ತುಮಕೂರು: ಬೆಂಕಿಯ ಬಲೆ ಪತ್ರಿಕೆಯ 14ನೇ ವಾರ್ಷಿಕೋತ್ಸವ ವಿಶೇಷಾಂಕ ಬಿಡುಗಡೆ ಕಾರ್ಯಕ್ರಮ
ತುಮಕೂರು,ಮಾ.10: ಪ್ರಸ್ತುತ ದಿನಮಾನಗಳಲ್ಲಿ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಎನ್ನುವುದು ನಿರೀಕ್ಷೆಗೂ ಮೀರಿ ಬೆಳೆಯುತ್ತಿದ್ದು,ಅದರಲ್ಲಿಯೂ ಮಾಧ್ಯಮ ಕ್ಷೇತ್ರದಲ್ಲಿ ತುಸು ಹೆಚ್ಚಾಗಿಯೇ ಇದೆ. ಸ್ಪರ್ಧೆಯಲ್ಲಿ ಉಳಿಯಬೇಕಾದರೆ ಗಟ್ಟಿತನ ಮುಖ್ಯ ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್ ರಾಜ್ ತಿಳಿಸಿದ್ದಾರೆ.
ನಗರದ ಕೆ.ಇ.ಬಿ.ಇಂಜಿನಿಯರ್ಸ್ ಅಸೋಸಿಯೇಷನ್ ಹಾಲ್‍ನಲ್ಲಿ ನಡೆದ ಬೆಂಕಿಯ ಬಲೆ ಪತ್ರಿಕೆಯ 14ನೇ ವಾರ್ಷಿಕೋತ್ಸವ ವಿಶೇಷಾಂಕ ಬಿಡುಗಡೆ ಮಾಡಿ ಮಾತನಾಡುತಿದ್ದ ಅವರು, ಇಂದು ಪ್ರತಿಯೊಬ್ಬ ಎಲ್ಲಾ ಕ್ಷೇತ್ರಗಳನ್ನು ವಿಮರ್ಶಿಸುವಂತಹ ಹಾಗೂ ಪ್ರಶ್ನೆ ಮಾಡುವಂತಹ ಮನೋಭಾವವನ್ನು ಬೆಳಸಿಕೊಳ್ಳಬೇಕು, ಇಂದು ಸುದ್ದಿ ಮಾಧ್ಯಮಗಳು ಕೂಡ ವಿಮರ್ಶೆಗೆ ಒಳಪಡುತ್ತಿವೆ ಎಂದರು.
ನಾವುಗಳು ಮಾನವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ದೇಶದಲ್ಲಿ ತಲೆದೂರಿರುವ ಅನೇಕ ಜ್ವಲಂತ ಸಮಸ್ಯೆಗಳಿಗೆ ಇತಿಶ್ರೀ ಹಾಡಬಹುದು. ಹೀಗಾಗಿ ಮಾನವ ಸಂಪನ್ಮೂಲ ಬಳಕೆಯನ್ನು ಯಾವ ರೀತಿ ಉಪಯೋಗಿಸಿ ಕೊಳ್ಳಬೇಕೆಂಬುದನ್ನು ಪ್ರತಿಯೊಬ್ಬರು ತಿಳಿಯಬೇಕಿದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಪತ್ರಿಕಾ ರಂಗ ಹುಟ್ಟಿರುವುದನ್ನು ನೋಡಬಹುದು. ಆದರೆ ಅಂದು ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಹುಟ್ಟಿದ ಪತ್ರಿಕಾರಂಗ ಇಂದು ವ್ಯಾಪಾರೀಕರಣವಾಗಿ ಬೆಳೆದಿರುವುದು ದುರಂತ ಎಂದು ಜಿಲ್ಲಾಧಿಕಾರಿಗಳು ನುಡಿದರು.
