×
Ad

ಹಣ ಕೊಟ್ಟು ಹೆಣ ತೆಗೆದುಕೊಂಡು ಹೋಗಿ ಎನ್ನುವ ಹಾಗಿಲ್ಲ: ಖಾಸಗಿ ಆಸ್ಪತ್ರೆಗಳಿಗೆ ಸಿದ್ದರಾಮಯ್ಯ ಎಚ್ಚರಿಕೆ

Update: 2018-03-10 20:22 IST

ಮೈಸೂರು,ಮಾ.10: ಇನ್ನು ಮುಂದೆ ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಮೃತಪಟ್ಟರೆ ಹಣ ಕೊಟ್ಟು ನಂತರ ಹೆಣ ತೆಗೆದುಕೊಂಡು ಹೋಗಿ ಎಂದು ಹೇಳುವ ಹಾಗಿಲ್ಲ. ಹಾಗೇನಾದರು ಹೇಳಿದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿದರು.

ಮೈಸೂರು –ಕೆ.ಆರ್.ಎಸ್ ರಸ್ತೆಯಲ್ಲಿರು ಪಿ.ಕೆ.ಟಿ.ಬಿ ಆಸ್ಪತ್ರೆ ಆವರಣದಲ್ಲಿ ಶನಿವಾರ 210 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ ಉದ್ಘಾಟನೆ, ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ 5ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಿರುವ ವಿವಿಧ  ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮಾಡಿ ನಂತರ ಮಾತನಾಡಿದರು.

ರಾಜ್ಯದ ಕಡು ಬಡವರಿಗೂ ಆರೋಗ್ಯ ಸೇವೆ ಸಿಗಬೇಕು ಎಂಬುದೇ ನಮ್ಮ ಗುರಿ. ಯಾವುದೇ ವ್ಯಕ್ತಿ ಆರೋಗ್ಯದಿಂದ ವಂಚಿತರಾಗಬಾರದು. ಹಾಗಾಗಿ ಆರೋಗ್ಯ ಕರ್ನಾಟಕ ಯೋಜನೆಯಡಿ 123 ಲಕ್ಷ ಬಿಪಿಎಲ್ ಕುಟುಂಬಗಳಿಗೆ ಹೆಲ್ತ್ ಕಾರ್ಡ್ ನೀಡಲಾಗುವುದು. ಈ ಕಾರ್ಡ್ ಪಡೆದ ಬಿಪಿಎಲ್ ಕುಟುಂಬದವರು ಯಾವುದೇ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಸೇವೆ ಪಡೆಯಬಹುದು. ಸರಕಾರಿ ಅಸ್ಪತ್ರೆಯಲ್ಲಿ ಸೌಲಭ್ಯಗಳು ಇಲ್ಲದ ಸಂದರ್ಭದಲ್ಲಿ ಹತ್ತಿರದಲ್ಲೇ ಇರುವ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಆ ಚಿಕಿತ್ಸಾ ವೆಚ್ಚವನ್ನು ಸರಕಾರ ಆಸ್ಪತ್ರೆ ಬರಿಸಲಿದೆ. ಹಾಗೆಯೇ ಎಪಿಎಲ್ ಕಾರ್ಡ್‍ದಾರರಿಗೆ ಶೇ.30% ಉಚಿತ ಆರೋಗ್ಯ ಸೇವೆ ದೊರೆಯಲಿದೆ ಎಂದು ಹೇಳಿದರು.

