ಧ್ವನಿ ಬೆಳಕಿನಲ್ಲಿ ಅನಾವರಣಗೊಂಡ ಗಾಂಧೀಜಿ ಬದುಕು
ಮಂಡ್ಯ, ಮಾ.9: ರಾಷ್ಟ್ರಪಿತ ಗಾಂಧೀಜಿ ಅವರ 150ನೆ ಜನ್ಮ ವರ್ಷಾಚರಣೆಯ ಅಂಗವಾಗಿ ನಗರದ ಗಾಂಧಿಭವನದಲ್ಲಿ ಶುಕ್ರವಾರ ನಡೆದ ಮಹಾತ್ಮ ಗಾಂಧೀಜಿ ಅವರ ಜೀವನ ಮತ್ತು ಸಾಧನೆಗಳ ಕುರಿತ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗಾಂಧಿಭವನ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವತಿಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಅವರು ಬ್ರಿಟಿಷರ ವಿರುದ್ಧ ಶಾಂತಿ, ಅಹಿಂಸಾ ಮಾರ್ಗದಲ್ಲಿ ಹೋರಾಟ ನಡೆಸಿ ಸ್ವಾತಂತ್ರ್ಯ ತಂದು ಕೊಟ್ಟಿದ ಹಾದಿಯಲ್ಲಿ ಬರುವ ಪ್ರಮುಖ ಘಟನಾವಳಿಗಳು ಗಮನ ಸೆಳೆದವು.
ಜಲಿಯನ್ ವಾಲಾಬಾಗ್ ದುರಂತ, ಕ್ವಿಟ್ ಇಂಡಿಯಾ ಚಳವಳಿ, ಮಹಾತ್ಮ ಗಾಂಧೀಜಿ ಅವರು ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರಿಗಾಗಿ ಹಾಗೂ ದಕ್ಷಿಣಾ ಆಫ್ರಿಕಾದ ಮೂಲ ನಿವಾಸಿಗಳ ಪರವಾಗಿ ನಡೆಸಿದ ಪ್ರತಿಭಟನೆಗಳನ್ನು ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ ಸಾದರಪಡಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಂಸದ ಹಾಗೂ ಗಾಂಧಿ ಭವನದ ಅಧ್ಯಕ್ಷ ಜಿ.ಮಾದೇಗೌಡ, ಗಾಂಧೀಜಿಯವರು ಶಾಂತಿ ಮತ್ತು ಅಹಿಂಸೆ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಮಹಾನ್ ಪುರುಷರು. ಗಾಂಧೀಜಿಯವರು ವಿಚಾರಧಾರೆಗಳನ್ನು ಸಮಾಜದಲ್ಲಿ ಪ್ರತಿಯೊಬ್ಬರೂ ಅಳವಡಿಕೊಳ್ಳುವುದರ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಕರೆ ನೀಡಿದರು.
ಯುವಜನ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ನಂದೀಶ್, ಗಾಂಧಿಭವನದ ಉಪಾಧ್ಯಕ್ಷ ಲಿಂಗಣ್ಣ ಬಂಧುಕರ್, ಕಾರ್ಯದರ್ಶಿ ಜಯರಾಜ್, ಬಿಎನ್‍ಎಲ್ ನರ್ಸಿಂಗ್ ಸ್ಕೂಲ್‍ನ ಪ್ರಾಂಶುಪಾಲೆ ಎಲ್ವಿನ್ ಅರ್ಪಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್, ಸಹಾಯಕ ವಾರ್ತಾಧಿಕಾರಿ ಹರೀಶ್, ಇತರ ಗಣ್ಯರು ಉಪಸ್ಥಿತರಿದ್ದರು.