×
Ad

ಜೈಲಿಗೆ ಹೋಗಿದ್ದವರೊಂದಿಗೆ ಕೂತು ಕಾಂಗ್ರೆಸ್ ಮೇಲೆ ಆರೋಪ ಹೊರಿಸುವ ಮೋದಿ : ಸಿಎಂ ಸಿದ್ದರಾಮಯ್ಯ

Update: 2018-03-09 22:34 IST

ಹುಣಸೂರು, ಮಾ.9: ತಮ್ಮ ಅಧಿಕಾರಾವಧಿಯಲ್ಲಿ ಲಂಚ ಪಡೆದು ಜೈಲಿಗೆ ಹೋದ ಬಿಜೆಪಿಯ ಮಾಜಿ ಮುಖ್ಯಮಂತ್ರಿಯನ್ನು ಪಕ್ಕದಲ್ಲೇ ಕೂರಿಸಿಕೊಂಡು ಮೋದಿ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿಯನ್ನು ಟೀಕಿಸಿದ್ದಾರೆ.

ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಇಂದು, ನಗರಸಭೆಯ ನೂತನ ಕಟ್ಟಡದ ಉದ್ಘಾಟನೆ ಮತ್ತು ತಾಲೂಕಿನ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮೋದಿಯವರೇ ನೀವು ಅಧಿಕಾರಕ್ಕೆ ಬಂದು ಪ್ರಧಾನಿಯಾಗಿ ನಾಲ್ಕು ವರ್ಷವಾದರೂ ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ನೀವು ಅಧಿಕಾರಕ್ಕೆ ಬಂದರೆ ಆರು ತಿಂಗಳಲ್ಲೇ ವಿದೇಶದಲ್ಲಿರುವ ಕಪ್ಪು ಹಣ ತಂದು ಬಡವರ ಜನ್‌ಧನ್ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದು ಹೇಳಿದ್ದು, ನೀವು 15 ಪೈಸೆಯೂ ಹಾಕಿಲ್ಲವಲ್ಲ ಎಂದು ವ್ಯಂಗ್ಯವಾಡಿದರು.

ರಾಜ್ಯ ಮತ್ತು ರಾಷ್ಟ್ರಮಟ್ಟದ ಎಲ್ಲಾ ನಾಯಕರಿಗೂ ನಾನೇ ಟಾರ್ಗೆಟ್, ಶೋಭಾಳಿಗೂ ನಾನೇ ಟಾರ್ಗೆಟ್ ಆದರೆ, ಈ ರಾಜ್ಯದ ಜನರ ಆಶೀರ್ವಾದ ನನಗೆ ಇರುವ ತನಕ ನನಗೆ ಯಾವ ಭಯವೂ ಇಲ್ಲ. ಬಸವಣ್ಣ, ಕನಕ, ಕುವೆಂಪು, ಶಿಶುನಾಳ ಷರೀಫ್ ಹುಟ್ಟಿದ ಈ ನಾಡಲ್ಲಿ ಇವರ ನಾಟಕ ನಡೆಯುವುದಿಲ್ಲ.

ರಾಜ್ಯದ 30 ಜಿಲ್ಲೆಗಳಲ್ಲಿ ಪ್ರತೀ ಮತದಾರರ ಆಶೀರ್ವಾದ ಜನಪರ ಕಾಂಗ್ರೆಸ್ ಸರಕಾರದ ಪರ ಇದ್ದೇ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಮಂಜುನಾಥ ಅವರೇ ಮುಂದಿನ ಅಭ್ಯರ್ಥಿಯಾಗಿದ್ದಾರೆ ಎಂದು ಸಿಎಂ ಈ ಸಂದರ್ಭದಲ್ಲಿ ಸ್ಪಷ್ಟೀಕರಿಸಿದರು.

ಲೋಕೋಪಯೋಗಿ ಹಾಗೂ ಉಸ್ತುವರಿ ಮಂತ್ರಿ ಎಚ್.ಸಿ. ಮಹದೇವಪ್ಪ ಮಾತನಾಡಿ, ಭೂ ಇಡುವಳಿಯ ಕಾನೂನು ಸಮರ್ಪಕವಾಗಿ ಸಾಮಾನ್ಯ ಜನರಿಗೂ ಸಿಗುವಂತೆ ಜಾರಿಗೆ ತಂದ ದಿವಂಗತ ಅರಸರ ಈ ಕ್ಷೇತ್ರ ರಾಜ್ಯದಲ್ಲಿ ವಿಶಿಷ್ಟವಾಗಿದ್ದು. ಭೂ ಸುಧಾರಣೆ, ಪುನರ್ವಸತಿ, ಜೀತ ಪದ್ಧತಿಯಿಂದ ರಾಜ್ಯವನ್ನು ಮುಕ್ತಿಗೊಳಿಸಿ ಅಸಹಾಯಕ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಿಕೊಟ್ಟರು ದಿವಂಗತ ಅರಸರು ಎಂದರು.

