂಕ್ತ ನಿರ್ಧಾರ: ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ
ಬೆಂಗಳೂರು, ಮಾ. 9: ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ಕಲ್ಪಿಸುವ ಸಂಬಂಧ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಸಮಿತಿಯ ವರದಿ ಬಗ್ಗೆ ಮಾ.14ರ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬವಸರಾಜ ರಾಯರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನ್ಯಾ.ನಾಗಮೋಹನ್ ದಾಸ್ ಸಮಿತಿ ವರದಿ ಇನ್ನೂ ನಮ್ಮ ಕೈ ಸೇರಿಲ್ಲ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಬೇಡಿಕೆ ಹಳೆಯದು: ಲಿಂಗಾಯತರು ಮತ್ತು ವೀರಶೈವರು ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾನಮಾನಕ್ಕಾಗಿ ಹತ್ತಾರು ವರ್ಷಗಳಿಂದ ಆಗ್ರಹಿಸುತ್ತಿದ್ದಾರೆ ಎಂದ ಅವರು, ಬಹುದೇವೋಪಾಸನೆ, ಮೂರ್ತಿ ಪೂಜೆ ನಮ್ಮಲ್ಲಿಲ್ಲ. ಹೀಗಾಗಿ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಬೇಡಿಕೆ ಇಡಲಾಗಿದೆ ಎಂದರು.
ಮುಖ್ಯಮಂತ್ರಿ ಪ್ರತ್ಯೇಕ ಧರ್ಮಕ್ಕೆ ಪ್ರಸ್ತಾವನೆ ಇಟ್ಟಿಲ್ಲ. ಸ್ವತಂತ್ರ ಧರ್ಮ ಮಾನ್ಯತೆ ನೀಡಲು ವೀರಶೈವ ಮತ್ತು ಲಿಂಗಾಯತ ಸಮುದಾಯದಿಂದಲೇ ಬೇಡಿಕೆ ಬಂದಿದೆ ಎಂದ ಅವರು, ಮಾತೇ ಮಹಾದೇವಿ ಸೇರಿದಂತೆ ವಿವಿಧ ಮಠಾಧೀಶರು ಸ್ವತಂತ್ರ ಧರ್ಮಕ್ಕೆ ಆಗ್ರಹಿಸುತ್ತಿದ್ದಾರೆ ಎಂದು ಹೇಳಿದರು.
ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆ ಕುರಿತು ನಮ್ಮಲ್ಲಿ ಗೊಂದಲವಿದೆ. ನಾವು ವೀರಶೈವರ ವಿರುದ್ಧ ಇಲ್ಲ. ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾನಮಾನ ಕಲ್ಪಿಸಿದರೆ ಸಮುದಾಯಕ್ಕೆ ಒಳ್ಳೆಯದಾಗುತ್ತದೆ. ಆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ನ್ಯಾ. ನಾಗಮೋಹನ್ ದಾಸ್ ಸಮಿತಿ ರಚಿಸಿದ್ದರು. ಸಮಿತಿಯು ಪ್ರತ್ಯೇಕ ಲಿಂಗಾಯತ ಧರ್ಮ ಮತ್ತು ಅಲ್ಲಸಂಖ್ಯಾತ ಸ್ಥಾನಮಾನಕ್ಕೆ ಶಿಫಾರಸು ಮಾಡಿದೆ ಎಂದರು.
ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಕುರಿತ ಚರ್ಚೆ ಅಪೂರ್ಣವಾಗಿದೆ. ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಮತ್ತು ಕೃಷಿ ಮತ್ತು ತೋಟಗಾರಿಕೆ ಸಚಿವ ಎಸ್. ಎಸ್.ಮಲ್ಲಿಕಾರ್ಜುನ ರಾಜೀನಾಮೆ ನೀಡುವ ಬಗ್ಗೆ ಮಾತನಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಹಿರಿಯರಾದ ಶಾಮನೂರು ಶಿವಶಂಕರಪ್ಪನವರು ಸಮುದಾಯದ ಸಚಿವರೊಂದಿಗೆ ಚರ್ಚಿಸಲಿ. ಶಿವಶಂಕರಪ್ಪನವರೂ ಸಮ್ಮತಿಸುವ ಭರವಸೆ ಇದೆ. ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಸಿಕ್ಕಿದ್ದರೆ ಇತರೇ ಅಲ್ಪಸಂಖ್ಯಾತ ಧರ್ಮಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.
ಋಗ್ವೇದದ ಪ್ರಕಾರ ವೀರಶೈವ ಮತ್ತು ಲಿಂಗಾಯತರು ಹಿಂದೂಗಳಲ್ಲ. ಹೀಗಾಗಿ ಈ ಹಿಂದೆ ಎಲ್.ಕೆ.ಅಡ್ವಾಣಿ ವೀರಶೈವ ಮಹಾಸಭಾದ ಮನವಿ ತಿರಸ್ಕರಿಸಿದ್ದರು. ಇದೀಗ ಅದೇ ಬೇಡಿಕೆ ಇಡಲಾಗಿದೆ ಎಂದ ಅವರು, ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ಪಡೆಯಬೇಕಾದರೆ ಲಿಂಗಾಯತ ಧರ್ಮ ಎಂದೇ ಹೆಸರಿಸಬೇಕು ಎಂದು ಆಗ್ರಹಿಸಿದರು.
ಶಬ್ದ ವ್ಯಾಮೋಹ ಬಿಡಿ: ನಾವು ಪಂಚ ಪೀಠಾಧೀಶ್ವರರ ವಿರುದ್ದ ಅಲ್ಲ. ಅವರು ತಮ್ಮ ನಿಲುವನ್ನು ಬದಲಾವಣೆ ಮಾಡಿಕೊಳ್ಳಬೇಕೆಂದು ನಮ್ಮ ಮನವಿ. ಈಗಲೂ ಕಾಲಾವಕಾಶವಿದೆ. ಶಿವಶಂಕರಪ್ಪ ಹಾಗೂ ಪಂಚಾಚಾರ್ಯರು ವೀರಶೈವ ಶಬ್ದದ ಮೇಲಿನ ವ್ಯಾಮೋಹ ಬಿಟ್ಟು, ಸಮಾಜದ ಹಿತದೃಷ್ಟಿಯಿಂದ ಸಹಕಾರ ನೀಡಬೇಕೆಂದು ಕೋರಿದರು.
'ಬಿಜೆಪಿಯವರು ತಾವು ಸಂಸ್ಕಾರವುಳ್ಳವರು, ಮಡಿವಂತರೆಂದು ಹೇಳಿಕೊಳ್ಳುತ್ತಾರೆ. ಆದರೆ, ಅತ್ಯಂತ ಕೆಟ್ಟ ಶಬ್ದಗಳನ್ನು ಬಳಕೆ ಮಾಡುತ್ತಿದ್ದು, ಅವರ ಹೇಳಿಕೆಗಳು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ರಾಜಕೀಯವಾಗಿ ಅಸಂಸ್ಕೃತವಾಗಿ ಮಾತಾಡುವುದು ಸಲ್ಲ. ಬಿಎಸ್‌ವೈ ಅವರಿಂದ ತಾನು ಇಂತಹ ಹೇಳಿಕೆಗಳನ್ನು ನಿರೀಕ್ಷಿಸಿರಲಿಲ್ಲ'
-ಬಸವರಾಜ ರಾಯರೆಡ್ಡಿ ಉನ್ನತ ಶಿಕ್ಷಣ ಸಚಿವ