ಶಿವಮೊಗ್ಗ ಕಾಂಗ್ರೆಸ್ ಮುಖಂಡನ ಹೆಸರಿನಲ್ಲಿ ನಕಲಿ 'ಫೇಸ್‍ಬುಕ್ ಅಕೌಂಟ್': ಸೈಬರ್ ಕ್ರೈಂ ಪೊಲೀಸರಿಗೆ ದೂರು
ಶಿವಮೊಗ್ಗ, ಮಾ. 10: ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ, 'ಸಾಮಾಜಿಕ ಸಂಪರ್ಕ ಜಾಲತಾಣ'ಗಳು ಅಕ್ಷರಶಃ ರಾಜಕೀಯ ಸಮರಕ್ಕೆ ವೇದಿಕೆಯಾಗಿ ಪರಿಣಮಿಸುತ್ತಿವೆ. ರಾಜಕೀಯ ಪಕ್ಷಗಳು, ನಾಯಕರು, ಕಾರ್ಯಕರ್ತರ ಚಟುವಟಿಕೆ ಸೇರಿದಂತೆ ಆರೋಪ-ಪ್ರತ್ಯಾರೋಪಗಳಿಗೆ 'ಫೇಸ್‍ಬುಕ್', 'ವ್ಯಾಟ್ಸಾಪ್', 'ಟ್ವಿಟರ್' ಮತ್ತೀತರ ಸಾಮಾಜಿಕ ಸಂಪರ್ಕ ಜಾಲತಾಣಗಳು ತತ್‍ಕ್ಷಣದ ಮಾಹಿತಿ ರವಾನೆಯ ಪರಿಣಾಮಕಾರಿ ತಾಣಗಳಾಗಿ ಪರಿವರ್ತಿತವಾಗಿವೆ.
ಈ ನಡುವೆ ಕೆಲ ಕಿಡಿಗೇಡಿಗಳು, ಪ್ರಮುಖ ನಾಯಕರ ಹೆಸರಿನಲ್ಲಿ ಅಥವಾ ಅವರ ಬೆಂಬಲಿಗರ ಹೆಸರಿನಲ್ಲಿ ನಕಲಿ ಅಕೌಂಟ್‍ಗಳನ್ನು ಸೃಷ್ಟಿಸಿ, ಸಂಬಂಧಿಸಿದವರಿಗೆ ಮುಜುಗರ ಸೃಷ್ಟಿಸುವ ಕುಕೃತ್ಯ ನಡೆಸುತ್ತಿರುವ ಮಾಹಿತಿಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಇದಕ್ಕೆ ತಾಜಾ ನಿದರ್ಶನವೆಂಬಂತೆ, ಶಿವಮೊಗ್ಗದಲ್ಲಿ ರಾಜಕೀಯ ಪಕ್ಷದ ನಾಯಕರೊಬ್ಬರ 'ಅಭಿಮಾನಿ ಬಳಗದ' ಹೆಸರಿನಲ್ಲಿ ತೆರೆಯಲಾಗಿರುವ 'ಫೇಸ್‍ಬುಕ್' ಅಕೌಂಟ್ ವಿವಾದಕ್ಕೆ ಕಾರಣವಾಗಿದೆ. ಇದು ನಕಲಿ ಖಾತೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ ಈ ಪ್ರಕರಣ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಏನಿದು ದೂರು?: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸ್ಪರ್ಧಾಕಾಂಕ್ಷಿ, ಯುವ ಮುಖಂಡ 'ಕೆ. ರಂಗನಾಥ್ ಅಭಿಮಾನಿ ಬಳಗ' ಹೆಸರಿನಲ್ಲಿ ಕೆಲವರು ನಕಲಿ 'ಫೇಸ್‍ಬುಕ್' ಅಕೌಂಟ್‍ವೊಂದನ್ನು ತೆರೆದಿರುವ ಆರೋಪ ಇದಾಗಿದೆ. ಈ ಕುರಿತಂತೆ ಸ್ವತಃ ಕೆ. ರಂಗನಾಥ್‍ರವರು ಸೈಬರ್ ಕ್ರೈಂ ಪೊಲೀಸರಿಗೆ ಅಧಿಕೃತವಾಗಿ ದೂರು ಕೂಡ ನೀಡಿದ್ದಾರೆ.