ಸಭೆಯಲ್ಲಿ ಮಾತನಾಡಿದ ಇಂದನ ಸಚಿವ ಡಿ.ಕೆ.ಶಿವಕುಮಾರ್, ರಾಜ್ಯದ ಅಭಿವೃದ್ಧಿ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ರಾಜ್ಯ ಸರಕಾರದ ವಿರುದ್ಧ ಆರೋಪ ಮಾಡುವ ಮೋದಿ ಗ್ಲೋಬಲ್ ಇನ್ವೆಸ್ಟರ್ ಮೀಟ್ ಅನ್ನು ಯಾಕೆ ಕರ್ನಾಟಕದಲ್ಲಿ ಏರ್ಪಡಿಸಿ ಬಂಡವಾಳ ಸಮೀಕರಿಸಬೇಕಿತ್ತು ಎಂದು ಪ್ರಶ್ನಿಸಿದರು.

ಹುಣಸೂರಿಗೆ 270 ಕೆ.ವಿ. ಸಬ್‌ಸ್ಟೇಷನ್‌ಗೆ ಬೇಡಿಕೆ ನೀಡಿದ್ದು, ಅದಕ್ಕೆ ಮುಂದೆ ಆದ್ಯತೆ ನೀಡಲು ಕ್ರಮ ಕೈಗೊಳ್ಳುತ್ತೇನೆ. 350ಕೋಟಿ ರೂ. ವೆಚ್ಚದಲ್ಲಿ ತಾಲೂಕಿನಲ್ಲಿ ಎಲ್ಲಾ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಶಾಸಕ ಮಂಜುನಾಥ್ ಅನುಮೋದನೆ ತಂದಿದ್ದು, ಮುಂದಿನ ದಿನಗಳಲ್ಲಿ ಜನ ಜಾನುವಾರುಗಳಿಗೆ ಅನುಕೂಲವಾಗಲು ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ನಡೆಯಲಿದೆ ಎಂದರು. ಅನೇಕ ವರ್ಷಗಳಿಂದ ಈವರೆವಿಗೆ 8-10 ಸಾವಿರ ಮನೆಗಳನ್ನು ನೀಡಿದ ಬೇರೆ ಸರಕಾರಗಳಿಗಿಂತ ನಮ್ಮ ಸರಕಾರ ಕೇವಲ 5 ವರ್ಷಗಳಲ್ಲಿ ನಿಮ್ಮ ಕ್ಷೇತ್ರಕ್ಕೆ 20 ಸಾವಿರ ಮನೆಗಳನ್ನು ನೀಡುವ ಮೂಲಕ 20 ಸಾವಿರ ಕುಟುಂಬಗಳಿಗೆ ಸೂರು ನೀಡಿದೆ ಎಂದರು.

ಶಾಸಕ ಎಚ್.ಪಿ. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಚಿಕ್ಕೋಡಿ ಶಾಸಕ ಪ್ರಕಾಶ್ ಹುಕ್ಕೇರಿ, ಜಾರಕಿಹೊಳಿ, ಮಾಜಿ ಸಚಿವ ಸಿ.ಎಚ್. ವಿಜಯ್ ಶಂಕರ್, ಮಾಜಿ ಮೇಯರ್ ರಾಮಚಂದ್ರ, ಅನಿಲ್ ಬೋಸ್, ಅನಿಲ್ ಚಿಕ್ಕಮಾಧು, ರಾಜ್ಯ ಭೋವಿ ಸಂಘದ ಅಧ್ಯಕ್ಷ ಸಿ.ವಿ. ಸೀತಾರಾಮ್, ಮಂಜುಳಾ ಮಾನಸ, ಭಾರತಿ ಶಂಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಗರಸಭೆಯ ಹಣದಲ್ಲಿ ಕಾಂಗ್ರೆಸ್ ಕಾರ್ಯಕ್ರಮ: ನಗರಸಭೆಯ ಹಣದಲ್ಲಿ ಶಾಸಕರು ಕಾಂಗ್ರೆಸ್ ಕಾರ್ಯಕ್ರಮ ಮಾಡಿದ್ದಾರೆ. ಎಂದು ನಗರಸಭೆಯ ಅಧ್ಯಕ್ಷ ಎಂ. ಶಿವಕುಮಾರ್ ಅರೋಪಿಸಿದ್ದಾರೆ.
ನಗರಸಭೆಯ ಮುಖ್ಯ ಕಾರ್ಯಕ್ರಮ ವೇದಿಕೆಯಲ್ಲಿ ನಗರಸಭೆಯ ಅಧ್ಯಕ್ಷರಿಗಾಗಲಿ ಉಪಾಧ್ಯಕ್ಷರಿಗಾಗಲಿ ಹಾಗೂ ಜೆಡಿಎಸ್ ನಗರ ಸಭಾ ಸದಸ್ಯರನ್ನು ವೇದಿಕೆಗೆ ಆಹ್ವಾನಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News