×
Ad

ಚುನಾವಣೆ ವೇಳೆ ನನ್ನ ಮೇಲೆ ಇಲ್ಲಸಲ್ಲದ ಆರೋಪ: ಹೆಚ್.ಕೆ. ಕುಮಾರಸ್ವಾಮಿ

Update: 2018-03-10 21:34 IST

ಹಾಸನ,ಮಾ.10: ಚುನಾವಣೆ ಸಮೀಪವಿರುವಂತೆ ರಾಜಕೀಯ ಪಿತೂರಿ ಮಾಡಿ ನನ್ನ ಮೇಲೆ ಭೂ ಕಬಳಿಕೆಯ ಆರೋಪ ಮಾಡಿದ್ದು, ಇದು ಸಂಪೂರ್ಣ ಸುಳ್ಳು ಎಂದು ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಹೆಚ್.ಕೆ. ಕುಮಾರಸ್ವಾಮಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಆಲೂರು ತಾಲೂಕಿನ ಕೆ. ಹೊಸಕೋಟೆ ಹೋಬಳಿಯ ಹಳ್ಳಿಯೂರು ಗ್ರಾಮದಲ್ಲಿ ಸರ್ವೆ ನಂ.62ರಲ್ಲಿ 10 ಎಕರೆ ಭೂಮಿ ನಾನು ವಕೀಲನಾಗಿದ್ದಾಗ (1982ರಲ್ಲಿ) ಭೂಮಿ ಮಂಜೂರಾಗಿದೆ. ನಂತರ ಬೇಲೂರು ಶಾಸಕನಾಗಿದ್ದಾಗ 1986-87ರಲ್ಲಿ ಹಕ್ಕು ಪತ್ರವನ್ನು ಪಡೆದಿದ್ದೇನೆ. ನಾನು ಯಾವುದೇ ರೀತಿಯ ಸುಳ್ಳು ದಾಖಲೆಗಳನ್ನು ನೀಡಿ, ಅಧಿಕಾರಿಗಳ ಮೇಲೆ ಪ್ರಭಾವವನ್ನುಬೀರಿ ಭೂಮಿಯನ್ನು ಮಂಜೂರು ಮಾಡಿಸಿಕೊಂಡಿಲ್ಲ ಎಂದರು.

ಇದರ ಜೊತೆಗೆ ಶಾಸಕರ ತಂಗಿ ಮಹದೇವಮ್ಮ  ಹಾಗೂ ಅವರ ಸಂಬಂದ ದ್ಯಾವಮ್ಮ ಎಂಬುವರಿಗೆ ಕಾನೂನು ಬಾಹಿರವಾಗಿ ಮಂಜೂರು ಮಾಡಿಸಿಕೊಂಡಿದ್ದಾರೆ ಅನ್ನೋದು ಸಹ ಸುಳ್ಳು. ಅವರಿಗೆ ಕಾನೂನು ಬದ್ಧವಾಗಿಯೇ ಮಂಜೂರಾಗಿದೆ ಅಷ್ಟೇ ಎಂದು ಹೇಳಿದರು. ಆದರೆ ಸುಳ್ಳು ದಾಖಲೆ ನೀಡಿ ಸರ್ಕಾರದಿಂದ ಭೂಮಿ ಮಂಜೂರು ಮಾಡಿಸಿಕೊಂಡಿರುವುದಲ್ಲದೇ, ಅಕ್ಕ ಪಕ್ಕದ ಬಡವರಿಗೆ ಮಂಜೂರಾಗಿದ್ದ ಭೂಮಿಯನ್ನು ಸಹ ಒತ್ತುವರಿ ಮಾಡಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಡಿ.ಸಿ. ಸಣ್ಣಸ್ವಾಮಿ ಮಾಡಿರುವ ಆರೋಪ ಸುಳ್ಳಾಗಿದೆ ಎಂದರು.

