ಗಾಂಧಿ ಕೊಂದ ಪರಿವಾರದವರ ಆರ್ಭಟ ಅಪಾಯಕಾರಿ: ಸಿಎಂ ಸಿದ್ದರಾಮಯ್ಯ

Update: 2018-03-10 15:14 GMT

ಮೈಸೂರು,ಮಾ.10: ಗಾಂಧಿ ಕೊಂದ ಪರಿವಾರದವರು ಆರ್ಭಟಿಸುತ್ತಿದ್ದಾರೆ. ಅದು ಅತ್ಯಂತ ಅಪಾಯಕಾರಿ ಎಂಬುದನ್ನು ಅರಿಯದಿದ್ದರೆ ಸಮಾಜ ಮುಂದೆ ಹೋಗುವ ಬದಲು ಹಿಂದಕ್ಕೆ ಹೋಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

ಅರವಿಂದ ನಗರದ ಈಶ್ವರ ದೇವಸ್ಥಾನದ ಸಮೀಪ ಶನಿವಾರ ಗಾಂಧಿ ವಿಚಾರ ಪರಿಷತ್ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದ ನಂತರ ಮಾತನಾಡಿದ ಅವರು, ಬಸವಣ್ಣ, ಬುದ್ಧ, ಗಾಂಧೀಜಿ ಅವರು ಸಮ ಸಮಾಜ, ಸಹನೆ, ಪ್ರೀತಿಯ ಸಮಾಜ ನಿರ್ಮಾಣದ ಕನಸು ಕಂಡಿದ್ದರು. ಆದರೆ, ಕೆಲವರಿಂದ ಇವತ್ತು ಯುವಕರ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಲಜ್ಜೆಗೆಟ್ಟು ಬಹಿರಂಗವಾಗಿ ಅಸಹಿಷ್ಣುತೆ, ಅಸಹನೆ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇಂತಹ ಸಂದರ್ಭದಲ್ಲಿ ಗಾಂಧಿ ವಿಚಾರಧಾರೆ ಹೆಚ್ಚು ಪ್ರಸ್ತುತವಾಗಿದೆ. ಗಾಂಧಿ ವಿಚಾರ ಪರಿಷತ್ ಭವನದಲ್ಲಿ ಈ ಸಂಬಂಧ ಯುವಕರನ್ನು ಜಾಗೃತಿಗೊಳಿಸುವ ಅವಶ್ಯಕತೆ ಇದೆ. ನಾವು ಏನೂ ಮಾಡದಿದ್ದರೂ ಮನುಷ್ಯರನ್ನು ಮನುಷ್ಯರಾಗಿ ಪ್ರೀತಿಸುವುದನ್ನು ಕಲಿಸಬೇಕಾಗಿದೆ. ಜಾತಿ, ಮತಭೇದವನ್ನು ಮೀರಿ ಪರಸ್ಪರ ಗೌರವಿಸುವ ತಿಳಿವಳಿಕೆ ನೀಡಿದರೆ ಅದೇ ಸಮಾಜಕ್ಕೆ ದೊಡ್ಡ ಕೊಡುಗೆ ಎಂದರು.

ಜಾತಿ ಒಂದು ರೀತಿ ಅಫೀಮು ಇದ್ದಂತೆ. ಹಿಂದೆ ಹಳ್ಳಿಗಳಲ್ಲಿ ಎಲ್ಲ ಸಮುದಾಯಗಳ ಜನರೂ ಒಟ್ಟಾಗ ಸೇರಿ ಜಾತ್ರೆ ಮಾಡುತ್ತಿದ್ದೆವು. ದೇವಸ್ಥಾನ ಇದ್ದರೆ ಪೂಜೆಗಾದರೂ ಸೇರುತ್ತಿದ್ದರು. ಈಗ ಪ್ರತಿ ಜಾತಿಗೂ ಸಮುದಾಯ ಭವನ ಮಾಡಿಕೊಂಡು ಅಲ್ಲೇ ಬಿದ್ದುಕೊಂಡು ಪ್ರತ್ಯೇಕತೆ ಸಾಧಿಸುತ್ತಿದ್ದಾರೆ ಎಂದು ವಿಷಾದಿಸಿದರು.

