ದೇವದಾಸಿ ಪದ್ಧತಿ ತೊಡೆದು ಹಾಕಲು ಕಠಿಣ ಕಾನೂನು : ಸಿಎಂ ಸಿದ್ದರಾಮಯ್ಯ
ಮೈಸೂರು,ಮಾ.9: ದೇವದಾಸಿ ಪದ್ಧತಿ ಒಂದು ಅನಿಷ್ಠ ಪದ್ಧತಿ ಇದನ್ನು ತೊಡೆದು ಹಾಕಲು ಕಠಿಣ ಕಾನೂನನ್ನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರು ನಂಜನಗೂಡು ರಸ್ತೆಯಲ್ಲಿರು ಶಕ್ತಿಧಾಮದಲ್ಲಿ ಶುಕ್ರವಾರ ಕೌಶಲ್ಯ ಭವನ ಮತ್ತು ಹೆಣ್ಣು ಮಕ್ಕಳ ಹಾಗೂ ಮಹಿಳೆಯರ ವಸತಿ ಗೃಹ ಸಮುಚ್ಚಯದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ದೇವದಾಸಿ ಒಂದು ಅನಿಷ್ಟ ಪದ್ಧತಿ ಇದನ್ನು ತೊಡೆದು ಹಾಕಲು ಸರಕಾರ ಮುಂದಾಗಿದ್ದು, ಈಗಾಗಲೇ ರಾಜ್ಯದಲ್ಲಿ ಎಷ್ಟು ಮಂದಿ ದೇವದಾಸಿಯರಿದ್ದಾರೆ ಎಂದು ಎಲ್ಲಾ ಜಿಲ್ಲೆಗಳಲ್ಲಿ ಸಮೀಕ್ಷೆ ಮಾಡಲಾಗುತ್ತಿದೆ. ಅದು ಮುಗಿದ ನಂತರ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಕಠಿಣವಾದ ಕಾನೂನ್ನು ಜಾರಿಮಾಡಲಾಗುವುದು ಎಂದರು.
ಈ ಪದ್ಧತಿ ಕಾನೂನು ಮೂಲಕ ತೊಡೆದು ಹಾಕುವುದಕ್ಕಿಂತ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಶೋಷಿತರು, ದಮನಿತರು ಎಚ್.ಐ.ವಿ ಪೀಡಿತರನ್ನು ನಾವು ಕಡೆಗಣಿಸಬಾರದು. ಇವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನಗಳಾಗಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೀತಾ ಶಿವರಾಜ್‍ಕುಮಾರ್ ವಹಿಸಿದ್ದರು. ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಉಮಾಶ್ರೀ, ಸಾಹಿತಿ ದೇವನೂರು ಮಹದೇವ, ವಿಧಾನಪರಿಷತ್ ಸದಸ್ಯೆ ಜಯಮಾಲ, ಚಲನ ಚಿತ್ರನಟರಾದ ಶಿವರಾಜ್‍ಕುಮಾರ್, ಪುನೀತ್‍ರಾಜ್‍ಕುಮಾರ್, ಅಶ್ವಿನಿ ಪುನೀತ್, ಪೊಲೀಸ್ ಇಲಾಖೆ ಸಲಹೆಗಾರ ಕೆಂಪಯ್ಯ, ಚಲನಚಿತ್ರ ನಿರ್ದೇಶಕ ಭಗವಾನ್, ಶಕ್ತಿಧಾಮದ ಟ್ರಸ್ಟಿ ಜಯದೇವ್, ಸುನಿಲ್ ಬೋಸ್ ವೇದಿಕೆಯಲ್ಲಿದ್ದರು.