×
Ad

ಗ್ರಾಮಗಳ ಅಭಿವೃದ್ದಿಯಿಂದ ದೇಶದ ಅಭಿವೃದ್ದಿ: ಶಾಸಕ ಸಿ.ಪುಟ್ಟರಂಗಶೆಟ್ಟಿ

Update: 2018-03-10 23:12 IST

ಚಾಮರಾಜನಗರ,ಮಾ.10: ಗ್ರಾಮಗಳು ಸರ್ವತೋಮುಖ ಅಭಿವೃದ್ದಿ ಹೊಂದುವುದು ದೇಶದ ಪ್ರಗತಿಯ ಸಂಕೇತವಾಗಿದ್ದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಜನಪರಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ಅವರು ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆಯಾದ ಮಾದಲವಾಡಿ ಗ್ರಾಮದಲ್ಲಿ 1 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಮಾದಲವಾಡಿ ಮಾದರಿ ಗ್ರಾಮವನ್ನಾಗಿ ಮಾಡಲು ಈ ಸರ್ಕಾರ 1 ಕೋಟಿ ರೂಗಳನ್ನು ನೀಡಿದ್ದು, ಈ ಮೂಲಕ ಗ್ರಾಮಕ್ಕೆ ಬೇಕಾದ ರಸ್ತೆ, ಚಂರಡಿ, ಕುಡಿಯುವ ನೀರು ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯ ಕಲ್ಪಿಸಲು ಹೆಚ್ಚು ಒತ್ತು ನೀಡಿದೆ. ಗ್ರಾಮಸ್ಥರೇ ನಿಂತು ನಿಮ್ಮ ಗ್ರಾಮವನ್ನು ಅಭಿವೃದ್ದಿ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಗ್ರಾಮಗಳು ವಿಕಾಸವಾಗಬೇಕಾದರೆ ಮೊದಲು ಉತ್ತಮ ಓಡಾಟಕ್ಕೆ ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವ ನೀರಿನ ಸೌಲಭ್ಯಗಳು ಅಗತ್ಯವಾಗಿದ್ದು, ಜನಪ್ರತಿನಿಧಿಗಳಾದ ನಮ್ಮ ಕೆಲಸ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿ ಅಭಿವೃದ್ದಿಗೊಳಿಸುವುದೇ ಆಗಿದೆ. ಈ ನಿಟ್ಟಿನಲ್ಲಿ ಗ್ರಾ.ಪಂ, ತಾ.ಪಂ. ಹಾಗೂ ಜಿ.ಪಂ ಚುನಾಯಿತ ಪ್ರತಿನಿಧಿಗಳು ತಳಮಟ್ಟದಿಂದ ಗ್ರಾಮಗಳಿಗೆ ಬೇಕಾದ ಸೌಲಭ್ಯ ಕಲ್ಪಿಸಲು ಪಕ್ಷಾತೀತವಾಗಿ ದುಡಿಯಬೇಕೆಂದು ಸಲಹೆ ನೀಡಿದರು.

ತಮ್ಮ 10 ವರ್ಷಗಳ ಶಾಸಕರ ಅವಧಿಯಲ್ಲಿ ಸಾಮಾಜಿಕ ಬದ್ದತೆಯಿಂದ ಕಾರ್ಯನಿರ್ವಹಿಸಿದ್ದು, ಸಮಾನತೆಯಿಂದ 150 ಕೂ ಹೆಚ್ಚು ಸಮುದಾಯ ಭವನಗಳು ಬಡವರು, ಶೋಷಿತರಿಗೆ ಆಶ್ರಯ ಮನೆಗಳನ್ನು ಕಲ್ಪಿಸಿದೆ. ಬಹುವರ್ಷಗಳಿಂದ ಭೂಮಿಯನ್ನೇ ನಂಬಿ ಸಾಗುವಳಿ ಮಾಡುತ್ತಿದ್ದ 2150 ಕ್ರಮ ಬದ್ದವಾಗಿ ಬಗರ್ ಹುಕುಂ ಸಾಗುವಳಿದಾರಿಗೆ ಚೀಟಿ ಹಾಗೂ ಆರ್ ಟಿಸಿ ವಿತರಿಸಿ ಅವರ ಕಲ್ಯಾಣಕ್ಕೆ ಶ್ರಮಿಸಿದ್ದೇನೆ. ಬಡವರ, ಶ್ರಮಿಕರಿಗೆ ಅನುಕೂಲ ಕಲ್ಪಿಸಿದ್ದು ಸರ್ಕಾರದಿಂದ ನೂರಾರು ಕೋಟಿ ಅನುದಾನ ತಂದು ತಮ್ಮ  ಕ್ಷೇತ್ರ ವ್ಯಾಪ್ತಿಯ ಅಭಿವೃದ್ದಿಗೆ ಪ್ರಾಮಾಣಿಕವಾಗಿ ದುಡಿಯುತ್ತಿರುವುದಾಗಿ ಶಾಸಕರು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲೆಯ ಅಭಿವೃದ್ದಿಗೆ ಹೆಚ್ಚು ಅನುದಾನ ಕಲ್ಪಿಸಿದ್ದು, ಈ ಮೂಲಕ ಜಿಲ್ಲೆಯ ಸರ್ವತೋಮುಖ ಬೆಳವಣಿಗೆಗೆ ಮುನ್ನುಡಿ ಬರೆದಿದ್ದಾರೆ. ಬಡವರ, ನೊಂದವರ, ರೈತರ, ಪರವಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ದಿಯಲ್ಲಿ 2ನೇ ದೇವರಾಜ ಅರಸು ಅಗಿದ್ದು, ಸಾಮಾಜಿಕ ನ್ಯಾಯದಡಿ ಎಲ್ಲಾ ವರ್ಗಗಳ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿದ್ದಾರೆಂದು ತಿಳಿಸಿದರು.