ಸಾಮಾನ್ಯ ಜನರು ಚಿಕಿತ್ಸೆಗೆ ದೂರದ ಊರುಗಳಿಗೆ ಹೋಗದಂತೆ ಹತ್ತಿರದಲ್ಲೆ ಆರೋಗ್ಯ ಸೇವೆ ದೊರಕಬೇಕು ಎಂದು 250 ಹಾಸಿಗಯುಳ್ಳ ಬೃಹತ್ ಜಯದೇವ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ. ಪ್ರಮುಖ ನಗರಗಳಲ್ಲಿ ಜಯದೇವ ಹೃದ್ರೋಗ ಸಂಶೋಧನಾ ಕೇಂದ್ರಗಳನ್ನು ತೆರಯಲಾಗಿದೆ. ಬೆಂಗಳೂರು, ಬೆಳಗಾಂ ನಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಈಗ ಮೈಸೂರಿನಲ್ಲಿ ಕಾರ್ಯಾರಂಭ ಮಾಡಲಾಗಿದೆ. ಇಲ್ಲಿ ಸ್ಥಾಪನೆಯಾಗಿರುವುದರಿಂದ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ಮುಂದೆ ಹುಬ್ಬಳ್ಳಿಯಲ್ಲೂ ಜಯದೇವ ಆಸ್ಪತ್ರೆ ಘಟಕವನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ನಾನು ಮುಖ್ಯಮಂತ್ರಿ ಆದ ನಂತರ ಬಹಳಷ್ಟು ಮಂದಿ ನನ್ನ ಬಳಿ ಬಂದು ಕಿಡ್ನಿ ವೈಫಲ್ಯಗೊಂಡಿದೆ, ಅದರ ಕಸಿ ಮಾಡಿಸಬೇಕು ಮತ್ತು ಡಯಾಲಿಸಿಸ್ ಮಾಡಿಸಬೇಕು, ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೊಡಿ ಎಂದು ಕೇಳುತ್ತಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಮೈಸೂರಿನಲ್ಲಿ ಇಂದು 12 ಕೋಟಿ ರೂ. ವೆಚ್ಚದಲ್ಲಿ 60 ಹಾಸಿಗೆಗಳುಳ್ಳ ನೆಪ್ರೋ ಯುರೋಲಜಿ ಘಟಕವನ್ನು ಪ್ರಾರಂಭ ಮಾಡಲಾಗಿದೆ. ಒಂದೇ ಯಂತ್ರದಿಂದ 23 ಜನರು ಡಯಾಲಿಸಿಸ್ ಮಾಡಿಸಿಕೊಳ್ಳಬಹುದು. ಜೊತೆಗೆ ಕಿಡ್ನಿ ಕಸಿಯನ್ನು ಮಾಡಿಸಿಕೊಳ್ಳಬಹುದಾಗಿದೆ. ಹಾಗೆಯೇ ರಾಜ್ಯದ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲೂ ಉಚಿತ ಡಯಾಲಿಸಿಸ್ ಘಟಕಗಳನ್ನು ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಜಿಲ್ಲಾಸ್ಪತ್ರೆಯ ಕಟ್ಟಡ ಇಲ್ಲ. ಹಾಗಾಗಿ ಈ ಆವರಣದಲ್ಲೇ ಸುಸುಜ್ಜಿತ ಜಿಲ್ಲಾಸ್ಪತ್ರೆಯ ಕಟ್ಟಡಕ್ಕೆ ಶಿಲನ್ಯಾಸ ನೆರವೇರಿಸಲಾಗಿದೆ. ಮುಖ್ಯಮಂತ್ರಿ ಆದ ನನಗೆ ಮತ್ತು ಶಾಸಕರಿಗೆ, ಮಾಜಿ ಶಾಸಕರಿಗೆ ಎಲ್ಲಿ ಹೋದರೂ ಚಿಕಿತ್ಸೆ ದೊರೆಯುತ್ತದೆ. ಉಳ್ಳವರು ಎಲ್ಲಿಯಾದರೂ ಚಿಕಿತ್ಸೆ ಪಡೆಯುತ್ತಾರೆ. ಆದರೆ ಬಡವರು ಎಲ್ಲಿ ಪಡೆಯುತ್ತಾರೆ? ಆರೋಗ್ಯ ಸೇವೆ ಸಾಮಾನ್ಯ ಕಡುಬಡವರಿಗೂ ಸಿಗುವಂತಾಗಬೇಕು. ಆಗ ಮಾತ್ರ ಮಾಡಿರುವ ಕೆಲಸಗಳಿಗೆ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಮೈಸೂರು ನಗರದಲ್ಲಿ ಇಂದು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. ಮೈಸೂರು ರಾಜರ ನಂತರ ಹೆಚ್ಚು ಕೊಡುಗೆ ನೀಡಿದ ಸರ್ಕಾರ ನಮ್ಮದು. ನಾವು ಮಾಡಿರುವ ಕೊಡುಗೆ ನಿಮ್ಮ ಕಣ್ಣ ಮುಂದೆ ಇದೆ. ನಾವು ನಿಮಗೆ ಕಣ್ಣು ಕಟ್ಟುವ ಮಾತು ಹೇಳುತ್ತಿಲ್ಲ. ಐದು ವರ್ಷದಲ್ಲಿ ಮೈಸೂರಿಗೆ 5 ಸಾವಿರ ಕೋಟಿಗೂ ಹೆಚ್ಚು ಖರ್ಚು ಮಾಡಿದ್ದೇವೆ. ಯಾವ ರಾಜ್ಯ ಸರ್ಕಾರವೂ ಇಷ್ಟೊಂದು ಖರ್ಚು ಮಾಡಿಲ್ಲ ಎಂದರು. 