ಸಂಪುಟದಿಂದ ಕಿತ್ತು ಹಾಕಬೇಕಿತ್ತು: ಕೇಂದ್ರ ಸಚಿವರೊಬ್ಬರು ಸಂವಿಧಾನ ಬದಲಿಸುವುದೇ ನಮ್ಮ ಸರ್ಕಾರದ ಉದ್ದೇಶ ಎಂದು ಹೇಳುವ ಮೂಲಕ ಪ್ರಜಾತಂತ್ರಕ್ಕೆ ಅಪಚಾರ ಮಾಡಿದ್ದಾರೆ. ಪ್ರಧಾನಿ ಅವರಿಗೆ ಸಂವಿಧಾನದ ಬಗ್ಗೆ ಗೌರವ ಇದ್ದಿದ್ದರೆ ಆ ಸಚಿವರನ್ನು ತಮ್ಮ ಸಂಪುಟದಿಂದ ಕಿತ್ತು ಹಾಕಬೇಕಿತ್ತು ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ಹರಿಹಾಯ್ದರು.

ಗಾಂಧಿ ಭವನಗಳು ವಿಶೇಷವಾಗಿ ಯುವಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಿಷೇಧವಾಗಿದೆ. ಅದರಿಂದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ)ನಂತಹ ಕೋಮುವಾದಿ ಸಂಘಟನೆಗಳು ಪ್ರಬಲವಾಗಿವೆ. ವಿಚಾರವಂತರಿಗೆ ಜೀವಭಯ ಒಡ್ಡುತ್ತಿವೆ. ಜಾತ್ಯತೀತ ತತ್ವದ ಬಗ್ಗೆ ಮಾತನಾಡದಂತೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿವೆ ಎಂದು ಸಿದ್ದರಾಮಯ್ಯ ಹೇಳಿದರು.

ಈಶ್ವರಪ್ಪ ಮೂರ್ಖತನದ ಮಾತು: ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮೂರ್ಖರಂತೆ ಮಾತನಾಡುತ್ತಾರೆ. ನನ್ನ(ಸಿದ್ದರಾಮಯ್ಯ) ಕೊಲೆ ಆಗಬಹುದು. ಕೇಂದ್ರದಿಂದ ಭದ್ರತೆ ಪಡೆಯಲಿ. ನನ್ನ ದೇಹದಲ್ಲಿ ಟಿಪ್ಪು ರಕ್ತ ಹರಿಯುತ್ತಿದೆ ಎಂದು ಅಶ್ಲೀಲವಾಗಿ ಹೇಳುತ್ತಾರೆ. ಆದರೆ, ಸಂಸ್ಕಾರ, ಸಂಸ್ಕೃತಿ ಅಂತ ಭಾಷಣ ಮಾಡುತ್ತಿದ್ದಾರೆ. ಜನರು ಹೇಗೆ ಇವರನ್ನೆಲ್ಲ ಸಹಿಸಿಕೊಳ್ಳುತ್ತಿದ್ದಾರೆ ಗೊತ್ತಿಲ್ಲ ಎಂದರು.

ನಾನು ಇದುವರೆಗೂ ದನದ ಮಾಂಸ ತಿಂದಿಲ್ಲ. ಆದರೆ, ನನಗೆ ತಿನ್ನಬೇಕು ಅನಿಸಿದರೆ ತಿನ್ನುತ್ತೇನೆ. ನೀವೇನು ಕೇಳೋದು ಎಂದು ಯಾವಾಗಲೋ ಹೇಳಿದ್ದೆ. ಅದನ್ನೇ ರಾಜಕೀಯ ವಿರೋಧಿಗಳು ದೊಡ್ಡದು ಮಾಡಿದ್ದಾರೆ. ಗೋವಾ, ಈಶಾನ್ಯ ರಾಜ್ಯಗಳಲ್ಲಿ ಮಾಂಸವನ್ನು ನಿಷೇಧಿಸಿಲ್ಲ. ಗುಜರಾತ್‍ನಲ್ಲಿ ದನದ ಮಾಂಸದ ರಫ್ತಿನಿಂದಲೇ ಹೆಚ್ಚು ಆದಾಯ ಇದೆಯಂತೆ ಎಂದು ತಿಳಿಸಿದರು.

