ಬಸವಣ್ಣನ ವಿಚಾರಧಾರೆಗಳು ಮಾತಿಗೆ ಸೀಮಿತವಾಗದಿರಲಿ: ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

Update: 2018-03-10 15:58 GMT

ಚಿಕ್ಕಮಗಳೂರು, ಮಾ.10: ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸುವ ಭಕ್ತರು ಅಲ್ಲಿನ ವೇದಿಕೆಗಳಲ್ಲಿ ನಡೆಯುವ ತಾರ್ಕಿಕ ವಿಚಾರಗಳನ್ನು ಮನನ ಮಾಡುವುದರ ಜೊತೆಗೆ ಅವುಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತರಳಬಾಳು ಮಠಾಧೀಶ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ಮಾಡಿದರು.

ನಗರ ಹೊರವಲಯದ ವಿರಕ್ತ ಮಠ ಬಸವ ಮಂದಿರದಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಜಯಂತಿ ಮತ್ತು ಶ್ರೀ ಜಯಚಂದ್ರಶೇಖರ ಸ್ವಾಮೀಜಿ ಅವರ ಸ್ಮರಣೋತ್ಸವದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಬಸವತತ್ವ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಧಾರ್ಮಿಕ ಮತ್ತು ತಾರ್ಕಿಕ ವಿಚಾರಗಳು ಇಂದು ವೇದಿಕೆಗೆ ಮಾತ್ರ ಮೀಸಲಾಗಿವೆ. ಇಂದು ಎಲ್ಲಾ ಧಾರ್ಮಿಕ ಆಚರಣೆಗಳು ಕೇವಲ ಉಪಚಾರಕ್ಕೆ ಮತ್ತು ಡಾಂಭಿಕತನಕ್ಕೆ ಬಳಕೆಯಾಗುತ್ತಿವೆಯೇ ಹೊರತು ಬದುಕಿಗೆ ಅಳವಡಿಕೆಯಾಗುತ್ತಿಲ್ಲ ಎಂದು ವಿಷಾದಿಸಿದರು.

ಭಕ್ತಿ ಭಂಡಾರಿ ಬಸವಣ್ಣನವರ ವಚನಗಳು ಎಲ್ಲರಿಗೂ ಗೊತ್ತಿವೆ. ಆದರೆ ಅವರು ಹೇಳಿರುವ ಸಪ್ತಶೀಲಗಳಲ್ಲಿ ಒಂದನ್ನಾದರೂ ಜನ ಅನುಸರಿಸುತ್ತಿಲ್ಲ ಎಂದ ಅವರು, ತಾರ್ಕಿಕ ವಿಚಾರಗಳು ವೇದಿಕೆ ಮಾತ್ರ ಸೀಮಿತವಾಗಬಾರದು. ಅವು ಬದುಕಿನಲ್ಲಿ ಆಚರಣೆಗೆ ಬರಬೇಕು. ಆಚರಣೆಗೆ ಬರದಿದ್ದರೆ ಯಾವ ಭಾಷಣಗಳಿಂದಲೂ ಏನೂ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.

ಭಕ್ತಿ ಭಂಡಾರಿ ಬಸವಣ್ಣನವರ ವಚನಗಳು, ವಿಚಾರಗಳು ಒಂದು ಕಾಲಘಟ್ಟಕ್ಕೆ ಸೀಮಿತವಾದವುಗಳಲ್ಲ ಅವು ಎಲ್ಲಾ ಕಾಲಮಾನಗಳಿಗೂ ಪ್ರಸ್ತುತವಾದ ವಿಚಾರಗಳು ಅವುಗಳನ್ನು ಬದುಕಿನಲ್ಲಿ ಆಚರಣೆಗೆ ತಂದರೆ ಸಮ ಸಮಾಜದ ನಿರ್ಮಾಣವಾಗುತ್ತದೆ ಎಂದರು.

ಶಾಸಕ ಸಿ.ಟಿ.ರವಿ ಮಾತನಾಡಿ ಇಂದಿನ ಪೀಳಿಗೆಗೆ ವ್ಯಾವಹಾರಿಕ ಶಿಕ್ಷಣದ ಜೊತೆಗೆ ಆಧ್ಯಾತ್ಮಿಕ ಮತ್ತು ನೈತಿಕ ಶಿಕ್ಷಣವನ್ನು ನೀಡಬೇಕಾದ ಅಗತ್ಯವಿದೆ ಎಂದರು. 12ನೇ ಶತಮಾನದಲ್ಲಿ ಭಕ್ತಿ ಭಂಡಾರಿ ಬಸವಣ್ಣನವರು ರಚನೆ ಮಾಡಿದ್ದ ಅನುಭವ ಮಂಟಪದ ರೀತಿಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದೇಶದಲ್ಲಿ ಜಾರಿಗೆ ತಂದರೆ ಸ್ಪೃಶ್ಯ, ಅಸ್ಪೃಶ್ಯ, ಜಾತಿ ಪದ್ದತಿ, ಅಸಮಾನತೆ ನಿವಾರಣೆಯಾಗಿ ಸಮ ಸಮಾಜ ರೂಪುಗೊಳ್ಳುತ್ತದೆ ಎಂದರು.

ಇದೇ ವೇಳೆ ಬಸವ ಮಂದಿರದ ವತಿಯಿಂದ ಬೆಳಗಾಂನ ಸಾಹಿತಿ ಸಿದ್ದಣ್ಣ ಲಂಗೋಟಿ ಅವರಿಗೆ ಸಾಧನಾಶ್ರೀ ಮತ್ತು ಕುವೆಂಪು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಚಾರ್ಯ ಡಾ.ಬಸವರಾಜ ನೆಲ್ಲಿಸರ ಅವರಿಗೆ ಅಲ್ಲಮಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಪೃಥ್ವಿ ಮತ್ತು  ಧನ್ಯಾ ಗರ್ಜೆ ಅವರಿಂದ ಭರತನಾಟ್ಯ ಹಾಗೂ ಅಕ್ಕನ ಬಳಗದ ಮಹಿಳೆಯರಿಂದ ವಚನ ಗಾಯನ ಜರುಗಿತು.

ಬಸವತತ್ವ ಪೀಠದ ಸದಸ್ಯ ಕೆ.ಆರ್.ರುದ್ರೇಗೌಡ ಷಟ್‍ಸ್ಥಳ ಧ್ವಜಾರೋಹಣ ನೆರವೇರಿಸಿದರು. ಮಾರಗೊಂಡನಹಳ್ಳಿಯ ಶ್ರೀ ಪ್ರಭು ಚೆನ್ನಬಸವ ಸ್ವಾಮೀಜಿ, ಪಾಂಡುಮಟ್ಟಿ ಮಠದ ಶ್ರೀ ಗುರುಬಸವ ಸ್ವಾಮೀಜಿ, ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಜೆಡಿಎಸ್ ಅಭ್ಯರ್ಥಿ ಬಿ.ಹೆಚ್.ಹರೀಶ್, ಜಿ.ಪಂ. ಸದಸ್ಯ ಸೋಮಶೇಖರ್, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಡಿ.ತಮ್ಮಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News