×
Ad

ಶಿವಮೊಗ್ಗ : ಕ್ಯಾಂಟೀನ್‍ನಲ್ಲಿಯೇ ರೌಡಿ ಶೀಟರ್ ನ ಬರ್ಬರ ಹತ್ಯೆ

Update: 2018-03-09 22:00 IST

ಶಿವಮೊಗ್ಗ, ಮಾ. 9: ಇಲ್ಲಿನ ಸಾಗರ ರಸ್ತೆಯ ಆಟೋ ಕಾಂಪ್ಲೆಕ್ಸ್ ನ ಕ್ಯಾಂಟೀನ್‍ವೊಂದರಲ್ಲಿಯೇ ರೌಡಿ ಶೀಟರ್ ನನ್ನು ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ನಗರದ ಪುರಲೆ ಬಡಾವಣೆಯ ನಿವಾಸಿ ಮಧು (34) ಹತ್ಯೆಗೀಡಾದ ರೌಡಿ ಶೀಟರ್ ಎಂದು ಗುರುತಿಸಲಾಗಿದೆ. ಈತ ಆಟೋ ಕಾಂಪ್ಲೆಕ್ಸ್ ನಲ್ಲಿ ಕ್ಯಾಂಟೀನ್ ನಡೆಸುವ ಜೊತೆಗೆ ಆಟೋ ಚಾಲನೆ ಮಾಡುತ್ತಿದ್ದ. ಈತನ ಮೇಲೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಕೇಸ್‍ಗಳು ಕೂಡ ದಾಖಲಾಗಿದ್ದವು.

ರಾತ್ರಿ 8.30 ರ ಸುಮಾರಿಗೆ ಮೂರು ಬೈಕ್‍ಗಳಲ್ಲಿ ಆಗಮಿಸಿದ ಸುಮಾರು 6 ಜನರಿದ್ದ ಹಂತಕರ ತಂಡವು ಕ್ಯಾಂಟೀನ್‍ನಲ್ಲಿದ್ದ ಮಧು ಮೇಲೆ ದಿಢೀರ್ ದಾಳಿ ನಡೆಸಿದೆ. ಮಾರಕಾಸ್ತ್ರಗಳಿಂದ ಮನಸೋ ಇಚ್ಚೆ ಥಳಿಸಿ ಸ್ಥಳದಿಂದ ಪರಾರಿಯಾಗಿದೆ. ತೀವ್ರ ರಕ್ತಸ್ರಾವದಿಂದ ಮಧು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 

ವಿಷಯ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೆಲ ಆರೋಪಿಗಳನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೇ ಘಟನಾ ಸ್ಥಳದ ಸಮೀಪವಿದ್ದ ಸಿ.ಸಿ.ಕ್ಯಾಮೆರಾದ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕಾರಣವೇನು?: ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ಮಾಹಿತಿ ನೀಡಿವೆ. ಕೊಲೆಗೀಡಾದ ಮಧು ಗ್ಯಾಂಗ್ ಹಾಗೂ ಈತನ ಎದುರಾಳಿ ಗ್ಯಾಂಗ್‍ನ ಪ್ರವೀಣ್, ಕುಮಾರ್ ಮತ್ತಿತರರೊಂದಿಗೆ ಭಿನ್ನಾಭಿಪ್ರಾಯವಿತ್ತು. ಕಳೆದ ವರ್ಷ ನಡೆದ ಗಣಪತಿ ಹಬ್ಬದ ವೇಳೆ ಹಾಡೊಂದಕ್ಕೆ ಡ್ಯಾನ್ಸ್ ಮಾಡುವ ವಿಚಾರದಲ್ಲಿ, ಎರಡು ಗ್ಯಾಂಗ್‍ನ ನಡುವೆ ಕಲಹವಾಗಿತ್ತು. 

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈ ಎರಡು ತಂಡಗಳ ನಡುವೆ ಆಗಾಗ್ಗೆ ಜಗಳ ಏರ್ಪಡುತ್ತಿತ್ತು. ಕಳೆದ ಕೆಲ ದಿನಗಳ ಹಿಂದಷ್ಟೆ ಮಧು ಸಹಚರರಿಗೂ ಹಾಗೂ ಎದುರಾಳಿ ತಂಡದ ನಡುವೆ ಮಾರಾಮಾರಿ ನಡೆದಿದ್ದು, ಈ ಕುರಿತಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿತ್ತು. ಈ ಎಲ್ಲ ಕಾರಣಗಳಿಂದ ಎದುರಾಳಿ ತಂಡದವರು ಮಧುವನ್ನು ಹತ್ಯೆ ನಡೆಸಿದ್ದಾರೆ ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡುತ್ತವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News