ಮದ್ದೂರು : ಆಕಸ್ಮಿಕ ಬೆಂಕಿಗೆ ಮನೆ ಭಸ್ಮ - ಲಕ್ಷಾಂತರ ರೂ. ನಷ್ಟ
Update: 2018-03-09 23:15 IST
ಮದ್ದೂರು, ಮಾ.9: ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಯಿಂದ ಮನೆ ಭಸ್ಮವಾಗಿದ್ದು, ಲಕ್ಷಾಂತರ ರೂ. ನಷ್ಟವಾಗಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಗ್ರಾಮದ ನಿಂಗಪ್ಪ ಅವರ ಪುತ್ರ ಶಿವರಾಜು ಅವರ ಮನೆ ಭಸ್ಮವಾಗಿದ್ದು, ಶಿವರಾಜು ಕುಟುಂಬದವರು ಜಮೀನಿಗೆ ತೆರಳಿದ್ದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ.
ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿಯನ್ನು ನಂದಿಸಿ ಬೇರೆಡೆ ಹರಡುವುದನ್ನು ತಪ್ಪಿಸಿದರು. ದವಸಧಾನ್ಯ, ಬಟ್ಟೆ, ಗೃಹೋಪಯೋಗಿ ವಸ್ತುಗಳು ಸುಟ್ಟುಹೋಗಿವೆ.
ಮನೆ ಕಳೆದುಕೊಂಡಿರುವ ಬಡ ರೈತ ಶಿವರಾಜು ಅವರಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಒತ್ತಾಯಿಸಿದ್ದಾರೆ.