ಕೆ.ರಂಗನಾಥ್‍ರವರ ದೂರು ಸ್ವೀಕರಿಸಿರುವ ಸ್ಥಳೀಯ ಸೈಬರ್ ಕ್ರೈಂ ವಿಭಾಗದ ಪೊಲೀಸರು, ದಾವಣಗೆರೆಯಲ್ಲಿರುವ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ರವಾನಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಸೈಬರ್ ಕ್ರೈಂ ಠಾಣೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆಯೇ ಎನ್ನುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.
ಆರೋಪವೇನು?: 'ತನ್ನ ಹೆಸರು ಮುಂದಿಟ್ಟುಕೊಂಡು ಅಭಿಮಾನಿ ಬಳಗ ಎಂಬ ಹೆಸರಿನ ಫೇಸ್‍ಬುಕ್ ಅಕೌಂಟ್‍ವೊಂದನ್ನು ತೆರೆಯಲಾಗಿದೆ. ಈ ಅಕೌಂಟ್ ತೆರೆದವರು ಯಾರು? ಅವರ ಹಿನ್ನೆಲೆಯೇನು? ಎಲ್ಲಿಯವರು ಎಂಬಿತ್ಯಾದಿ ಯಾವ ವಿವರಗಳು ಗೊತ್ತಿಲ್ಲ. ಫೇಸ್‍ಬುಕ್ ತಾಣದಲ್ಲಿಯೂ ಮಾಹಿತಿ ಮರೆಮಾಚಲಾಗಿದೆ. ತಾನು ಭಾಗವಹಿಸುವ ಸಭೆ, ಸಮಾರಂಭ, ಹೋರಾಟ ಮತ್ತೀತರ ಕಾರ್ಯಕ್ರಮಗಳ ಪ್ರತಿಯೊಂದು ಫೋಟೋ - ವಿವರಗಳನ್ನು ಈ ತಾಣದಲ್ಲಿ ಹಾಕಲಾಗುತ್ತಿದೆ. ಹಾಗೆಯೇ ಸ್ಥಳೀಯ ಕಾಂಗ್ರೆಸ್ ನಾಯಕರ ಫೇಸ್‍ಬುಕ್ ಖಾತೆಗಳಿಗೂ ಟ್ಯಾಗ್ ಮಾಡುತ್ತಿದ್ದಾರೆ. ಈ ರೀತಿಯ ಅಕೌಂಟ್‍ವೊಂದು ಸಕ್ರಿಯವಾಗಿರುವ ಬಗ್ಗೆ ತನಗೆ ಮಾಹಿತಿಯೇ ಇರಲಿಲ್ಲ' ಎಂದು ಕೆ. ರಂಗನಾಥ್ ತಿಳಿಸಿದ್ದಾರೆ.
'ಇತ್ತೀಚೆಗೆ ತಾನು ವಿಧಾನಸಭೆ ಚುನಾವಣೆ ಸ್ಪರ್ಧಾಕಾಂಕ್ಷಿಯಾಗಿದ್ದೇನೆ ಎಂಬ ವಿವರ ಪತ್ರಿಕೆಗಳಲ್ಲಿ ಪ್ರಕಟವಾದ ನಂತರ, ತನ್ನ ಪರವಾಗಿ ಹಾಗೂ ಇತರೆ ನಾಯಕರನ್ನು ಗೇಲಿ ಮಾಡುವ ಆಕ್ಷೇಪಾರ್ಹ ಸಂದೇಶವನ್ನು ಈ ಅಕೌಂಟ್‍ನಲ್ಲಿ ಹಾಕಲಾಗಿದೆ. ಈ ಮೂಲಕ ತನ್ನ ಬಗ್ಗೆ ನಾಯಕರಲ್ಲಿ ತಪ್ಪು ಸಂದೇಶ ರವಾನಿಸುವ ಕೆಲಸ ಮಾಡಲಾಗಿದೆ. ಫೇಸ್‍ಬುಕ್‍ನಲ್ಲಿ ಮಾಹಿತಿ ಗಮನಿಸಿದ ಬೆಂಬಲಿಗರು ತನ್ನ ಗಮನಕ್ಕೆ ಈ ವಿಷಯ ತಂದಿದ್ದರು. ನನ್ನ ಹೆಸರಿನ ಅಭಿಮಾನಿ ಬಳಗದ ಫೇಸ್‍ಬುಕ್ ಅಕೌಂಟ್ ಇಲ್ಲದಿರುವ ವಿಷಯವನ್ನು ಅವರಿಗೆ ತಿಳಿಸಿದ್ದೆ. ತದನಂತರ ಪರಿಶೀಲಿಸಿದಾಗ ಈ ನಕಲಿ ಫೇಸ್‍ಬುಕ್ ಅಕೌಂಟ್ ಕಳೆದ ಹಲವು ತಿಂಗಳುಗಳಿಂದ ಸಕ್ರಿಯವಾಗಿರುವುದು ಬೆಳಕಿಗೆ ಬಂದಿತ್ತು.