ನಮಗೆ ಮಂಜೂರಾಗಿರುವ ಭೂಮಿಯು ಸಂಪೂರ್ಣವಾಗಿ ಗುಡ್ಡ ಪ್ರದೇಶವಾಗಿದ್ದರಿಂದ ನಾವು 12 ವರ್ಷಗಳ ಕಾಲ ಉಳುಮೆಯನ್ನು ಮಾಡಿರಲಿಲ್ಲ. ನಂತರ ನಾನು ಉಳುಮೆ ಮಾಡಿಸಲು ಪ್ರಾರಂಭಿಸಿದ್ದೇನೆ. ಅಕ್ಕಪಕ್ಕದ ಬಡವರ ಜಮೀನನ್ನು ನಾನು ಹೆದರಿಸಿ, ಬೆದರಿಸಿ ಭೂಮಿಯನ್ನು ಒತ್ತುವರಿ ಮಾಡಿಲ್ಲ ಎಂದು ಸ್ವಷ್ಟಪಡಿಸಿದರು. ಚುನಾವಣೆಯ ಸಂದರ್ಭದಲ್ಲಿ ಸುಳ್ಳು ಆರೋಪಗಳನ್ನು ಮಾಡಿ ತೊಂದರೆ ಕೊಡುವುದಕ್ಕಾಗಿ ತಮ್ಮ ವಿರುದ್ಧ ರಾಜಕೀಯ ಪಿತೂರಿಯನ್ನು ನಡೆಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ಮತ್ತು ಬಳ್ಳಾರಿಯ ಸಂಸ್ಕೃತಿ ಈಗ ಸಕಲೇಶಪುರದಲ್ಲೂ ವ್ಯಾಪಿಸಿದೆ. ಯುವಕರನ್ನು ದಾರಿತಪ್ಪಿಸಲು ಪ್ರತಿ ಹಳ್ಳಿಗಳಿಗೂ ತೆರಳಿ ಹಣ ಮತ್ತು ಹೆಂಡವನ್ನು ಹಂಚಲಾಗುತ್ತಿದೆ ಎಂದು ದೂರಿದರು. ನಾರ್ವೆ ಸೋಮಶೇಖರ್ ಎಂಬುವರು ಪ್ರತಿ ಹಳ್ಳಿಯಲ್ಲಿ ದೇವಾಲಯದ ಜೀಣೋದ್ದಾರಕ್ಕೆ ಹಣ ನೀಡುವುದು, 40 ಕಡೆ ಕೊಳವೆ ಬಾವಿ ಕೊರೆಸಿರುವ ವಿಚಾರ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರೂ ಸಹ ಯಾಕಾಗಿ ಕಣ್ಮುಚ್ಚಿ ಕುಳಿತಿದೆ ಎಂದು ಪ್ರಶ್ನೆ ಮಾಡಿದರು.

ಅರ್ಧ ಡಜನ್ ಗನ್ ಮ್ಯಾನ್‍ಗಳನ್ನು ತನ್ನ ಜೊತೆಗೆ ಇಟ್ಟುಕೊಂಡು ತಿರುಗಾಡುವಂತ ಇವರು ಕ್ಷೇತ್ರದ ಜನತೆಗೆ ಯಾವ ರೀತಿಯ ರಕ್ಷಣೆಯನ್ನು ನೀಡಬಹುದು? ಸಕಲೇಶಪುರ-ಆಲೂರು ವಿಧಾನಸಭಾ ಕ್ಷೇತ್ರವು ಈ ಬಾರಿ ಸೂಕ್ಷ್ಮವಾಗಿರುವುದರಿಂದ ಮತದಾರರನ್ನು ಹೆದರಿಸುವಂತಹ ಬೆಳವಣಿಗೆಗಳು ನಡೆಯುವ ಸಾಧ್ಯತೆ ಹೆಚ್ಚಿದೆ. ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುತ್ತದೆ ಮತ್ತು ಮತದಾರರು ಭಯವಿಲ್ಲದೆ ಮತ ಹಾಕಲು ಕೂಡಲೇ ಕ್ಷೇತ್ರದಲ್ಲಿ ವಿಶೇಷ ಕಣ್ಗಾವಲು ಅಧಿಕಾರಿಯನ್ನು ನೇಮಿಸುವಂತೆ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಪುರುಷೋತ್ತಮ್, ಹಳ್ಳಿಯೂರು ಗ್ರಾಮಸ್ಥರಾದ ಗಂಗಬಸವಯ್ಯ, ಗ್ರಾಪಂ ಮಾಜಿ ಸದಸ್ಯ ದೊಡ್ಡಯ್ಯ, ಗ್ರಾಪಂ ಸದಸ್ಯ ವಿಜಯಕುಮಾರ್ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News