ಹಿರೇಮಠದ ವ್ಮಠಾಧ್ಯಕ್ಷರಾದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ, ಬೆಂಕಿಯ ಬಲೆ ಪತ್ರಿಕೆಯು ಸಾಮಾಜಿಕ ನ್ಯಾಯ ಒದಗಿಸಿ ಕೊಡುವ ನಿಟ್ಟಿನಲ್ಲಿ ಕಳೆದ 14 ವರ್ಷಗಳಿಂದಲೂ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದು, ಇದೀಗ ಮುಂದು ಎನ್ನುವ ರೀತಿಯಲ್ಲಿ ತನ್ನ ವಾರ್ಷಿಕೋತ್ಸವದ ಸವಿ ನೆನಪಿಗಾಗಿ ರಾಜ್ಯಮಟ್ಟದ ಯುವ ಕವಿ ಕಾವ್ಯ ಮೇಳವನ್ನು ಹಾಗೂ ಅನಾಥ ಮತ್ತು ಬಡ ಮಕ್ಕಳಿಗೆ ಉಚಿತ ವಸ್ತ್ರ ವಿತರಣೆ ಸಮಾರಂಭವನ್ನು ಹಮ್ಮಿಕೊಂಡು ಸಮಾಜಮುಖಿಯಾಗಿ ತನ್ನನ್ನು ತಾನು ತೆರೆದುಕೊಳ್ಳುತ್ತಿದೆ. ಪಕ್ಷಾತೀತವಾಗಿ ನಿರಂತರ ಸೇವೆಸಲ್ಲಿಸುತ್ತಾ, ಸಮಾಜದ ಅಂಕುಡೊಂಕುಗಳ ಬಗ್ಗೆ ಬೆಳಕು ಚೆಲ್ಲುತ್ತಾ ಸಾಮಾಜಿಕ ಪಿಡುಗಗಳು ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ವಿಮರ್ಶಕ ಡಾ.ರವಿಕುಮಾರ್ ನೀಹ ಮಾತನಾಡಿ, ಕಾವ್ಯವೆಂಬುದು ಕೇವಲ ಪ್ರಕೃತಿಯ ಸೌಂದರ್ಯದ ವರ್ಣಣೆ ಅಲ್ಲ ಅಥವಾ ಕ್ರೌರ್ಯದ ವರ್ಣನೆಯೂ ಅಲ್ಲ. ಮಾನವೀಯತೆ, ಮನುಷ್ಯತ್ವ, ನಂಬಿಕೆಗಳ ಸಂಬಂಧಗಳ ಪ್ರಸ್ತುತತೆಯ ವರ್ಣನೆ ಕಾವ್ಯ ರೂಪವಾಗಿ ಹೊರಹೊಮ್ಮಿದಾಗ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ. ಆದರೆ ಇಂದು ಎಡ ಹಾಗೂ ಬಲ ಎನ್ನುವ ತಾರತಮ್ಯದಿಂದಾಗಿ ಸಮಾಜದಲ್ಲಿ ಮಾನವ ಸಂಬಂಧಗಳ ಸ್ವಾಸ್ಥ್ಯ ಹಾಳಾಗುತ್ತಿದ್ದು, ಸಾಹಿತಿಯಾದವನು ಜಾತಿ ಮೀರಿ ತನ್ನ ಬರವಣಿಗೆಯ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಬೆಟ್ಟದಹಳ್ಳಿ ಗವಿಮಠದ ಶ್ರೀಚಂದ್ರಶೇಖರ್ ಮಹಾಸ್ವಾಮೀಜಿ ಮಾತನಾಡಿ, ಸುದ್ದಿ ಮಾಧ್ಯಮಗಳು ಮತ್ತು ಪತ್ರಿಕೆಗಳು ಇಲ್ಲದೆ ಹೋಗಿದ್ದರೆ ಸಮಾಜ ದಾರಿತಪ್ಪಿ ಹೋಗುತ್ತಿತ್ತು. ಆದರೆ ಅದಕ್ಕೆಲ್ಲ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಾಧ್ಯಮ ರಂಗ ಸದಾ ಜಾಗೃತವಾಗಿ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಸಿದ್ದರಾಜು, ಕೆಐಎಡಿಬಿ ಕಾರ್ಯದರ್ಶಿ ಮುದ್ದುಕುಮಾರ್, ಸಂಯುಕ್ತ ಕರ್ನಾಟಕದ ಉಪಸಂಪಾದಕ ಇಂದ್ರಕುಮಾರ್, ಕಾರ್ಯನಿರತ ಪತ್ರಕರ್ತರ ಸಂಘದ ಪ್ರದಾನ ಕಾರ್ಯದರ್ಶಿ ಪಿ.ಡಿ.ಈರಣ್ಣ, ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತಿ ನಾಗಪ್ಪ, ಪತ್ರಿಕೆಯ ಸಂಪಾದಕರಾದ ಎ.ಎನ್.ಧನಂಜಯ, ಸಿರಿವರ ಶಿವರಾಮಯ್ಯ ಮತ್ತಿತರಿದ್ದರು