×
Ad

ರಾಘವೇಶ್ವರ ಸ್ವಾಮೀಜಿ ಪೀಠ ತ್ಯಾಗಕ್ಕೆ ಹವ್ಯಕ ಒಕ್ಕೂಟ ಆಗ್ರಹ

Update: 2018-03-09 20:04 IST

ಬೆಂಗಳೂರು, ಮಾ.9: ಹಲವು ಆರೋಪಗಳನ್ನು ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀ ಕೂಡಲೇ ಪೀಠ ತ್ಯಾಗ ಮಾಡಬೇಕು ಹಾಗೂ ಅರ್ಹರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂದು ಅಖಿಲ ಹವ್ಯಕ ಒಕ್ಕೂಟ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸದಸ್ಯ ಹಾಗೂ ವಿದ್ವಾಂಸ ಗಣಪತಿ ಭಟ್, ಶಾಸ್ತ್ರಗಳಲ್ಲಿ ಚಾರಿತ್ರ್ಯ ಬಿಟ್ಟರೆ ಅವರು ಸನ್ಯಾಸಿಯಾಗಲು ಅನರ್ಹರಾಗಿರುತ್ತಾರೆ ಎಂದು ಹೇಳಿದೆ. ಆದರೆ, ಅತ್ಯಾಚಾರ ಸೇರಿದಂತೆ ಅನೇಕ ಆರೋಪಗಳು ಕೇಳಿ ಬಂದರೂ ರಾಘವೇಶ್ವರ ಸ್ವಾಮೀಜಿ ಪೀಠ ತ್ಯಾಗ ಮಾಡದೆ ಧರ್ಮಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಘವೇಶ್ವರ ಭಾರತಿ ಸ್ವಾಮೀಜಿ ಚಾರಿತ್ರ್ಯಹೀನವಾದರೂ ಅವರು ಇರುವ ಸ್ಥಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಸಮಾಜದಲ್ಲಿ ಒಗ್ಗಟ್ಟನ್ನು ಕಾಪಾಡಬೇಕಾದ ಇವರು ಧಾರ್ಮಿಕ ಭಾವನೆಗಳನ್ನು ಉಪಯೋಗಿಸಿ ಆರೋಪದಿಂದ ಪಾರಾಗಲು ಸಮಾಜವನ್ನು ಒಡೆಯುತ್ತಿದ್ದಾರೆ. ಜೊತೆಗೆ, ಕೆಲವು ಕುಟುಂಬಗಳಲ್ಲಿಯೂ ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಶಾರದಾ ಮಠಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಆರೋಪ ಎದುರಿಸಿರುವುದು ಹಾಗೂ ಆರೋಪದೊಂದಿಗೆ ಪೀಠಾಧಿಪತಿಯಾಗಿ ಮುಂದುವರಿಯುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.

ಶೃಂಗೇರಿ ಜಗದ್ಗುರು ನೇತೃತ್ವದಲ್ಲಿ ಫೆ.17 ರಂದು ನಡೆದ ಸಭೆಯಲ್ಲಿ ಎಲ್ಲ ಮಠಾಧೀಶರು ಮಠಕ್ಕೆ ಸಯೋಗ್ಯರಾದ, ನಿಷ್ಕಳಂಕ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಹಾಗೂ ಕಳಂಕವಾಗಿರುವ ವ್ಯಕ್ತಿಯನ್ನು ಕೆಳಗಿಳಿಸಬೇಕು ಎಂದು ನಿರ್ಧರಿಸಿದ್ದು, ಇದು ಸಮಾಜಕ್ಕೆ ದಾರಿ ದೀಪವಾಗಲಿದೆ. ಆದುದರಿಂದ ಸಭೆಯ ನಿರ್ಣಯದಂತೆ ನಾವು ರಾಘವೇಶ್ವರ ಸ್ವಾಮೀಜಿಯನ್ನು ಪೀಠ ತ್ಯಾಗ ಮಾಡಬೇಕು ಎಂದು ಆಗ್ರಹಿಸುತ್ತಿದ್ದು, ಅವರು ಪೀಠ ತ್ಯಾಗ ಮಾಡುವವರೆಗೂ ನಾವು ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News