ಸರ್ಕಾರ ಪ್ರತಿಯೊಂದು ಸೌಲಭ್ಯವು ಸಮಾಜದ ಕಟ್ಟ ಕಡೆ ವ್ಯಕ್ತಿಗೂ ತಲುಪಬೇಕಾದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿಸ್ವಾರ್ಥದಿಂದ ದುಡಿದರೆ ಮಾತ್ರ ಗ್ರಾಮಗಳ ಕಲ್ಯಾಣ ಸಾಧ್ಯವಾಗಿ ಗಾಂಧಿ ಕಂಡ ರಾಮರಾಜ್ಯ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.

ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ವಿಶೇಷ ಘಟಕ, ಎಸ್‍ಇಪಿ, ಟಿಎಸ್‍ಪಿ ಸೇರಿದಂತೆ ವಿವಿಧ ಯೋಜನೆಯಡಿ ಪ್ರತಿಯೊಂದು ವಾರ್ಡ್ ಹಾಗೂ ಗ್ರಾಮಗಳ ಬೀದಿಗಳಲ್ಲಿ ಸುಸಜ್ಜಿತ ರಸ್ತೆ, ಚರಂಡಿ ನಿರ್ಮಿಸಲಾಗಿದ್ದು ಕೆಲವೊಂದು ಪ್ರಗತಿಯಲ್ಲಿದೆ. ಅಗತ್ಯವಿರುವ ಕಡೆ ನಾಗರಿಕರಿಗೆ ಬೇಕಾದ ಸೌಲಭ್ಯಗಳ ಕುರಿತು ತಮ್ಮ ಗಮನಕ್ಕೆ ತಂದರೆ ಅಗತ್ಯವಾಗಿ ಸೂಕ್ತ ಸೌಲಭ್ಯ ಕಲ್ಪಿಸುವುದಾಗಿ ಶಾಸಕರು ತಿಳಿಸಿದರು.

ಇದೇ ಸಂದರ್ಭದಲ್ಲಿ ದೇವಲಾಪುರ ಗ್ರಾಮದಲ್ಲಿ ಶಾಸಕರ ಅನುದಾನ 5 ಲಕ್ಷರೂ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ 12 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಸಮುದಾಯ ಭವನ ಕಾಮಗಾರಿಗೆ ಶಾಸಕರು ಗುದ್ದಲಿಪೂಜೆ ನೆರೆವೇರಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಶಶಿಕಲಾ ಸೋಮಲಿಂಗಪ್ಪ, ತಾ.ಪಂ ಸದಸ್ಯೆ ದೊಡ್ಡಮ್ಮ, ಗ್ರಾ.ಪಂ ಅಧ್ಯಕ್ಷ ಮಹದೇವಮ್ಮ, ಉಪಾಧ್ಯಕ್ಷೆ ಚನ್ನಮ್ಮ, ಗ್ರಾ.ಪಂ ಸದಸ್ಯರುಗಳು, ಗ್ರಾಮದ ಮುಖಂಡರುಗಳು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News