ನಾನು ಶಾಸಕನಾಗಿದ್ದ ಸಂದರ್ಭದಿಂದಲೂ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ಕಟ್ಟಡವನ್ನು ಕಂಡಿದ್ದೆ. ಅಲ್ಲಿ ಜಾಗದ ಸಮಸ್ಯೆಯಿಂದ ವರಾಂಡ, ಹಾಲ್‍ಗಳಲ್ಲಿ ಕಡತಗಳನ್ನು ಇಟ್ಟುಕೊಂಡು ಕೆಲಸ ಮಾಡುತಿದ್ದರು. ಹಾಗಾಗಿ ಇಲ್ಲಿಗೆ ಒಂದು ದೊಡ್ಡದಾದ ಜಿಲ್ಲಾ ಮಟ್ಟದ ಕಚೇರಿ ಕಟ್ಟಬೇಕೆಂದು ಚಿಂತಿಸಿ ಪಾರಂಪರಿಕವಾಗಿಯೇ ಜರ್ಮನ್ ಪ್ರೆಸ್ ಬಳಿ ಲಲಿತ್ ಮಹಲ್ ಪ್ಯಾಲೇಸ್ ಮಾದರಿಯಲ್ಲೇ ಜಿಲ್ಲಾಡಳಿತ ಭವನವನ್ನು ಕಟ್ಟಲಾಗಿದೆ ಎಂದು ಹೇಳಿದರು. 

ದೇವರಾಜ ಅರಸು ನಂತರ ಮೈಸೂರಿನ ಎರಡನೇ ಮುಖ್ಯಮಂತ್ರಿ ನಾನೇ. ಹಾಗೆಯೇ ದೇವರಾಜು ಅರಸು ನಂತರ ಐದು ವರ್ಷ ಪೂರೈಸಿರುವ ಮುಖ್ಯಮಂತ್ರಿಯೂ ನಾನೇ. ಇಷ್ಟೆಲ್ಲಾ ಅವಕಾಶ ನನಗೆ ದೊರೆಯಲು ನಿಮ್ಮ ಸಹಕಾರ, ಪ್ರೀತಿ ಕಾರಣ. ಮೈಸೂರು ರಾಜರ ಬಳಿಕ ಇಷ್ಟೊಂದು ಕೆಲಸ ಮಾಡಿದ ಸರಕಾರ ಅಂದರೆ ನಮ್ಮದೆ. ನಾನು ಓಟಿಗಾಗಿ ಇಂತಹ ಕೆಲಸಗಳನ್ನು ಮಾಡಿಲ್ಲ. ಈ ಭಾಗದ ಜನರಿಗೆ ಆರೋಗ್ಯ ಭಾಗ್ಯ ದೊರೆಯಬೇಕು ಎಂಬ ಉದ್ದೇಶ ಇಟ್ಟುಕೊಂಡು ಮಾಡಿದ್ದೇನೆ. ಬಡವರಿಗೆ ಅನುಕೂಲಗಳು ದೊರೆತಾಗ ಮಾತ್ರ ನನಗೆ ಸಾರ್ಥಕವಾಗುತ್ತದೆ ಎಂದು ಸಿದ್ಧರಾಮಯ್ಯ ಹೇಳಿದರು.

