ದಾವಣಗೆರೆ : ಆದಾಯ ತೆರಿಗೆ ಪತ್ರಾಂಕಿತ ಅಧಿಕಾರಿಗಳ ಸಂಘದ ದ್ವೈವಾರ್ಷಿಕ ಮಹಾಸಮ್ಮೇಳನ
ದಾವಣಗೆರೆ,ಮಾ.9 : ಕರ್ನಾಟಕ-ಗೋವಾ ವಲಯ ಸಿಬ್ಬಂದಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಮಸ್ಯೆ ನಿವಾರಣೆಗೆ ಪ್ರಯತ್ನಿಸಲಾಗುವುದು ಎಂದು ಕರ್ನಾಟಕ-ಗೋವಾ ರಾಜ್ಯದ ಆದಾಯ ತೆರಿಗೆಯ ಪ್ರಧಾನ ಮುಖ್ಯ ಆಯುಕ್ತ ರಜನೀಶ್ ಕುಮಾರ್ ಭರವಸೆ ನೀಡಿದರು.
ಶುಕ್ರವಾರ ನಗರದ ಎಂಬಿಎ ಕಾಲೇಜಿನಲ್ಲಿ ಕರ್ನಾಟಕ ಮತ್ತು ಗೋವಾ ರಾಜ್ಯಗಳ ಆದಾಯ ತೆರಿಗೆ ಪತ್ರಾಂಕಿತ ಅಧಿಕಾರಿಗಳ ಸಂಘದ ದ್ವೈವಾರ್ಷಿಕ ಮಹಾಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ತೆರಿಗೆ ಇಲಾಖೆಯ ಉನ್ನತ ಹಂತದಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಇನ್ಸ್‍ಪೆಕ್ಟರ್ ಹುದ್ದೆಗಳು ಶೇ. 60ರಷ್ಟು ಖಾಲಿ ಇದ್ದು, ಇನ್ಸ್‍ಪೆಕ್ಟರ್ 700ರಲ್ಲಿ 380 ಮಾತ್ರ ಭರ್ತಿ ಆಗಿವೆ. ಖಾಲಿ ಹುದ್ದೆಗಳಿಗಾಗಿ ಬೇರೆಯವರನ್ನು ದೂರದೇ ಆತ್ಮಾವಲೋಕನ ಮಾಡಿಕೊಂಡು ಕಾರ್ಯ ನಿರ್ವಹಿಸಬೇಕಿದೆ. ಇರುವ ವ್ಯವಸ್ಥೆಯಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದರು.
ಅಲ್ಲದೆ, ವೈದ್ಯಕೀಯ ವೆಚ್ಚದ ಬಿಲ್‍ಗಳು ಬಾಕಿ ಇರುವುದಾಗಿ ದೂರುಗಳು ಬಂದಿವೆ. ಇವುಗಳ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ಕುರಿತ ಯಾವುದೇ ಬಿಲ್ ಬಾಕಿ ಉಳಿಯಬೇಕೆಂದು ನಾನು ಬಯಸುವುದಿಲ್ಲ. ಈ ಬಿಲ್ ನನ್ನವರೆಗೂ ಕಳಿಸಬೇಕಿಲ್ಲ, ಆಯುಕ್ತರ ಹಂತದ ಅಧಿಕಾರಿಗಳೇ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ ಎಂದ ಅವರು, ಮೂರು ವರ್ಷಗಳಿಗೂ ಹೆಚ್ಚಿನ ಅವಧಿಗೆ ಅಧಿಕಾರಿ ಒಂದೇ ಕಡೆ ಕಾರ್ಯ ನಿರ್ವಹಿಸುತ್ತಿದ್ದರೆ ರೊಟೇಷನ್ ಮೇಲೆ ಬದಲಾವಣೆ ಮಾಡುವುದು ಅನಿವಾರ್ಯ. ವ್ಯಕ್ತಿಗತ ಅನುಕೂಲಕ್ಕಾಗಿ ಸಂಸ್ಥೆಯ ಮೇಲೆ ಪರಿಣಾಮ ಆಗಬಾರದು. ಈ ಹಿನ್ನೆಲೆಯಲ್ಲಿ ವರ್ಗಾವಣೆಗೆ ಅಧಿಕಾರಿಗಳು ಸಹಕರಿಸಬೇಕಿದೆ ಎಂದು ಅವರು ಮನವಿ ಮಾಡಿದರು.
ಆದಾಯ ತೆರಿಗೆ ಅಧಿಕಾರಿ ಹೆಚ್.ಆರ್. ನಾಗೇಶ್ ಮಾತನಾಡಿ, ನಿವೃತ್ತಿಗೆ ಹತ್ತಿರವಿರುವ, ವೈದ್ಯಕೀಯ ಹಾಗೂ ಮಕ್ಕಳ ಶಿಕ್ಷಣಗಳ ಸಮಸ್ಯೆ ಎದುರಿಸುತ್ತಿರುವ ನೌಕರರಿಗೆ ವರ್ಗಾವಣೆಯಲ್ಲಿ ಆದ್ಯತೆ ನೀಡಬೇಕು ಅಂದಾಗ ಮಾತ್ರ ಸಿಬ್ಬಂದಿಗೆ ತುಸು ನೆಮ್ಮದಿ ನೀಡಿದಂತಾಗುತ್ತದೆ ಎಂದರು.
ಐಟಿ ಗೋವಾ, ನವದೆಹಲಿ ವಿಭಾಗದ ಪ್ರಧಾನ ಕಾರ್ಯದರ್ಶಿಯಾದ ಅಮಿತಾವ್ ಡೇ ಮಾತನಾಡಿ, ಇದೇ ಮೊದಲ ಬಾರಿಗೆ ಬೆಂಗಳೂರು ಹೊರತು ಪಡಿಸಿ ದಾವಣಗೆರೆಯಲ್ಲಿ ಸಾಮಾನ್ಯ ಸಭೆಯನ್ನು ನಡೆಸುತ್ತಿರುವುದು ಸಂತಸ ತಂದಿದೆ ಎಂದರು.
ಐಟಿ ಇಎಫ್‍ನ ಅಧ್ಯಕ್ಷ ಕಾ. ಸುಮನ್, ಆದಾಯ ತೆರಿಗೆ ಅಧಿಕಾರಿಗಳಾದ ಕೆ.ಆರ್. ನಾರಾಯಣ್, ಅರವಿಂದ್ ತ್ರೀವೇದಿ, ಟಿ.ಜಿ. ಶಿವಕುಮಾರ್, ಭಾಸ್ಕರ್ ಎಸ್., ಪ್ರೇಮ್ ಕುಮಾರ್, ರಾಘವೇಂದ್ರರಾವ್, ದೇಶಪಾಂಡೆ ಮತ್ತಿತರರಿದ್ದರು.