ಈ ಹಿನ್ನೆಲೆಯಲ್ಲಿ ತಾನು ಈ ಬಗ್ಗೆ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ. ಹಾಗೆಯೇ ದಾವಣಗೆರೆಯ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿಯೂ ದೂರು ಹಾಗೂ ಈ ಅಕೌಂಟ್ ಬಗ್ಗೆ ಮಾಹಿತಿ ಕೊಟ್ಟಿದ್ದೇನೆ. ಇದರ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವ ಹಾಗೂ ಅಕೌಂಟ್ ಚಾಲನೆ ನಿಷ್ಕ್ರೀಯಗೊಳಿಸಲು ಕ್ರಮಕೈಗೊಳ್ಳುವುದಾಗಿ ಸೈಬರ್ ಕ್ರೈಂ ಪೊಲೀಸರು ಹೇಳಿದ್ದಾರೆ' ಎಂದು ಕೆ.ರಂಗನಾಥ್‍ರವರು ಶನಿವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಅಕೌಂಟ್ ನಿಷ್ಕ್ರೀಯಕ್ಕೆ ಕ್ರಮದ ಭರವಸೆ: ಮುಖಂಡ ಕೆ. ರಂಗನಾಥ್
'ತನ್ನ ಹೆಸರಿನ ಅಭಿಮಾನಿ ಬಳಗದ ಹೆಸರಿನ ಫೇಸ್‍ಬುಕ್ ಅಕೌಂಟ್ ತೆರೆಯಲು ತಮ್ಮದೆ ಹೆಸರಿನ ನಕಲಿ ಜೀಮೇಲ್ ಐಡಿ ಕೂಡ ಸೃಷ್ಟಿಸಿರುವುದು ಕಂಡುಬಂದಿದೆ. ಸಮಗ್ರ ದಾಖಲೆಗಳೊಂದಿಗೆ ಸೈಬರ್ ಕ್ರೈಂ ಪೊಲೀಸರಿಗೆ ಈಗಾಗಲೇ ದೂರು ನೀಡಿದ್ದೇನೆ. ಅವರು ಈ ಅಕೌಂಟ್ ಪರಿಶೀಲನೆ ನಡೆಸಿ, ನಿಷ್ಕ್ರೀಯಗೊಳಿಸಲು ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ತನ್ನ ನಿಜವಾದ ಬೆಂಬಲಿಗರು ಈ ಅಕೌಂಟ್ ತೆರೆದಿಲ್ಲ. ಯಾರೋ ತಮಗಾಗದವರೇ ಈ ಅಕೌಂಟ್ ತೆರೆದಿರುವ ಅನುಮಾನ ಇದೆ. ಪೊಲೀಸರ ತನಿಖೆಯಿಂದ ಸತ್ಯಾಂಶ ಗೊತ್ತಾಗಲಿದೆ' ಎಂದು ಯುವ ಕಾಂಗ್ರೆಸ್ ಮುಖಂಡ ಕೆ. ರಂಗನಾಥ್‍ರವರು ತಿಳಿಸಿದ್ದಾರೆ.
ರಾಜಕೀಯ ಕುತಂತ್ರದ ಹುನ್ನಾರ :
'ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಾದ ಕೆ. ರಂಗನಾಥ್‍ರವರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಉದ್ದೇಶದಿಂದ ಅವರ ಅಭಿಮಾನಿ ಬಳಗದ ಹೆಸರಿನಲ್ಲಿ ಕೆಲವರು ನಕಲಿ ಫೇಸ್‍ಬುಕ್ ಅಕೌಂಟ್ ತೆರೆದಿರುವ ಅನುಮಾನಗಳು ವ್ಯಕ್ತವಾಗುತ್ತಿವೆ. ಇದರಲ್ಲಿ ರಾಜಕೀಯ ಕುತಂತ್ರ ಅಡಗಿರುವ ಹುನ್ನಾರ ಕೂಡ ಕಂಡುಬರುತ್ತಿದೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರು ಉನ್ನತ ಮಟ್ಟದ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು' ಎಂದು ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಆರ್. ಕಿರಣ್‍ರವರು ಒತ್ತಾಯಿಸಿದ್ದಾರೆ.