ಇದಕ್ಕೂ ಮೊದಲು ಲಲಿತಾದ್ರಿಪುರ ಬಡಾವಣೆಯ ನಿವೇಶನಾಕಾಂಕ್ಷಿಗಳಿಗೆ ಲಾಟರಿ ಮೂಲಕ ನಿವೇಶನಗಳನ್ನು ವಿತರಿಸಿದರು. ನಂತರ ಮೈಸೂರು ನಗರದ ಸಿದ್ಧಾರ್ಥ ಬಡವಾಣೆಯ ಜರ್ಮನ್ ಪ್ರೆಸ್ ಆವರಣದಲ್ಲಿ 59 ಕೋಟಿ ರೂ.ಗ ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣವನ್ನು ಲೋಕಾರ್ಪಣೆಗೊಳಿಸಿದರು.

ಚಾಮರಾಜ ಕ್ಷೇತ್ರದ ಶಾಸಕ ವಾಸು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್, ಲೋಕೋಪಯೋಗಿ ಹಾಗು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ಸಣ್ಣ ಕೈಗಾರಿಕೆ ಸಚಿವೆ ಡಾ.ಗೀತಾ ಮಹದೇವಪ್ರಸಾದ್, ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಸಂಸದ ಧ್ರುವನಾರಾಣ, ಶಾಸಕರಾದ ಸೋಮಶೇಖರ್, ಕಳಲೆ ಕೇಶವಮೂರ್ತಿ, ವಿಧಾನಪರಿಷತ್ ಸದಸ್ಯ ಧರ್ಮಸೇನಾ, ಮಾಜಿ ಶಾಸಕ ಸತ್ಯನಾರಾಯಣ, ಮೇಯರ್ ಭಾಗ್ಯವತಿ, ವರುಣಾ ವಿಧಾನಸಭಾ ಕ್ಷೇತ್ರದ ವಸತಿ ಜಾಗೃತಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ಧರಾಮಯ್ಯ, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರಾದ ಮಲ್ಲಿಗೆ ವೀರೇಶ್, ಎಚ್.ಎ.ವೆಂಕಟೇಶ್, ಬಿ.ವಿ.ಸೀತಾರಾಂ, ಸಿದ್ಧರಾಜು, ಕಾಂಗ್ರೆಸ್ ಮಖಂಡರಾದ ಅಕ್ಬರ್, ಕೆ.ಎಸ್.ಶಿವರಾಂ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮೈಸೂರಿನಲ್ಲೂ ಕಿದ್ವಾಯ್ ಆಸ್ಪತ್ರೆ ಘಟಕ
ಮೈಸೂರಿನಲ್ಲಿ ಕಿದ್ವಾಯ್ ಆಸ್ಪತ್ರೆ ಘಟಕವನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದರು. ಜಯದೇವ ಹೃದ್ರೋಗ ಆಸ್ಪತ್ರೆಯ ಘಟಕ ಉದ್ಘಾಟಿಸಿ ಮಾತನಾಡುತ್ತಿದ್ದ ವೇಳೆ ಪಿ.ಟಿ.ಸ್ಕ್ಯಾನ್ ಬಗ್ಗೆ ಕೇಳಿ ತಿಳಿದು ಕೊಂಡರು. ನಂತರ ಕ್ಯಾನ್ಸರ್ ಚಿಕಿತ್ಸೆ ಬಗ್ಗೆ ತಿಳಿದುಕೊಂಡರು. ಕೆ.ಆರ್.ಆಸ್ಪತ್ರೆಯಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅದಕ್ಕೆ ಪ್ರತ್ಯೇಕ ಘಟಕ ಇಲ್ಲ ಎಂದು ಅಧಿಕಾರಿಗಳು ಹೇಳಿದರು.

ಕೂಡಲೇ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಪಿ.ಕೆ.ಟಿ.ಬಿ. ಆಸ್ಪತ್ರೆ ಆವರಣದಲ್ಲೇ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವಂತೆ ಇಲ್ಲಿಯೂ ಕಿದ್ವಾಯ್ ಘಟಕವನ್ನು ಪ್ರಾರಂಭ ಮಾಡುವುದಾಗಿ ಹೇಳಿದರು.