ನಾನೇ ಮತ್ತೆ ಮುಖ್ಯಮಂತ್ರಿ ಆಗಬೇಕು ಅಂತಲ್ಲ, ಆದರೆ, ಸಮಾಜವನ್ನು ದಾರಿ ತಪ್ಪಿಸುತ್ತಿರುವವರ ಕೈಗೆ ಅಧಿಕಾರ ಕೊಡಬಾರದು ಎನ್ನುವುದಷ್ಟೇ ನನ್ನ ಕಾಳಜಿ. ನಾನು ಬಸವಣ್ಣ, ಅಂಬೇಡ್ಕರ್, ಲೋಹಿಯಾವಾದಗಳನ್ನು ಒಪ್ಪುತ್ತೇನೆ. ಆದರೆ ನಾನು ಎಲ್ಲಿಯೂ ಸಮಾಜವಾದಿ ಎಂದು ಹೇಳಿಕೊಂಡಿಲ್ಲ. ದುಬೈ ಸ್ನೇಹಿತ ಡಾ.ವರ್ಮ ಎಂಬಾತ ತಾನು ಕಟ್ಟಿಕೊಂಡಿದ್ದ ವಾಚ್‍ನ್ನು ನನ್ನ ಕೈಗೆ ಕಟ್ಟಿದ್ದ. ಕೆಲ ಸಮಯ ಹಾಕಿಕೊಂಡಿದ್ದೆ. ಅದನ್ನೇ ದೊಡ್ಡದಾಗಿ ಸಮಾಜವಾದಿ ದುಬಾರಿ ಬೆಲೆಯ ವಾಚ್ ಕಟ್ಟಿದ್ದಾರೆ ಎಂದು ಹುಯಿಲೆಬ್ಬಿಸಿದರು ಎಂದು ವ್ಯಂಗ್ಯವಾಡಿದರು.

ಪ.ಮಲ್ಲೇಶ ಅವರ ತಲೆಮಾರಿನ ವಯಸ್ಕರ ಕಾಲ ಮುಗಿದರೆ ಗಾಂಧಿ ವಿಚಾರಗಳು ಇಲ್ಲದಂತಾಗಬಹುದು. ಅದರಿಂದ ಈ ಗಾಂಧಿ ವಿಚಾರ ಪರಿಷತ್ ಭವನ ಗಾಂಧಿ ಅವರ ತತ್ವ, ಸಂದೇಶಗಳನ್ನು ಯುವಕರಿಗೆ ತಲುಪಿಸುವ ಕೇಂದ್ರವಾಗಿ ಮುಂದುವರೆಯಬೇಕು ಎಂದರು.

ಗಾಂಧಿ ವಿಚಾರ ಪರಿಷತ್ ಭವನದ ಕಾರ್ಯಾಧ್ಯಕ್ಷ ಪ.ಮಲ್ಲೇಶ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕಾರ್ಯದರ್ಶಿಗಳಾದ ಸಂಸ್ಕರತಿ ಸುಬ್ರಹ್ಮಣ್ಯ, ಸ.ರ.ಸುದರ್ಶನ, ಶಾಸಕ ಎಂ.ಕೆ.ಸೋಮಶೇಖರ್, ಪ್ರೊ.ಮುಜಾಫರ್ ಅಸ್ಸಾದಿ, ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರೊ.ಸಿ.ಪಿ.ಸಿದ್ದಾಶ್ರಮ, ಪ್ರೊ.ಚ.ಸರ್ವಮಂಗಳ ಬಾಯಿ, ಪ್ರೊ.ವಸಂತಮ್ಮ, ಸಾಹಿತಿ ಹೊರೆಯಾಲ ದೊರೆಸ್ವಾಮಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ಪ್ರೊ.ಶಬ್ಬೀರ್ ಮುಸ್ತಫ, ಆಂದೋಲನ ದಿನಪತ್ರಿಕೆ ಸಂಪಾದಕ ರವಿ ಕೋಟಿ, ಡೈರಿ ವೆಂಕಟೇಶ್, ಈ. ಧನಂಜಯ, ಹಿರಿಯ ಕಲಾವಿದ ಮೈಮ್ ರಮೇಶ್, ರಂಗಾಯಣ ಕಲಾವಿದ ಮಹದೇವ್, ಗೋಪಾಲಕೃಷ್ಣ, ಎನ್.ಎಸ್.ರಂಗರಾಜು, ಎನ್.ಎಸ್.ಗೋಪಿನಾಥ್, ಕೆಪಿಸಿಸಿ ಸದಸ್ಯೆ ಎಸ್.ಎನ್.ವೀಣಾ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಸುಶೀಲಾ ಕೇಶವಮೂರ್ತಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಜೈನಹಳ್ಳಿ ಸತ್ಯನಾರಾಯಣಗೌಡ, ಉಗ್ರನರಸಿಂಹ ಗೌಡ, ಲತಾ ಮೈಸೂರು, ಪ್ರೊ.ಕಾಳಚನ್ನೇಗೌಡ, ಜಿ.ಪಿ.ಬಸವರಾಜು, ಪ್ರೊ.ಕೆ.ಎಸ್.ಜಯರಾಮಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಕಲಾವಿದ ಬಾದಲ್ ನಂಜುಂಡಸ್ವಾಮಿ, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News