ಮಗನಲ್ಲಿ ಕೇಳಿ ಪಿ.ಟಿ.ಸ್ಕ್ಯಾನ್, ರೋಬೋಟ್ ಸರ್ಜರಿ ಬಗ್ಗೆ ತಿಳಿದು ಕೊಂಡ ಸಿಎಂ

ಆರೋಗ್ಯ ಸೇವೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಷಣ ಮಾಡುತ್ತಿದ್ದರು. ಆ ವೇಳೆ ಪಿ.ಟಿ.ಸ್ಕ್ಯಾನ್ ಗೆ 15 ಕೋಟಿ ರೂ. ನೀಡಿರುವುದಾಗಿ ಹೇಳುತ್ತಿದ್ದರು. ಈ ವೇಳೆ ಪಿ.ಟಿ.ಸ್ಕ್ಯಾನ್ ಎಂದರೆ ಏನು ಎಂದು ಕೇಳಿದರು. ಅದಕ್ಕೆ ಸರಿಯಾದ ಉತ್ತರ ಸಿಗಲಿಲ್ಲ. ಏಯ್, ಡಿ.ಎಚ್.ಓ ಏನಯ್ಯಾ ಪಿ.ಟಿ.ಸ್ಕ್ಯಾನ್ ಎಂದರೆ ಏನು ಎಂದು ಕೇಳಿದರು. ತಕ್ಷಣ ವೇದಿಕೆಯ ಮೇಲಿದ್ದ ಡಿ.ಎಚ್.ಓ ಹಾದಿಯಾಗಿ ನೆಪ್ರೋಲಜಿ ನಿರ್ದೇಶಕ, ಪಿ.ಕೆ.ಟಿ.ಬಿ ಆಸ್ಪತ್ರೆಯ ಸೂಪರಿಂಟೆಂಡೆಂಟ್, ಕೆ.ಆರ್.ಆಸ್ಪತ್ರೆಯ ಡೀನ್ ವಿವರಿಸಲು ಮುಂದಾದರು. ಆಗ ತಕ್ಷಣ ತನ್ನ ಮಗನ ಕುರಿತು ಏಯ್ ಯತೀಂದ್ರ... ಪಿ.ಟಿ.ಸ್ಕ್ಯಾನ್ ಎಂದರೆ ಏನು ಎಂದು ಕೇಳಿದರು. ಆಗ ತಕ್ಷಣ ಯತೀಂದ್ರ ಹತ್ತಿರಕ್ಕೆ ಬಂದು ಪಿ.ಟಿ.ಸ್ಕ್ಯಾನ್ ಹಾಗೂ ರೋಬೋಟ್ ಸರ್ಜರಿ ಬಗ್ಗೆ ವಿವರಿಸಿದರು.

ನಂತರ ಮಾತನಾಡಿದ ಸಿಎಂ. ಆರೋಗ್ಯದ ಉಪಕರಣದ ಬಗ್ಗೆ ನನಗೆ ಅಷ್ಟಾಗಿ ಗೊತ್ತಿಲ್ಲ. ನನ್ನ ಮಗ ವೈದ್ಯ. ಆರೋಗ್ಯದ ಬಗ್ಗೆ ಆತನಿಗೆ ಗೊತ್ತು. ಆತನ ಬಳಿ ಕೇಳಿ ತಿಳಿದುಕೊಳ್ಳುತ್ತೇನೆ ಎಂದ ಅವರು, ಪಿ.ಟಿ.ಸ್ಕ್ಯಾನ್ ಎಂದರೆ ಯಾವ ವ್ಯಕ್ತಿಗಾದರೂ ಕ್ಯಾನ್ಸರ್ ಇದ್ದರೆ ಮುಂಚಿತವಾಗೇ ಅದು ಪತ್ತೆ ಮಾಡುತ್ತದೆ. ಮತ್ತೆ ರೋಬೋಟ್ ಸರ್ಜರಿ ಎಂದರೆ ಮನುಷ್ಯ ಶಸ್ತ್ರ ಚಿಕಿತ್ಸೆಗೆ ಒಳಗಾದರೆ ರಕ್ತಸ್ರಾವವಾಗುತಿತ್ತು, ಈ ಉಪಕರಣದಿಂದ ರಕ್ತಸ್ರಾವವನ್ನು ತಡೆಯ ಬಹುದು ಎಂದು ಸಿದ್ದರಾಮಯ್ಯ ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News